News

ಪತ್ನಿ ಮಕ್ಕಳಿಗೆ ಜೀವನಾಂಶ: ಸಂಪಾದನೆ ಕಡಿಮೆ ಇದ್ದರೆ ಪತಿ ಬದಲಿ ಕೆಲಸ ಮಾಡಲಿ ಎಂದ ಹೈಕೋರ್ಟ್

Share It

ಬೆಂಗಳೂರು: ನಾನು ದಿನಕ್ಕೆ 200 ರೂಪಾಯಿಯನ್ನಷ್ಟೇ ದುಡಿಯುತ್ತಿದ್ದು, ಪತ್ನಿ ಹಾಗೂ ಅಪ್ರಾಪ್ತ ಮಗಳಿಗೆ ಪ್ರತಿ ತಿಂಗಳು 3,500 ರೂಪಾಯಿಯನ್ನು ಜೀವನಾಂಶವಾಗಿ ನೀಡಲು ಸಾಧ್ಯವಿಲ್ಲ ಎಂದು ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಇದೇ ವೇಳೆ ಆದಾಯ ಕಡಿಮೆ ಎಂಬ ಕಾರಣವನ್ನು ಪರಿಗಣಿಸಲು ಒಪ್ಪದ ಹೈಕೋರ್ಟ್, ಅರ್ಜಿದಾರ ಪತಿ ಈಗ ಮಾಡುತ್ತಿರುವ ಕೆಲಸದಲ್ಲಿ ಸಂಪಾದನೆ ಕಡಿಮೆ ಇದ್ದರೆ ಬದಲಿ ಕೆಲಸ ಮಾಡಲಿ. ಆದರೆ, ಪತ್ನಿ ಹಾಗೂ ಮಗಳಿಗೆ ಕನಿಷ್ಟ ಜೀವನಾಂಶ ನೀಡುವುದರಿಂದ ತಪ್ಪಿಸಿಕೊಳ್ಳಲಾಗದು ಎಂದು ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ ಆದೇಶಿಸಿದೆ.

ವಿಚಾರಣೆ ವೇಳೆ ಅರ್ಜಿದಾರ ವ್ಯಕ್ತಿಯ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ಅರ್ಜಿದಾರರು ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಾರೆ. ಅವರಿಗೆ ದಿನಕ್ಕೆ 150-200 ರೂಪಾಯಿಯಷ್ಟೇ ಸಂಪಾದನೆ ಇರುವುದು. ಆದರೆ, ವಿಚಾರಣಾ ನ್ಯಾಯಾಲಯ ಪತ್ನಿ ಹಾಗೂ ಪುತ್ರಿಗೆ ಪ್ರತಿ ತಿಂಗಳೂ 3500 ರೂಪಾಯಿ ನೀಡುವಂತೆ ಆದೇಶಿಸಿದೆ. ತಿಂಗಳಿಗೆ 6 ಸಾವಿರ ಸಂಪಾದನೆ ಇರುವ ವ್ಯಕ್ತಿ 3500 ರೂಗಳನ್ನು ಜೀವನಾಂಶವಾಗಿ ನೀಡಲು ಕಷ್ಟಸಾಧ್ಯ. ಹೀಗಾಗಿ ಜೀವನಾಂಶ ಮೊತ್ತವನ್ನು ಕಡಿಮೆ ಮಾಡಬೇಕು ಎಂದರು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ದಿನಕ್ಕೆ 200 ರೂಪಾಯಿ ಅಷ್ಟೇ ಸಂಪಾದನೆಯೇ ಎಂದು ಪ್ರಶ್ನಿಸಿತು. ವಕೀಲರು ಹೌದೆಂದರು. ಇದನ್ನು ಒಪ್ಪದ ಪೀಠ, ನೀವು ಹೇಳುವಷ್ಟೇ ಸಂಪಾದನೆ ಇರುವುದು ನಿಜವಾದರೆ ಬದಲಿ ಕೆಲಸ ಮಾಡಲು ಹೇಳಿ. ಈಗ ಜೀವನಾಂಶವಾಗಿ ಕೊಡಲು ಹೇಳಿರುವ ಮೊತ್ತವೇ ಕಡಿಮೆ ಇದೆ. ಅದಕ್ಕಿಂತ ಕಡಿಮೆ ಕೊಡುವಂತೆ ಹೇಳುವುದು ಹೇಗೆ ಎಂದು ಪೀಠ ಅರ್ಜಿದಾರರ ಮನವಿಗೆ ಬೇಸರ ವ್ಯಕ್ತಪಡಿಸಿತು. ಅಲ್ಲದೇ, ಪ್ರತಿವಾದಿ ಮಹಿಳೆ ಹೆಚ್ಚಿಗೆ ಕೇಳಿ ಅರ್ಜಿ ಸಲ್ಲಿಸಿದ್ದರೆ ಅದನ್ನು ಪರಿಗಣಿಸುತ್ತಿದ್ದೆವು ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಅರ್ಜಿದಾರರ ಮನವಿಯನ್ನು ವಜಾಗೊಳಿಸಿತು.

ಪ್ರಕರಣದ ಹಿನ್ನೆಲೆ: ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಪತ್ನಿ ಹಾಗೂ ಮೂರೂವರೆ ವರ್ಷದ ಮಗಳು ಜೀವನಾಂಶ ಕೋರಿ ಸಿಆರ್ಪಿಸಿ 125 ಅಡಿ ಕನಕಪುರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ್ದ ನ್ಯಾಯಾಲಯ ತಿಂಗಳಿಗೆ ಮೂರೂವರೆ ಸಾವಿರ ಜೀವನಾಂಶ ನೀಡುವಂತೆ ಆದೇಶಿಸಿದೆ. ಈ ಮೊತ್ತ ಹೆಚ್ಚಿನದ್ದಾಗಿದೆ ಎಂದು ಆಕ್ಷೇಪಿಸಿ ಪತಿರಾಯ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

(CRL.P 4198/2023)


Share It

You cannot copy content of this page