News ⓇJudgements

21 ವರ್ಷ ದೂರವಿದ್ದರೂ ವಿಚ್ಛೇದನಕ್ಕೆ ಒಪ್ಪದ ಪತ್ನಿ: ಪತಿ ಮನವಿ ಪುರಸ್ಕರಿಸಿದ ಹೈಕೋರ್ಟ್

Share It

ಸತತ 21 ವರ್ಷಗಳಿಂದಲೂ ಪ್ರತ್ಯೇಕವಾಗಿ ವಾಸಿಸುತ್ತಿರುವ ದಂಪತಿಯನ್ನು ಒಗ್ಗೂಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪತಿಯ ಕೋರಿಕೆಯಂತೆ ವಿಚ್ಚೇದನ ನೀಡಿ ಆದೇಶಿಸಿದೆ.

ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 13 (1) (ib) ಅಡಿ ಡೈವೋರ್ಸ್ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ತರೀಕೆರೆಯ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ದಂಪತಿಗೆ ಪ್ರಸ್ತುತ 56 ವರ್ಷ ವಯಸ್ಸಾಗಿದೆ. ಪತಿ-ಪತ್ನಿ ಸತತ 21 ವರ್ಷಗಳಿಂದಲೂ ಪ್ರತ್ಯೇಕವಾಗಿ ವಾಸವಿದ್ದಾರೆ. ಈ ಅವಧಿಯಲ್ಲಿ ದಂಪತಿಯಲ್ಲಿ ಯಾರೊಬ್ಬರೂ ತಮ್ಮ ವೈವಾಹಿಕ ಹಕ್ಕುಗಳ ಪುನರ್ಸ್ಥಾಪನೆಗೆ ಪ್ರಯತ್ನಿಸಿಲ್ಲ. ವಿಚ್ಛೇದನ ಬೇಡ ಎನ್ನುತ್ತಿರುವ ಪತ್ನಿ ಕೂಡ ತಮ್ಮ ವೈವಾಹಿಕ ಹಕ್ಕುಗಳನ್ನು ಪುನರ್ಸ್ಥಾಪಿಸಲು ಕೋರಿ ಅರ್ಜಿ ಸಲ್ಲಿಸಿಲ್ಲ. ಬದಲಿಗೆ ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮಾಸಿಕ 3 ಸಾವಿರ ಇದ್ದ ಜೀವನಾಂಶ ಇದೀಗ 20 ಸಾವಿರಕ್ಕೆ ಏರಿಕೆಯಾಗಿದೆ.

ಪತಿ ಎರಡನೇ ಮದುವೆಯಾಗಿದ್ದು ಅವರಿಗೀಗ ಇಬ್ಬರು ಮಕ್ಕಳಿದ್ದಾರೆ. ಇಂತಹ ಸಂದರ್ಭದಲ್ಲಿ ಪತ್ನಿಯ ಕೋರಿಕೆಯನ್ನು ಪರಿಗಣಿಸಿದರೆ ದಂಪತಿ ಇಷ್ಟು ವರ್ಷ ಕಳೆದುಕೊಂಡಿರುವ ನೆಮ್ಮದಿ ಮತ್ತಷ್ಟು ಹಾಳಾಗಲಿದೆ. ಹೀಗಾಗಿ ವಿಚ್ಛೇದನಕ್ಕೆ ಇದು ಅರ್ಹ ಪ್ರಕರಣವಾಗಿದೆ ಎಂದು ಅಭಿಪ್ರಾಯಪಟ್ಟು ಪತಿಯ ಕೋರಿಕೆಯಂತೆ ದಂಪತಿಗೆ ವಿಚ್ಚೇದನ ನೀಡಿ ಆದೇಶಿಸಿದೆ. ಇದೇ ವೇಳೆ ಪತಿ ತನ್ನ ವಿಚ್ಚೇದಿತ ಪತ್ನಿಗೆ 30 ಲಕ್ಷ ಜೀವನಾಂಶ ನೀಡುವಂತೆಯೂ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: 1999ರ ಜೂನ್ 24ರಂದು ಚಿಕ್ಕಮಗಳೂರಿನ ಕಡೂರಿನಲ್ಲಿ ದಂಪತಿಯ ಮದುವೆ ನಡೆದಿತ್ತು. ಎರಡು ತಿಂಗಳ ಅವಧಿಯಲ್ಲೇ ಪತ್ನಿ ಪತಿಯನ್ನು ತೊರೆದು ತವರು ಮನೆ ಸೇರಿದ್ದರು. ನಾಲ್ಕು ವರ್ಷಗಳ ಬಳಿಕ ಪತಿ 2003ರಲ್ಲಿ ವಿವಾಹ ವಿಚ್ಚೇದನ ಕೋರಿ ತರೀಕೆರೆಯ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪತಿ ಅರ್ಜಿ ಸಲ್ಲಿಸಿದ್ದಾಗ ಪತ್ನಿ ಯಾವುದೇ ಆಕ್ಷೇಪಣೆ ಎತ್ತಿರಲಿಲ್ಲ. ಹೀಗಾಗಿ ವಿಚಾರಣಾ ನ್ಯಾಯಾಲಯ ಎಕ್ಸ್ ಪಾರ್ಟಿ ಪರಿಗಣಿಸಿ 2004ರಲ್ಲಿ ವಿಚ್ಛೇದನ ನೀಡಿ ಆದೇಶಿಸಿತ್ತು.

ನ್ಯಾಯಾಲಯ ವಿಚ್ಛೇದನ ನೀಡಿದ ನಂತರ ಅದನ್ನು ಆಕ್ಷೇಪಿಸಿ ಪತ್ನಿ ಅರ್ಜಿ ಸಲ್ಲಿಸಿದ್ದರು. ಪತಿ ಅರ್ಜಿ ಸಲ್ಲಿಸುವ ವೇಳೆ ತನ್ನ ವಿಳಾಸವನ್ನು ತಪ್ಪಾಗಿ ನೀಡಿದ್ದರಿಂದ ತನಗೆ ಮಾಹಿತಿ ಸಿಕ್ಕಿಲ್ಲ. ಇನ್ನು, ಪತಿ ತನಗೆ ಹೆಚ್ಚುವರಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ. ಎರಡನೇ ಮದುವೆಯಾಗುವ ಉದ್ದೇಶದಲ್ಲಿ ತನಗೆ ಡೈವೋರ್ಸ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಒಪ್ಪಿಗೆ ನೀಡುವಂತೆ ಒತ್ತಾಯಿಸಲು ಜನರನ್ನು ಮನೆಗೆ ಕಳುಹಿಸುತ್ತಿದ್ದಾರೆ. ಪತಿ ಸರಿಯಾಗಿ ಊಟ, ಅಗತ್ಯ ವಸ್ತುಗಳನ್ನು ನೀಡುತ್ತಿಲ್ಲ. ಬದಲಿಗೆ ತವರಿನಲ್ಲಿರುವಂತೆ ಒತ್ತಾಯಿಸುತ್ತಿದ್ದಾರೆ ಎಂದೆಲ್ಲಾ ಆರೋಪಿಸಿದ್ದರು. ಪತ್ನಿ ಅರ್ಜಿ ಸಲ್ಲಿಸಿದ ಬಳಿಕ ನ್ಯಾಯಾಲಯ ಪ್ರಕರಣವನ್ನು ಮರು ವಿಚಾರಣೆಗೆ ಪರಿಗಣಿಸಿತ್ತು.

ಪತ್ನಿಯ ಆರೋಪಗಳನ್ನು ಆಕ್ಷೇಪಿಸಿದ್ದ ಪತಿ, ಪತ್ನಿ ಯಾವುದೇ ಕಾರಣ ನೀಡದೆ ತವರಿಗೆ ಹೋಗಿದ್ದಾಳೆ. ಮಾವನ ಮನೆಗೆ ತೆರಳಿ ಪತ್ನಿಯನ್ನು ವಾಪಸ್ಸು ಬರುವಂತೆ ಕೋರಿದ್ದರೂ ಒಪ್ಪಿಲ್ಲ. ನಂತರ ಕುಟುಂಬ ಸದಸ್ಯರು ಹಾಗೂ ಹಿತೈಷಿಗಳು ಕೂಡ ಪತ್ನಿಯ ತವರು ಮನೆಗೆ ಹೋಗಿ ಕೇಳಿಕೊಂಡರೂ ವಾಪಸ್ಸು ಬಂದಿಲ್ಲ. ಸಹಜೀವನ ಮುಂದುವರೆಸಲು ಒಪ್ಪದ ಪತ್ನಿಯಿಂದ ತನಗೆ ವಿಚ್ಛೇದನ ಕೊಡಿಸಬೇಕು ಎಂದು ಕೋರಿದ್ದರು. ಉಭಯ ಪಕ್ಷಗಾರರ ವಾದ ಆಲಿಸಿದ್ದ ನ್ಯಾಯಾಲಯ 2012ರಲ್ಲಿ ಪತಿಯ ವಿಚ್ಛೇದನ ಕೋರಿಕೆಯನ್ನು ತಿರಸ್ಕರಿಸಿತ್ತು. ನಂತರ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
(MFA 4314/2012)


Share It

You cannot copy content of this page