Columns

ವಿಲ್ ಯಾರು, ಹೇಗೆ, ಯಾವ ಆಸ್ತಿಗೆ ಬರೆಯಬಹುದು? ರದ್ದು ಹೇಗೆ? ಇಲ್ಲಿದೆ ಮಾಹಿತಿ

Share It

ಲೇಖಕರು: ಮರಿಗೌಡ ಬಾದರದಿನ್ನಿ, ವಕೀಲರು, ಕೊಪ್ಪಳ

ಮೃತ್ಯು ಪತ್ರ (will deed) ಯಾರು ಬರೆಯಬಹುದು? ಮೃತ್ಯು ಪತ್ರ ರದ್ದು ಪರಿಸಬಹುದೆ? ಯಾವ ವ್ಯಕ್ತಿ ಯಾವ ಆಸ್ತಿಯ ಉಯಿಲು ಮಾಡಬಹುದು? ಯಾರು ವಿಶೇಷ ಮೃತ್ಯ ಪತ್ರ ಬರೆಯಬಹುದು?
ಒಬ್ಬ ವ್ಯಕ್ತಿ, ತಾನು ಸಂಪಾದಿಸಿದ ಆಸ್ತಿಯನ್ನು, ತನ್ನ ಮರಣಾನಂತರ ಅದು ಯಾರಿಗೆ ಸೇರಬೇಕು ಎಂದು ಮನಸ್ಸು ಮಾಡಿ ನಿರ್ಧಾರ ತಾಳಿ, ಮನಸ್ಸಿನ ಆ ನಿರ್ಧಾರದಂತೆ ಬರೆದಿಡುವ ಒಂದು ದಾಖಲೆಯೇ ಮೃತ್ಯು ಪತ್ರ ಅಥವಾ ಉಯಿಲು ಪತ್ರ. ಆಂಗ್ಲ ಭಾಷೆಯಲ್ಲಿ will deed ಎಂದೂ ಕರೆಯುತ್ತಾರೆ.

ಒಬ್ಬ ವ್ಯಕ್ತಿಯು ತಾನು ಮರಣಾನಂತರ ತನ್ನ ಆಸ್ತಿಯ ವಿಲೇವಾರಿಗೆ ಸಂಬಂಧಿಸಿದಂತೆ ಇರುವ ತನ್ನ ಅಪೇಕ್ಷೆಯನ್ನು ಅಥವಾ ಇಚ್ಛೆಯನ್ನು ತಿಳಿಸಿ ಕಾನೂನಿನ ಅನ್ವಯ ಮಾಡುವ ಘೋಷಣೆಯೇ ಉಯಿಲು ಅಥವಾ ಮೃತ್ಯುಪತ್ರ ಎಂದು ಭಾರತೀಯ ವಾರಸಾ ಅಧಿನಿಯಮ-1925 (Indian Succession Act-1925) ರ ಕಲಂ 2(ಎಚ್) ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಇದರ ಅನ್ವಯ ಉಯಿಲು (ಮೃತ್ಯು ಪತ್ರ) ಎಂದರೆ,
1) ಒಬ್ಬ ವ್ಯಕ್ತಿಯು ಕಾನೂನಿನನ್ವಯ ಮಾಡಿದ ಘೋಷಣೆ.
2) ಆ ಘೋಷಣೆಯು ಕಾನೂನುಬದ್ಧವಾಗಿರಬೇಕು. ಅಂದರೆ, ವ್ಯಕ್ತಿಯು ಯಾವ ಆಸ್ತಿಯ ಸಂಬಂಧವಾಗಿ ಘೋಷಣೆಯನ್ನು ಮಾಡಿರುತ್ತಾನೋ ಅಂತಹ ಆಸ್ತಿಯನ್ನು ಆತನು ತನ್ನ ಜೀವಿತಾವಧಿಯಲ್ಲಿ ವಿಲೇವಾರಿ ಮಾಡುವ ಅಧಿಕಾರವನ್ನು ಹೊಂದಿರಬೇಕು.
3) ಆ ಘೋಷಣೆಯು ಆತನ ಮರಣಾನಂತರ ಆತನ ಆಸ್ತಿಯ ವಿಲೇವಾರಿಗೆ ಸಂಬಂಧಿಸಿದಂತೆ ಆತನ ಅಪೇಕ್ಷೆ ಅಥವಾ ಇಚ್ಛೆಯನ್ನು ತಿಳಿಸುವಂತಿರಬೇಕು. ಹಾಗೆಯೇ, ಆತನಿಗೆ ಉಯಿಲು ಮಾಡುವ ಸಾಮರ್ಥ್ಯವಿರಬೇಕು. (ಅಪ್ರಾಪ್ತ, ಬುದ್ದಿಮಾಂದ್ಯನಾಗಿರಬಾರದು)
ಉಯಿಲು ಲಿಖಿತ ರೂಪದಲ್ಲಿ ಇರಬೇಕು. ಆದರೆ, ಉಯಿಲು ಕರ್ತನು (Testartor) ಯುದ್ಧದಲ್ಲಿ ನಿರತನಾದ ಸೈನಿಕ, ವೈಮಾನಿಕ, ಅಥವಾ ನಾವಿಕ ದರ್ಜೆಯ ಅಧಿಕಾರಿಯಾಗಿದ್ದರೆ ಆತ ವಿಶೇಷ ಸಂದರ್ಭಗಳಲ್ಲಿ ಭಾಗಶಃ ಲಿಖಿತ ಮತ್ತು ಭಾಗಶಃ ಮೌಖಿಕ ಅಥವಾ ಸಂಪೂರ್ಣವಾಗಿ ಮೌಖಿಕ ಉಯಿಲು ಮಾಡಬಹುದು. (Partly written, Partly oral or Fully Oral). ಇಂತಹ ಉಯಿಲಿಗೆ ವಿಶೇಷ ಉಯಿಲು (Privileged Will) ಎನ್ನಲಾಗುತ್ತದೆ. ವಿಶೇಷ ಉಯಿಲನ್ನು ಹೊರತುಪಡಿಸಿ ಇತರ ವಿಶೇಷವಲ್ಲದ ಉಯಿಲುಗಳೆಲ್ಲವೂ (UNPRIVILIGED WILL) ಲಿಖಿತರೂಪದಲ್ಲಿಯೇ ಇರಬೇಕು.

ಉಯಿಲು ಯಾರು ಮಾಡಬಹುದು:
1) 18 ವರ್ಷ ವಯಸ್ಸು ಪೂರೈಸಿದ ಮತ್ತು ಮಾನಸಿಕ ಸ್ವಾಸ್ಥ್ಯ ಹೊಂದಿರುವ ಯಾವುದೇ ವ್ಯಕ್ತಿಯು ಉಯಿಲು ಮಾಡಬಹುದು.
2) ವಿವಾಹಿತ ಮಹಿಳೆಯಾಗಿದ್ದರೆ ಯಾವ ಆಸ್ತಿಯನ್ನು ತನ್ನ ಜೀವಿತಕಾಲದಲ್ಲಿ ವಿಲೇವಾರಿ (ಪರಭಾರೆ) (Sale, Lease, Rent, Mortgage, etc) ಮಾಡುವ ಹಕ್ಕನ್ನು ಹೊಂದಿರುತ್ತಾರೆಯೋ ಅಂತಹ ಆಸ್ತಿಗೆ ಸಂಬಂಧಿಸಿದಂತೆ ಉಯಿಲು ಮಾಡಬಹುದು.
3) ಕಿವುಡ, ಮೂಗ ಅಥವಾ ಕುರುಡ ವ್ಯಕ್ತಿ ತಾನು ಮಾಡುತ್ತಿರುವ ಕೃತ್ಯದ ಬಗ್ಗೆ ಸಾಕಷ್ಟು ತಿಳುವಳಿಕೆ ಹೊಂದಿದ್ದಲ್ಲಿ ಅಂತಹ ವ್ಯಕ್ತಿಯೂ ಸಹ ತನ್ನ ಆಸ್ತಿಗೆ ಸಂಬಂಧಿಸಿದಂತೆ ಉಯಿಲು ಮಾಡಬಹುದು.
3) ಯಾವುದೇ ವ್ಯಕ್ತಿಯು ಕೆಲವು ಸಮಯದಲ್ಲಿ ಮಾತ್ರ ಮಾನಸಿಕವಾಗಿ ಅಸ್ವಸ್ಥನಾಗಿದ್ದು ಮತ್ತೆ ಕೆಲವು ಸಮಯದಲ್ಲಿ ಸ್ವಸ್ಥ ನಾಗಿರುತ್ತಾನೆ (Partial Insanity) ಅಂತಹ ವ್ಯಕ್ತಿಯು ಮಾನಸಿಕವಾಗಿ ಸ್ವಸ್ಥನಾಗಿದ್ದ ಸಮಯದಲ್ಲಿ ಮಾತ್ರವೇ ಉಯಿಲನ್ನು ಮಾಡಬಹುದು.
4) ಯಾವುದೇ ವ್ಯಕ್ತಿಯು ಅಮಲು ತರಿಸುವ ಪದಾರ್ಥದ (Under the Influence of Intoxication)ಸೇವನೆ ಅಥವಾ ಯಾವುದೇ ರೀತಿಯ ಅನಾರೋಗ್ಯದಿಂದ ಅಥವಾ ಬೇರಾವುದೇ ಕಾರಣದಿಂದ ತಾನು ಮಾಡುತ್ತಿರುವುದೇನು ಎಂಬುದರ ತಿಳುವಳಿಕೆ, ಪರಿಜ್ಞಾನವಿಲ್ಲದ ಸ್ಥಿತಿಯಲ್ಲಿದ್ದಾಗ ಉಯಿಲು ಮಾಡುವಂತಿಲ್ಲ. ಮಾಡಿದರೂ ಅದು ಅನೂರ್ಜಿತ.
5) ವ್ಯಕ್ತಿಯೊಬ್ಬ ಬೇರೊಬ್ಬರ ಬೆದರಿಕೆಗೆ, ಪ್ರಲೋಭನೆಗೆ, ಮರುಳು ಮಾತಿಗೆ ಅಥವಾ ಮೋಸಕ್ಕೆ ಒಳಗಾಗಿದ್ದ ಸಮಯದಲ್ಲಿ ಮಾಡಿದ ಉಯಿಲು ಕೂಡ ಅನೂರ್ಜಿತ. (Intimidation, Temptation, Mis- Representation, Undue Influence.)
6) ಉಯಿಲು ಮಾಡಲು ಕಾನೂನಿನನ್ವಯ ಸಮರ್ಥರಲ್ಲದವರರು ಅಂದರೆ, ಅಪ್ರಾಪ್ತರು (Minor) ಅಥವಾ ಬುದ್ಧಿಭ್ರಮಣೆಗೆ ಒಳಗಾದವರು ಮಾಡುವಂತಿಲ್ಲ. ಅವರ ಪರವಾಗಿ ಪಾಲಕರು ಅಥವಾ ಪೋಷಕರು ಕೂಡ ಉಯಿಲು ಮಾಡುವಂತಿಲ್ಲ.

ಉಯಿಲು ಮಾಡುವಾಗ ಪಾಲಿಸಬೇಕಾದ ಸಂಗತಿಗಳು: ಉಯಿಲು ಲಿಖಿತ ರೂಪದಲ್ಲಿ ಇರಬೇಕು. ಸಾಧ್ಯವಾದರೆ ಉಯಿಲು ಕರ್ತನು ಅದನ್ನು ತನ್ನ ಕೈಬರಹದಲ್ಲಿ ಬರೆಯುವುದು ಸೂಕ್ತ. ಉಯಿಲನ್ನು ಯಾವುದೇ ಭಾಷೆಯಲ್ಲಿ ಯಾವುದೇ ಶೈಲಿಯಲ್ಲಿ ಬರೆಯಬಹುದು. ಉಯಿಲನ್ನು ಛಾಪಾ ಕಾಗದದ ಮೇಲೆಯೇ ಬರೆಯಬೇಕೆಂದೇನಿಲ್ಲ. ಉತ್ತಮ ದರ್ಜೆಯ ಯಾವುದೇ ಕಾಗದದಲ್ಲಿಯೂ ಬರೆಯಬಹುದು. ಉಯಿಲಿನ ಪ್ರತಿಪುಟದ ಮೇಲೆ ಉಯಿಲು ಕರ್ತನು ತನ್ನ ಸಹಿಯನ್ನು ಮಾಡಬೇಕು ಅಥವಾ ಹೆಬ್ಬೆರಳಿನ ಗುರುತನ್ನು ಹಾಕಬೇಕು. ಉಯಿಲು ದಸ್ತಾವೇಜಿಗೆ ಕನಿಷ್ಠ ಇಬ್ಬರು ವ್ಯಕ್ತಿಗಳು ‘ಸಾಕ್ಷಿಗಳೆಂದು’ (Witness) ಉಯಿಲು ಕರ್ತನು ಅದಕ್ಕೆ ಸಹಿ ಮಾಡಿದ್ದನ್ನು ಪ್ರತ್ಯಕ್ಷ ಕಂಡು ಸಹಿ ಮಾಡಬೇಕು. ಉಯಿಲು ದಾಖಲೆ ಪತ್ರ ಬರೆದ ವ್ಯಕ್ತಿ (Document Writer) ‘ಸಾಕ್ಷಿ’ ಆಗುವುದಿಲ್ಲ.

ಉಯಿಲಿನ ಪ್ರಯೋಜನ ಪಡೆಯುವ ವ್ಯಕ್ತಿ ಉಯಿಲಿಗೆ ಸಾಕ್ಷಿ ಹಾಕಬಾರದು. ಹಾಗೊಂದು ವೇಳೆ ಸಾಕ್ಷಿ ಹಾಕಿದಲ್ಲಿ, ಸಾಕ್ಷಿ ಅನೂರ್ಜಿತವಾಗುವುದಿಲ್ಲ. ಆದರೆ ಸಾಕ್ಷಿ ಹಾಕಿದ ವ್ಯಕ್ತಿ ಅಥವಾ ಆತನ/ಆಕೆಯ ಹೆಂಡತಿ ಅಥವಾ ಗಂಡ ಉಯಿಲು ಮೂಲಕ ಪಡೆದ ಪ್ರಯೋಜನ ರದ್ದಾಗುವ ಸಂಭವವಿರುತ್ತದೆ. ಉಯಿಲಿನಲ್ಲಿ ತೋರಿಸಿದ ಆಸ್ತಿಗಳ ಮತ್ತು ಅವುಗಳನ್ನು ಪಡೆಯುವ ವ್ಯಕ್ತಿಗಳ ವಿವರಗಳನ್ನು ಯಾವುದೇ ಸಂದಿಗ್ಧತೆ ಅಥವಾ ಅಸ್ಪಷ್ಟತೆಗೆ ಅವಕಾಶವಿಲ್ಲದಂತೆ ಸ್ಪಷ್ಟವಾಗಿ ಮತ್ತು ಸರಿಯಾಗಿ ನಮೂದಿಸಬೇಕು.

ಯಾವ ಆಸ್ತಿಗಳನ್ನು ಉಯಿಲು ಮಾಡಬಹುದು: ಉಯಿಲು ಕರ್ತನು ಯಾವ ಆಸ್ತಿಗಳಿಗೆ ಸಂಬಂಧಿಸಿದಂತೆ ಉಯಿಲು ಮಾಡಲು ಇಚ್ಚಿಸುತ್ತಾನೆಯೋ ಅಂತಹ ಆಸ್ತಿಗಳನ್ನು ತನ್ನ ಜೀವಿತಾವಧಿಯಲ್ಲಿ ವಿಲೇವಾರಿ ಮಾಡುವ ಸಂಪೂರ್ಣ ಹಕ್ಕನ್ನು ಹೊಂದಿರಬೇಕು. ಒಬ್ಬ ಹಿಂದೂ ತನ್ನ ಸ್ವಯಾರ್ಜಿತವಾದ ಸಂಪೂರ್ಣ ಆಸ್ತಿಯನ್ನು, ಒಬ್ಬ ಹಿಂದೂ ಮಹಿಳೆ ತನ್ನ ಜೀವಿತ ಸಮಯದಲ್ಲಿ ಯಾವ ಆಸ್ತಿಯನ್ನು ತನ್ನ ಇಚ್ಛಾನುಸಾರ ಪರಭಾರೆ (ವಿಲೇವಾರಿ) ಮಾಡುವ ಹಕ್ಕನ್ನು ಹೊಂದಿರುತ್ತಾಳೋ ಅಂತಹ ಆಸ್ತಿಯನ್ನು, ಹಿಂದು ಅವಿಭಕ್ತ ಕುಟುಂಬದ ಸದಸ್ಯನಾದರೆ ಕುಟುಂಬದ ಆಸ್ತಿ ವಿಭಾಗವಾದಲ್ಲಿ ತನ್ನ ಪಾಲಿಗೆ ಬರುವಷ್ಟು ಆಸ್ತಿಯನ್ನು, ಒಬ್ಬ ಮಹಮ್ಮದೀಯನು ತನ್ನ ಒಟ್ಟು ಆಸ್ತಿಯ ಮೂರನೇ ಒಂದು ಭಾಗಕ್ಕೆ ಸಂಬಂಧಿಸಿದಂತೆ ಉಯಿಲು ಮಾಡುವ ಹಕ್ಕು ಹೊಂದಿರುತ್ತಾರೆ. ಉಯಿಲು ಮಾಡಿದ್ದರಿಂದಾಗಿ ಉಯಿಲುಕರ್ತನು (ವಿಲ್ ಬರೆಯುವವನು) ತನ್ನ ಆಸ್ತಿಯ ಮೇಲಿನ ಹಕ್ಕನ್ನು ಎಳ್ಳಷ್ಟೂ ಕಳೆದುಕೊಳ್ಳುವುದಿಲ್ಲ.

ಉಯಿಲು ನಿರ್ವಾಹಕ (EXECUTOR): ಉಯಿಲಿನಲ್ಲಿರುವ ನಿರ್ದೇಶನಗಳಂತೆ ಆಸ್ತಿಗಳ ವಿತರಣೆ ಅಥವಾ ವಿಲೇವಾರಿ ಮಾಡಲೆಂದು ಉಯಿಲು ಕರ್ತನು ತನ್ನ ಉಯಿಲಿನಲ್ಲಿ ಒಬ್ಬ ಉಯಿಲು ನಿರ್ವಾಹಕನನ್ನು ಅಥವಾ ಒಬ್ಬನಿಗಿಂತ ಹೆಚ್ಚು ನಿರ್ವಾಹಕರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಉಯಿಲನ್ನು ನೊಂದಣಿ (Registration) ಮಾಡಿಸುವುದು ಕಡ್ಡಾಯವಲ್ಲ. ಆದರೆ, ನೊಂದಾಯಿತ ಉಯಿಲಿನ ಬಗ್ಗೆ ಅನುಮಾನ ಬಹುಮಟ್ಟಿಗೆ ಕಡಿಮೆಯಾಗುತ್ತದೆ. ಅಲ್ಲದೆ, ಉಯಿಲಿನ ಮೂಲ ಪ್ರತಿ ಕಳೆದುಹೋದ ಸಂದರ್ಭದಲ್ಲಿ ಅದರ ದೃಢೀಕೃತ ನಕಲನ್ನು ಪಡೆದು ಜಾರಿಗೆ ತರಲು ಧನಾತ್ಮಕ ಅವಕಾಶವನ್ನು ಕಲ್ಪಿಸುತ್ತದೆ.

ಉಯಿಲು ಭದ್ರತೆ: ಉಯಿಲುಕರ್ತನು ತನ್ನ ಉಯಿಲನ್ನು ತನ್ನಲ್ಲಿಯೇ ಇರಿಸಿಕೊಳ್ಳಬಹುದು; ಅಥವಾ ತನ್ನ ಯಾವುದೇ ವಿಶ್ವಾಸಿಕರ ಹತ್ತಿರವಾಗಲೀ, ಅಥವಾ ಮೊಹರು ಮಾಡಿದ ಲಕೋಟೆಯೊಳಗೆ ಇಟ್ಟು ನೋಂದಣಾಧಿಕಾರಿ ಕಛೇರಿಯಲ್ಲಾಗಲಿ ಭದ್ರವಾಗಿಡಬಹುದು. ಉಯಿಲು ಕರ್ತನು ಮೃತಪಟ್ಟಲ್ಲಿ ಆತನಿಗೆ ಸಂಬಂಧಿಸಿದವರು ನೋಂದಣಾಧಿಕಾರಿಗೆ ಅರ್ಜಿ ಸಲ್ಲಿಸಿ ಭದ್ರವಾಗಿಟ್ಟ ಉಯಿಲಿನ ಧೃಢೀಕೃತ ನಕಲನ್ನು ನೋಂದಣಾಧಿಕಾರಿಯಿಂದ ಪಡೆದುಕೊಳ್ಳಬಹುದು. ಭದ್ರವಾಗಿಟ್ಟ ಉಯಿಲನ್ನು ಅದರ ಕರ್ತನು ಬಯಸಿದಾಗ ಹಿಂದಕ್ಕೆ ಪಡೆಯಬಹುದು.

ಉಯಿಲಿನ ತಿದ್ದುಪಡಿ: ಉಯಿಲನ್ನು ಮಾಡಿದ ನಂತರ ಉಯಿಲುಕರ್ತನು ತನ್ನ ಜೀವಿತದ ಅವಧಿಯಲ್ಲಿ ಈ ಉಯಿಲಿಗೆ ಯಾವುದೇ ರೀತಿಯಲ್ಲಿ ತಿದ್ದುಪಡಿಯನ್ನು ತರುವ ಹಕ್ಕನ್ನು ಹೊಂದಿರುತ್ತಾನೆ. ಆತನು ಬೇರೆಯದೇ ಆದ ಮತ್ತೊಂದು ದಸ್ತಾವೇಜನ್ನು ಬರೆದು ತಿದ್ದುಪಡಿ ಮಾಡಬೇಕಾಗುತ್ತದೆ. ಈ ದಸ್ತಾವೇಜಿಗೆ ಉಯಿಲಿನ ಅನುಬಂಧ ಅಥವಾ ಕೊಡಿಸಿಲ್ ಎಂದು ಕರೆಯಲಾಗುತ್ತದೆ. ಉಯಿಲು ನೋಂದಾಯಿಸಿದ ಉಯಿಲಾಗಿದ್ದರೆ ಅದಕ್ಕೆ ತಿದ್ದುಪಡಿ ತರುವ ಅನುಬಂಧ ಅಥವಾ ಕೊಡಿಸಿಲ್ ಅನ್ನು ಸಹ ನೋಂದಣಿ ಮಾಡಬೇಕಾಗುತ್ತದೆ. ಮೂಲ ಉಯಿಲನ್ನು ಬರೆಯುವಾಗ ಪಾಲಿಸಬೇಕಾದದ್ದೆಲ್ಲವನ್ನು ಅನುಬಂಧವನ್ನು ಬರೆಯುವಾಗಲೂ ಸಹ ಪಾಲಿಸಬೇಕಾಗುತ್ತದೆ.

ಮೃತ್ಯು ಪತ್ರ ರದ್ದು ಹೇಗೆ: ಮೂಲ ಉಯಿಲು ನೋಂದಣಿಯಾಗಿದ್ದರೆ ಮತ್ತೊಂದು ಉಯಿಲನ್ನು ಬರೆದು ಅದರಲ್ಲಿ ಮೊದಲನೇ ಉಯಿಲನ್ನು ರದ್ದುಗೊಳಿಸಿರುವುದಾಗಿ ಘೋಷಿಸುವ ಮೂಲಕ ಮೂಲ ಉಯಿಲನ್ನು ರದ್ದುಗೊಳಿಸಬಹುದು. ನೋಂದಾಣಿ ಮಾಡಿದ ಉಯಿಲನ್ನು ರದ್ದಿತಿ ಪತ್ರವನ್ನು ಮಾಡಿಸಿ, ಆ ಪತ್ರವನ್ನು ನೊಂದಾಯಿಸುವ ಮೂಲಕವೂ ರದ್ದುಗೊಳಿಸಬಹುದು. ಒಮ್ಮೆ ರದ್ದುಪಡಿಸಿದ ಉಯಿಲನ್ನು ಪುನರುಜ್ಜೀವನಗೊಳಿಸಲಾಗದು. ಆದರೆ ಉಯಿಲಿನಲ್ಲಿಯ ಅಂಶಗಳನ್ನೇ ಅಳವಡಿಸಿ ಮತ್ತೊಂದು ಉಯಿಲನ್ನು ಹೊಸತಾಗಿ ಬರೆಯಬಹುದು.

ಉಯಿಲು ಮತ್ತು ಪ್ರೋಬೆಟ್: ಒಂದು ಉಯಿಲು ನಿಸ್ಸಂದೇಹವಾಗಿ ಸಾಚಾ ಉಯಿಲು (Genuine Will) ಎಂದು ನ್ಯಾಯಾಲಯದಲ್ಲಿ ರುಜುವಾತುಪಡಿಸಿ ಪಡೆಯುವ ಉಯಿಲಿನ ಪ್ರಮಾಣಿತ ಪ್ರತಿಗೆ ಪ್ರೊಬೇಟ್ ಎನ್ನುತ್ತಾರೆ. ಪ್ರೋಬೆಟ್ ಅನ್ನು ನ್ಯಾಯಾಲಯವು ವಿವರವಾಗಿ ವಿಚಾರಣೆ ನಡೆಸಿದ ನಂತರವೇ ಕೊಡುವುದರಿಂದ ಉಯಿಲು ಸಂಶಯಾತೀತವಾಗುತ್ತದಲ್ಲದೆ ಅದರ ಸಿಂಧುತ್ವವನ್ನು ಯಾರೂ ಪ್ರಶ್ನಿಸುವಂತಿಲ್ಲ. ಉಯಿಲಿನ ಜಾರಿಗಾಗಿ ಅದರಲ್ಲಿ ನಿರ್ವಾಹಕನನ್ನು ನೇಮಿಸಿದಲ್ಲಿ ಆತನು ಪ್ರೋಬೆಟನ್ನು ಪಡೆಯಬೇಕಾಗುತ್ತದೆ. ಪ್ರೋಬೆಟ್ ಗಾಗಿ ಅರ್ಜಿ ಸಲ್ಲಿಸಲು ಯಾವುದೇ ಕಾಲ ಪರಿಮಿತಿ ಇರುವುದಿಲ್ಲ.


Share It

You cannot copy content of this page