ಬೆಂಗಳೂರು: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಬೆಂಗಳೂರಿನ ಸೋಮಸಂದ್ರಪಾಳ್ಯ ನಿವಾಸಿ ರಾಜು(25) ಶಿಕ್ಷೆಗೊಳಗಾದ ಅಪರಾಧಿ. ಈತನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನಗರದ 1ನೇ ಎಫ್.ಟಿ.ಎಸ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್ ರೂಪ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಪೋಷಕರಿಗೆ 9 ಲಕ್ಷ ಪರಿಹಾರ: ಮಗಳನ್ನು ಕಳೆದುಕೊಂಡಿರುವ ಪೋಷಕರಿಗೆ 9 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಕೋರ್ಟ್ ನಿರ್ದೇಶಿಸಿದೆ. ಇದೇ ವೇಳೆ ಆರೋಪಿಗೆ ಐಪಿಸಿ ಸೆಕ್ಷನ್ 302 ಅಡಿ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ ದಂಡ, ಪೋಕ್ಸೊ ಕಾಯ್ದೆಯ ಸೆಕ್ಷನ್ 4 ರ ಅಡಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ ದಂಡ, ಸೆಕ್ಷನ್ 6 ಅಡಿ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ ದಂಡ, ಐಪಿಸಿ ಸೆಕ್ಷನ್ 363 ಅಡಿ 2 ವರ್ಷ ಜೈಲು ಹಾಗೂ 25 ಸಾವಿರ ರೂ ದಂಡ ವಿಧಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ ರಾಜು ಅಪ್ರಾಪ್ತ ಬಾಲಕಿಯೊಂದಿಗೆ ಪ್ರೀತಿ ಪ್ರೇಮದ ಹೆಸರಿನಲ್ಲಿ ಆಪ್ತನಾಗಿದ್ದು, ಲಾಕ್ ಡೌನ್ ಸಮಯದಲ್ಲಿ ಆಕೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲದೇ, ಕಾಲೇಜಿನಿಂದ ಬೇಗ ಬರುವ ದಿನಗಳಲ್ಲೂ ತನ್ನ ಮನೆಗೆ ಕರೆದೊಯ್ಯುತ್ತಿದ್ದ. ಈ ವಿಚಾರ ತಿಳಿದು ಅಪ್ರಾಪ್ತ ಬಾಲಕಿಯ ಪೋಷಕರು ಬುದ್ದಿ ಹೇಳಿದ ನಂತರ ಆಕೆ ರಾಜುವಿನಿಂದ ಅಂತರ ಕಾಯ್ದುಕೊಂಡಿದ್ದಳು.
2021ರ ಏಪ್ರಿಲ್ 3ರಂದು ಬಾಲಕಿಯನ್ನು ಬಲವಂತವಾಗಿ ಮನೆಗೆ ಕರೆದೊಯ್ದು ಆಕೆಯ ಮೇಲೆ ಹಲ್ಲೆ ಮಾಡಿ, ಬಟ್ಟೆ ಒಣ ಹಾಕುವ ವೈರನ್ನು ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ. ಈ ಸಂಬಂಧ ಬಂಡೆಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆಪಟ್ಟಿ ಸಲ್ಲಿಸಿದ್ದರು. ಒಟ್ಟು 42 ಸಾಕ್ಷಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದೆ. ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕರಾದ ಪಿ.ಕೃಷ್ಣವೇಣಿ ವಾದ ಮಂಡಿಸಿದ್ದರು.