News

ಗ್ರಾಹಕರ ಖಾತೆಯಿಂದ ಹಣ ಡ್ರಾ ಮಾಡಿಕೊಂಡಿದ್ದ ಉದ್ಯೋಗಿ ವಜಾ

Share It

ಗ್ರಾಹಕನ ಖಾತೆಯಿಂದಲೇ ಹಣ ಡ್ರಾ ಮಾಡಿಕೊಂಡಿದ್ದ ಉದ್ಯೋಗಿಯನ್ನು ವಜಾಗೊಳಿಸಿದ್ದ ಬ್ಯಾಂಕ್ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಕೆಲಸದಿಂದ ವಜಾಗೊಳಿಸಿದ ಕ್ರಮ ಪ್ರಶ್ನಿಸಿ ಬ್ಯಾಂಕಿನ ಮಾಜಿ ಉದ್ಯೋಗಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಪೀಠ ತನ್ನ ಆದೇಶದಲ್ಲಿ, ವಜಾಗೊಂಡಿರುವ ಉದ್ಯೋಗಿ ಗ್ರಾಹಕನ ಹಣ ಡ್ರಾ ಮಾಡಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾನೆ. ಹೀಗಾಗಿ ಬ್ಯಾಂಕ್ ವಜಾಗೊಳಿಸಿರುವ ಹಾಗೂ ಬ್ಯಾಂಕ್ ನಿರ್ಣಯನ್ನು ಎತ್ತಿ ಹಿಡಿದಿರುವ ಹೈಕೋರ್ಟ್ ಏಕಸದಸ್ಯ ಪೀಠದ ಕ್ರಮ ಸರಿಯಾಗಿದೆ.

ಬ್ಯಾಂಕ್ ಸೇರಿದಂತೆ ಹಣಕಾಸು ಸಂಸ್ಥೆಗಳಲ್ಲಿನ ಉದ್ಯೋಗಿಗಳ ವಂಚನೆಗಳು ಆರ್ಥಿಕ ವ್ಯವಸ್ಥೆಯ ಮೇಲೆ ಅತ್ಯಂತ ಕೆಟ್ಟ ಪರಿಣಾಮಗಳನ್ನು ಬೀರುತ್ತವೆ. ಹೀಗಾಗಿ ಹಣಕಾಸು ಸಂಸ್ಥೆಗಳಲ್ಲಿನ ವಂಚನೆ ಪ್ರಕರಣಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಇಂತಹ ಕೃತ್ಯಗಳನ್ನು ಕಠಿಣವಾಗಿ ಹತ್ತಿಕ್ಕಬೇಕು ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಪರಿಚಿತ ಮಹಿಳಾ ಗ್ರಾಹಕರೊಬ್ಬರಿಗೆ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ತೆರೆದುಕೊಟ್ಟಿದ್ದ ಬ್ಯಾಂಕ್ ಉದ್ಯೋಗಿ ಸ್ವತಃ ತಾವೇ ಗ್ರಾಹಕರಿಂದ ಹಣ ಪಡೆದು ಅದನ್ನು ಅವರ ಖಾತೆಯಲ್ಲಿ ತುಂಬುತ್ತಿದ್ದರು. ಕೆಲ ಸಮಯದ ಬಳಿಕ ಗ್ರಾಹಕರು ತಮ್ಮ ಖಾತೆಯಿಂದ ಉದ್ಯೋಗಿ ಹಣ ಡ್ರಾ ಮಾಡಿದ್ದಾರೆ ಎಂದು ಬ್ಯಾಂಕ್ ಗೆ ದೂರು ನೀಡಿದ್ದರು.

ದೂರಿನ ವಿಚಾರಣೆ ವೇಳೆ, ಆರೋಪಿತ ಉದ್ಯೋಗಿ ತನಗೆ ಹಣಕಾಸು ಸಮಸ್ಯೆಗಳು ಇದ್ದುದರಿಂದ ಗ್ರಾಹಕರ ಹಣ ಡ್ರಾ ಮಾಡಿಕೊಂಡಿದ್ದನ್ನು ಒಪ್ಪಿಕೊಂಡಿದ್ದರು. ಹಾಗೆಯೇ, ಗ್ರಾಹಕರ ಖಾತೆಗೆ ಹಣ ತುಂಬದೆ ನಕಲಿ ರಸೀದಿಗಳನ್ನು ನೀಡಿದ್ದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕು ತನ್ನ ಉದ್ಯೋಗಿಯನ್ನು ಸೇವೆಯಿಂದ ವಜಾ ಮಾಡಿತ್ತು.


(WA 952/2021)


Share It

You cannot copy content of this page