News

ವಾಟ್ಸಾಪ್ ಗ್ರೂಪ್ ಸದಸ್ಯರ ಆಕ್ಷೇಪಾರ್ಹ ಪೋಸ್ಟ್’ಗಳಿಗೆ ಅಡ್ಮಿನ್ ಹೊಣೆಯಲ್ಲ: ಹೈಕೋರ್ಟ್

Share It

ವಾಟ್ಸಾಪ್ ಗ್ರೂಪ್ ನಲ್ಲಿ ಸದಸ್ಯರು ಹಾಕುವ ಅಸಂಬದ್ಧ ಅಥವಾ ಆಕ್ಷೇಪಾರ್ಹ ಪೋಸ್ಟ್ ಗಳಿಗೆ ಅಡ್ಮಿನ್ ಹೊಣೆಗಾರನಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಮದ್ರಾಸ್ ಹೈಕೋರ್ಟ್ ಇದೇ ವಿಚಾರವಾಗಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣದಿಂದ ಅಡ್ಮಿನ್ ಹೆಸರನ್ನು ಕೈಬಿಡುವಂತೆ ಪೊಲೀಸರಿಗೆ ಆದೇಶಿಸಿದೆ.

ವಾಟ್ಸಾಪ್ ನಲ್ಲಿನ ಆಕ್ಷೇಪಾರ್ಹ ಪೋಸ್ಟ್ ಗೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಕ್ರಿಮಿನಲ್ ಪ್ರಕರಣದಿಂದ ತಮ್ಮ ಹೆಸರು ಕೈಬಿಡುವಂತೆ ಕೋರಿ ತಮಿಳುನಾಡಿನ ವಕೀಲ ಆರ್. ರಾಜೇಂದ್ರನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಿ.ಆರ್ ಸ್ವಾಮಿನಾಥನ್ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಪೀಠ ತನ್ನ ಆದೇಶದಲ್ಲಿ, ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳಿಗೆ ಸದಸ್ಯರನ್ನು ಸೇರಿಸುವ ಹಾಗೂ ತೆಗೆಯುವ ಅಧಿಕಾರವಷ್ಟೇ ಇರುತ್ತದೆ. ಗ್ರೂಪ್ ನಲ್ಲಿ ಯಾವ ವಿಷಯಗಳನ್ನು ಪೋಸ್ಟ್ ಮಾಡಬೇಕು ಅಥವಾ ನಿರ್ಬಂಧಿಸಬೇಕಾದ ವಿಷಯಗಳು ಯಾವುವು ಎಂಬುದನ್ನು ಅವರು ತೀರ್ಮಾನಿಸಲು ಸಾಧ್ಯವಿಲ್ಲ. ಅದೇ ರೀತಿ ಸದಸ್ಯರು ಯಾವ ರೀತಿಯ ಪೋಸ್ಟ್ ಗಳನ್ನು ಹಾಕುತ್ತಾರೆಂಬ ಬಗ್ಗೆ ಮುಂಚಿತವಾಗಿ ಊಹಿಸಲು ಸಾಧ್ಯವಿಲ್ಲ. ಹೀಗಾಗಿ, ವಾಟ್ಸಾಪ್ ಗ್ರೂಪ್ ನಲ್ಲಿ ಬರುವ ಆಕ್ಷೇಪಾರ್ಹ ಪೋಸ್ಟ್ ಗಳಿಗೆ ಅಡ್ಮಿನ್ ಹೊಣೆಗಾರನಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಆದರೆ, ಗ್ರೂಪ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಆರೋಪಿಯೊಂದಿಗೆ ಅಡ್ಮಿನ್ ಗೂ ಅದೇ ಉದ್ದೇಶವಿತ್ತು ಅಥವಾ ಆರೋಪಿಯೊಂದಿಗೆ ಸೇರಿ ಪೂರ್ವಯೋಜಿತ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಅಂಶಗಳು ಇದ್ದಾಗ ಮಾತ್ರ ಅಡ್ಮಿನ್ ಗಳನ್ನು ಹೊಣೆಗಾರರನ್ನಾಗಿ ಮಾಡಬಹುದು ಎಂದು ಪೀಠ ಸ್ಪಷ್ಟಪಡಿಸಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ‘ಕರೂರ್ ಲಾಯರ್ಸ್’ ಗ್ರೂಪ್ ಅಡ್ಮಿನ್ ಆರ್. ರಾಜೇಂದ್ರನ್ ಅವರಿಗೆ ಗ್ರೂಪ್ ನ ಅಡ್ಮಿನ್ ನಿರ್ವಹಣೆ ಕಾರ್ಯ ಹೊರತುಪಡಿಸಿ, ಪೋಸ್ಟ್ ಹಾಕುವ ವಿಚಾರವಾಗಿ ಯಾವುದೇ ಸಂಬಂಧವಿಲ್ಲದಿದ್ದರೆ, ಅಂತಿಮ ವರದಿ ಸಲ್ಲಿಸುವಾಗ ಹೆಸರು ಕೈಬಿಡುವಂತೆ ಕರೂರು ಜಿಲ್ಲೆ ಪೊಲೀಸರಿಗೆ ಆದೇಶಿಸಿ, ಅರ್ಜಿ ಇತ್ಯರ್ಥಪಡಿಸಿದೆ.

ಪ್ರಕರಣದ ಹಿನ್ನೆಲೆ: ವಕೀಲ ಆರ್. ರಾಜೇಂದ್ರನ್ ರೂಪಿಸಿದ್ದ ‘ಕರೂರ್ ಲಾಯರ್ಸ್’ ಹೆಸರಿನ ವಾಟ್ಸಾಪ್ ಗ್ರೂಪ್ ನಲ್ಲಿ ಪಚೈಯಪ್ಪನ್ ಎಂಬುವರು ಸಮುದಾಯಗಳ ನಡುವೆ ಕೆಟ್ಟ ಭಾವನೆ ಮೂಡಿಸುವಂತಹ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರು. ಈ ಸಂಬಂಧ ಕರೂರು ಜಿಲ್ಲಾ ಪೊಲೀಸರು ಪೋಸ್ಟ್ ಹಾಕಿದ್ದ ಪಚೈಯಪ್ಪನ್ ಜತೆಗೆ ಗ್ರೂಪ್ ಅಡ್ಮಿನ್ ಆರ್. ರಾಜೇಂದ್ರನ್ ವಿರುದ್ಧ ಐಪಿಸಿ ಸೆಕ್ಷನ್ 153ಎ, 294ಬಿ ಅಡಿ ಎಫ್ಐಆರ್ ದಾಖಲಿಸಿದ್ದರು. ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರ ವಕೀಲ ಆರ್. ರಾಜೇಂದ್ರನ್, ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ. ಆದ್ದರಿಂದ, ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಪ್ರಾಸಿಕ್ಯೂಷನ್ ಪರ ವಕೀಲರು, ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಗ್ರೂಪ್ ಸದಸ್ಯ ಪಚೈಯಪ್ಪನ್ ಅವರನ್ನು ಗ್ರೂಪ್ ಅಡ್ಮಿನ್ ರಾಜೇಂದ್ರನ್ ಗ್ರೂಪ್ ನಿಂದ ತೆಗೆದು ಹಾಕಿದ ಕೆಲವೇ ದಿನಗಳಲ್ಲಿ ಮತ್ತೆ ಗ್ರೂಪ್ ಗೆ ಸೇರಿಸಿದ್ದಾರೆ. ಇದು ಇಬ್ಬರೂ ಒಪ್ಪಂದದ ಮೇರೆಗೆ ಪೋಸ್ಟ್ ಹಾಕಿರಬಹುದೆಂಬ ಅನುಮಾನ ಮೂಡಿಸುತ್ತದೆ. ಇದೇ ವೇಳೆ ರಾಜೇಂದ್ರನ್ ಅವರೇ ಪಚೈಯಪ್ಪನ್ ಹೆಸರಲ್ಲಿ ಪೋಸ್ಟ್ ಹಾಕಿರುವ ಸಾಧ್ಯತೆಯನ್ನೂ ತೋರಿಸುತ್ತದೆ. ಹೀಗಾಗಿ, ಯಾರು ಪೋಸ್ಟ್ ಹಾಕಿದ್ದರು ಎಂಬುದನ್ನು ನಿಖರವಾಗಿ ಪತ್ತೆಹಚ್ಚಲು ಫೋರೆನ್ಸಿಕ್ ಲ್ಯಾಬ್ ವರದಿ ನಿರೀಕ್ಷಿಸಲಾಗುತ್ತಿದೆ. ಆದ್ದರಿಂದ, ಅರ್ಜಿದಾರರ ಮನವಿ ತಿರಸ್ಕರಿಸಬೇಕು ಎಂದು ಕೋರಿದ್ದರು.

ಬಾಂಬೆ ಹೈಕೋರ್ಟ್ ಕಿಶೋರ್ ವರ್ಸಸ್ ಸ್ಟೇಟ್ ಆಫ್ ಮಹಾರಾಷ್ಟ್ರ ಪ್ರಕರಣದಲ್ಲಿ ನೀಡಿದ್ದ ತೀರ್ಪು ಆಧರಿಸಿದ ಪೀಠ, ಅಡ್ಮಿನ್ ಕೇವಲ ಅಡ್ಮಿನ್ ಪಾತ್ರವನ್ನಷ್ಟೇ ನಿರ್ವಹಿಸಿದ್ದರೆ, ಸದಸ್ಯರ ಆಕ್ಷೇಪಾರ್ಹ ಪೋಸ್ಟ್ ಗಳಿಗೆ ಅಡ್ಮಿನ್ ಜವಾಬ್ದಾರರಲ್ಲ ಎಂದು ತೀರ್ಪು ನೀಡಿದೆ.


Share It

You cannot copy content of this page