ತಾಂತ್ರಿಕ ಕಾರಣಗಳಿಗೆ ಕಾರ್ಮಿಕರ ಕಾನೂನಾತ್ಮಕ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಸಹಿ ಇಲ್ಲದ ಕಾರಣಕ್ಕೆ ವೇತನ ಪಾವತಿ ಕೋರಿ ಸಲ್ಲಿಸಿರುವ ಅರ್ಜಿ ವಜಾಗೊಳಿಸಿದ ಕಾರ್ಮಿಕ ಆಯುಕ್ತರ ಆದೇಶ ರದ್ದುಪಡಿಸಿದೆ.
ಇದೇ ವೇಳೆ ಕಾರ್ಮಿಕ ಮಹಿಳೆಯು ವೇತನ ಪಾವತಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ತಕರಾರು ಅರ್ಜಿಯಲ್ಲಿ ಸಹಿ ಮಾಡಲು ಅವಕಾಶ ನೀಡಬೇಕು. ನಂತರದ 6 ತಿಂಗಳಲ್ಲಿ ಅರ್ಜಿಯನ್ನು ಮರು ವಿಚಾರಣೆ ಮಾಡಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಮೈಸೂರಿನ ಸಹಾಯಕ ಕಾರ್ಮಿಕ ಆಯುಕ್ತರಿಗೆ ನಿರ್ದೇಶಿಸಿದೆ.
ಹಿನ್ನೆಲೆ: ಮೈಸೂರಿನ ಕಲ್ಲೂರು ಯಡಹಳ್ಳಿ ನಿವಾಸಿಗಳಾದ ಪಾರ್ವತಮ್ಮ ಮತ್ತವರ ಪತಿ ಕೃಷ್ಣೇಗೌಡ ಅರಣ್ಯ ಮತ್ತು ಪರಿಸರ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ಮಾಡಿದ್ದರು. ಆದರೆ, ಮೈಸೂರಿನ ಸಾಮಾಜಿಕ ಅರಣ್ಯ ವಿಭಾಗದ ರೇಂಜ್ ಪಾರೆಸ್ಟ್ ಆಫೀಸರ್ ವೇತನ ಪಾವತಿಸದ ಹಿನ್ನೆಲೆಯಲ್ಲಿ ಕಾರ್ಮಿಕ ಆಯುಕ್ತರಿಗೆ 2014ರಲ್ಲಿ ಜಂಟಿ ದೂರು ಸಲ್ಲಿಸಿದ್ದರು. ದೂರಿನಲ್ಲಿ ಪತಿ ಕೃಷ್ಣೇಗೌಡ ಅವರಿಗೆ 2012 ರ ಏಪ್ರಿಲ್ 3 ರ ಬಳಿಕ 67,464 ರೂಪಾಯಿ ಹಾಗೂ ಪಾರ್ವತಮ್ಮ ಅವರಿಗೆ 2012ರ ಜನವರಿ 21ರ ಬಳಿಕ 78,708 ರೂಪಾಯಿ ಪಾವತಿಸಬೇಕಿದೆ ಎಂದು ಅರ್ಜಿಯಲ್ಲಿ ವಿವರಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಸಹಾಯಕ ಕಾರ್ಮಿಕ ಆಯುಕ್ತರು 2015ರ ಜನವರಿ 28ರಂದು ಅರ್ಜಿಯನ್ನು ಭಾಗಶಃ ಪುರಸ್ಕರಿಸಿ ಆದೇಶ ಹೊರಡಿಸಿದ್ದರು. ಪತಿ ಕೃಷ್ಣಗೌಡರ ಮನವಿ ಪುರಸ್ಕರಿಸಿದ್ದರೂ, ಪತ್ನಿ ಪಾರ್ವತಮ್ಮರ ಮನವಿ ತಿರಸ್ಕರಿಸಿದ್ದರು. ಅರ್ಜಿಯಲ್ಲಿ ಪಾರ್ವತಮ್ಮ ಸಹಿ ಮಾಡಿಲ್ಲವಾದ್ದರಿಂದ ಅವರ ಮನವಿ ಪರಿಗಣಿಸಲಾಗದು ಎಂದು ತಿಳಿಸಿದ್ದರು. ಈ ಆದೇಶ ಪ್ರಶ್ನಿಸಿ ಪಾರ್ವತಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದರು.
ತೀರ್ಪು: ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಸಹಾಯಕ ಕಾರ್ಮಿಕ ಆಯುಕ್ತರ ಆದೇಶವನ್ನು ರದ್ದುಪಡಿಸಿದೆ. ಪೀಠ ತನ್ನ ತೀರ್ಪಿನಲ್ಲಿ, ಅರ್ಜಿಯಲ್ಲಿ ಸಹಿ ಮಾಡಿಲ್ಲ ಎಂಬುದು ಸರಿಪಡಿಸಬಹುದಾದ ಲೋಪ. ಇದೇ ಕಾರಣಕ್ಕೆ ಜಂಟಿಯಾಗಿ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿ, ಪಾರ್ವತಮ್ಮರ ಮನವಿ ತಿರಸ್ಕರಿಸಿರುವ ಕ್ರಮ ಸರಿಯಲ್ಲ. ಲೋಪ ಸರಿಪಡಿಸಲು ಮಾಡಿದ ಮನವಿಯನ್ನೂ ಆಯುಕ್ತರು ಪರಿಗಣಿಸಿಲ್ಲ. ವೇತನ ಪಾವತಿ ಕಾಯ್ದೆಯನ್ನು ಕಾರ್ಮಿಕರ ಕಲ್ಯಾಣಕ್ಕಾಗಿಯೇ ಮಾಡಲಾಗಿದೆ. ತಾಂತ್ರಿಕ ಕಾರಣಗಳಿಗಾಗಿ ಕಾರ್ಮಿಕರ ಕಾನೂನಾತ್ಮಕ ಹಕ್ಕುಗಳನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಆದ್ದರಿಂದ ಸಹಾಯಕ ಕಾರ್ಮಿಕ ಆಯುಕ್ತರು ಅರ್ಜಿಯಲ್ಲಿ ಸಹಿ ಮಾಡಲು ಅವಕಾಶ ನೀಡಿ, ಲೋಪ ಸರಿಪಡಿಸಿದ ಬಳಿಕ 6 ತಿಂಗಳಲ್ಲಿ ಅರ್ಜಿ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
(WP 8730/2016)