ಸಾಮಾಜಿಕ ಜಾಲತಾಣದಲ್ಲಿ ನ್ಯಾಯಾಧೀಶರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದ ವ್ಯಕ್ತಿಗೆ ಮಧ್ಯಪ್ರದೇಶ ಹೈಕೋರ್ಟ್ 10 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಜಿಲ್ಲಾ ನ್ಯಾಯಾಧೀಶರೊಬ್ಬರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಕೃಷ್ಣಕುಮಾರ್ ರಘುವಂಶಿ ಎಂಬುವರಿಗೆ 10 ದಿನಗಳ ಜೈಲು ಶಿಕ್ಷೆ ಹಾಗೂ 2 ಸಾವಿರ ರೂಪಾಯಿ ದಂಡ ವಿಧಿಸಿ ಮುಖ್ಯ ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾ. ವಿಶಾಲ್ ಮಿಶ್ರಾ ಅವರಿದ್ದ ವಿಭಾಗೀಯ ಪೀಠ ಆದೇಶ ಹೊರಡಿಸಿದೆ.
ದೇವಸ್ಥಾನದ ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದ್ದ ಜಿಲ್ಲಾ ನ್ಯಾಯಾಧೀಶರು, ಭಕ್ತರು ಕಾಣಿಕೆ ಹಾಕಿರುವ ದೇವಸ್ಥಾನದ ಹುಂಡಿಗೆ ಬೀಗ ಹಾಕುವಂತೆ ಹಾಗೂ ಭಕ್ತರು ನೀಡಿರುವ ದೇಣಿಗೆ ಹಣವನ್ನು ಟ್ರಸ್ಟ್ ಹೆಸರಿನಲ್ಲಿ ಠೇವಣಿ ಇರಿಸುವಂತೆ ನಿರ್ದೇಶಿಸಿದ್ದರು. ಈ ವಿಚಾರವಾಗಿ ಕೃಷ್ಣಕುಮಾರ್ ರಘುವಂಶಿ ಆಧಾರ ರಹಿತವಾಗಿ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದರು.
ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ವಿಚಾರವನ್ನು ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್ ಗಮನಕ್ಕೆ ತಂದಿದ್ದರು. ಈ ಕುರಿತಂತೆ ಹೈಕೋರ್ಟ್ ಆರೋಪ ಮಾಡಿದ್ದ ವ್ಯಕ್ತಿ ವಿರುದ್ಧ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿಕೊಂಡಿತ್ತು. ಇದಕ್ಕೂ ಮುನ್ನ ನ್ಯಾಯಾಧೀಶರ ವಿರುದ್ಧದ ಆರೋಪಗಳ ಕುರಿತು ವಿಚಾರಣೆ ನಡೆಸಿ ವರದಿ ತರಿಸಿಕೊಂಡಿತ್ತು. ಮೇಲ್ನೋಟಕ್ಕೆ ಆರೋಪ ಮಾಡಿದ್ದ ವ್ಯಕ್ತಿ ಕೃಷ್ಣಕುಮಾರ್ ರಘುವಂಶಿ ತಪ್ಪಿತಸ್ಥ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಅಡಿ ಪ್ರಕರಣ ದಾಖಲಿಸಿಕೊಂಡಿತ್ತು.
(CONTEMPT PETITION CRIMINAL No. 5 of 2020)