Columns

ಪಿತ್ರಾರ್ಜಿತ ಸ್ವತ್ತು ವಿಭಾಗ ಹೇಗೆ? ಎಷ್ಟು ತಲೆಮಾರು ಪಾಲು ಪಡೆಯಲು ಅರ್ಹರು?

Share It

ಲೇಖಕರು: ಸಂಗಮೇಶ್ ಎಂ.ಎಚ್. ವಕೀಲರು. ಮೊ:8880722220

ಪಿತ್ರಾರ್ಜಿತ ಸ್ವತ್ತಿನಲ್ಲಿ ಎಷ್ಟು ತಲೆಮಾರು ಪಾಲು ಪಡೆಯಲು ಅರ್ಹರು? ಗಿಫ್ಟ್ ಡೀಡ್ ಮೂಲಕ ಪಿತ್ರಾರ್ಜಿತ ಆಸ್ತಿಯನ್ನು ಪಡೆದರೆ ಅದಕ್ಕೆ ಮಾನ್ಯತೆ ಇದೆಯೇ? ರಾಜ್ಯದಲ್ಲಿ ಬಹುತೇಕ ಕುಟುಂಬಗಳು ಪಿತ್ರಾರ್ಜಿತ ಆಸ್ತಿ ಹೊಂದಿವೆ. ಆದ್ರೆ ಪಿತ್ರಾರ್ಜಿತ ಆಸ್ತಿಯಲ್ಲಿನ ಹಕ್ಕು, ಪಾಲು ಯಾರಿಗೆಲ್ಲಾ ಇರುತ್ತದೆ? ಎಷ್ಟು ತಲೆಮಾರುವರೆಗೂ ಆಸ್ತಿ ಹಕ್ಕು ಹೊಂದಿರುತ್ತದೆ ಎಂಬುದರ ಸಮಗ್ರ ಮಾಹಿತಿ ಇಲ್ಲಿ ತಿಳಿಯೋಣ.

ಪಿತ್ರಾರ್ಜಿತ ಆಸ್ತಿ ಎಂದರೇನು?: ಯಾವುದೇ ಒಂದು ಸ್ವತ್ತನ್ನು ವಂಶಪಾರಂಪರ್ಯಯಾಗಿ ಅನುಭವಿಸಿಕೊಂಡು ಬರುತ್ತಿದ್ದು ಅದು ತಾತನಿಂದ ಮೊಮ್ಮಕ್ಕಳಿಗೆ, ಮರಿ ಮಕ್ಕಳಿಗೆ, ಕುಟುಂಬ ನಾಲ್ಕು ತಲೆಮಾರುಗಳಿಂದ ಹೊಂದಿರುವ ಒಟ್ಟು ಕುಟುಂಬದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಕರೆಯುತ್ತೇವೆ. ಒಮ್ಮೆ ಕುಟುಂಬದ ಯಜಮಾನನಿಂದ ಹಕ್ಕುದಾರರಿಗೆ ಆಸ್ತಿ ಇಬ್ಬಾಗವಾಗಿ ಹಂಚಿಕೆ ಮಾಡಿದ ಬಳಿಕ ಅದು ಸ್ವಯಾರ್ಜಿತ ಆಸ್ತಿಯಾಗಿ ಬದಲಾಗುತ್ತದೆ.

ಮುತ್ತಾತನ ಆಸ್ತಿಯಲ್ಲಿ ಮೊಮ್ಮಗ ಪಾಲು ಪಡೆಯಲು ಅರ್ಹರಾಗಿರುತ್ತಾರೆ. ಪಿತ್ರಾರ್ಜಿತ ಆಸ್ತಿಯಲ್ಲಿ ನಾಲ್ಕು ತಲೆಮಾರಿನವರು ಪಾಲು ಪಡೆಯಲು ಅರ್ಹರಾಗಿರುತ್ತಾರೆ. ಪಿತ್ರಾರ್ಜಿತ ಆಸ್ತಿಯನ್ನು ವಿಭಾಗ ಪತ್ರದ ಮೂಲಕ ಅಥವಾ ಕುಟುಂಬದ ಕರಾರು ಪತ್ರ ಅಥವಾ ಪಂಚಾಯಿತಿ ಪಾಲು ಪಟ್ಟಿ ಮೂಲಕ ಆಸ್ತಿಯನ್ನು ಭಾಗ ಮಾಡಿಕೊಂಡು ಪಾಲು ಪಡೆದುಕೊಳ್ಳಬಹುದು. 2005 ರಲ್ಲಿ ಹಿಂದೂ ಉತ್ತರದಾಯಿತ್ವ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಹೆಣ್ಣು ಮಕ್ಕಳು ಸಹ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಹಕ್ಕು ಪಡೆದುಕೊಂಡರು. ಈ ತಿದ್ದಪಡಿ ಕಾಯ್ದೆ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಹಾಗೂ ಅವರ ಮಕ್ಕಳು ಸಹ ತಮ್ಮ ಪಾಲು ಪಡೆಯಲು ಅರ್ಹರು.

ಅವಿಭಜಿತ ಆಸ್ತಿ ಎಂದರೇನು?: ಅವಿಭಜಿತ ಆಸ್ತಿ ಎಂದರೆ ಕುಟುಂಬದ ಮುಖ್ಯಸ್ಥರು ತಾವು ಸಂಪಾದನೆ ಮಾಡಿದ ಅಥವಾ ತಮಗೆ ಪಿತ್ರಾರ್ಜಿತವಾಗಿ ಬಂದಂತಹ ಸ್ವತ್ತುಗಳನ್ನು ತಮ್ಮ ಮಕ್ಕಳಿಗೆ ಅಥವಾ ಅಣ್ಣ ತಮ್ಮಂದಿರುಗಳಿಗೆ ವಿಭಾಗ ಮಾಡಿಕೊಳ್ಳದೆ ಮೂಲಪುರುಷನ ಹೆಸರಿನಲ್ಲಿ ಖಾತೆ ಮುಂದುವರಿಸಿಕೊಂಡು ಬಂದಿದ್ದರೆ ಅದನ್ನು ಅವಿಭಾಜ್ಯ ಸ್ವತ್ತು ಎಂದು ಕರೆಯುತ್ತಾರೆ.

ಗಿಫ್ಟ್ ಡೀಡ್ ಮೂಲಕ ಪಿತ್ರಾರ್ಜಿತ ಆಸ್ತಿ ಪಡೆಯಬಹುದೇ?: ಕುಟುಂಬದ ಯಜಮಾನ ವಿಲ್ ಅಥವಾ ಗಿಫ್ಟ್ ಡೀಡ್ ಮೂಲಕ ಪಿತ್ರಾರ್ಜಿತ ಆಸ್ತಿಯನ್ನು ಬರೆದುಕೊಟ್ಟರೆ ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಇರುವುದಿಲ್ಲ. ಅಂತಹ ಪತ್ರಗಳಿಂದ ಆಸ್ತಿಯ ಹಕ್ಕುಗಳು ಬದಲಾಗುವುದಿಲ್ಲ. ಆದ್ರೆ ಒಬ್ಬ ತಂದೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆದು ಅದನ್ನು ತನಗೆ ಇಷ್ಟ ಬಂದವರಿಗೆ ಗಿಫ್ಟ್ ಡೀಡ್ ಮೂಲಕ ನೀಡಿದರೆ ಅಥವಾ ವಿಲ್ ಮೂಲಕ ಬರೆದಿಟ್ಟಿದ್ದರೆ ಅಂತಹ ದಾಖಲೆಗಳು ಕಾನೂನು ಅಡಿ ಮಾನ್ಯತೆ ಪಡೆದುಕೊಳ್ಳುತ್ತವೆ. ಆಸ್ತಿಯ ಹಕ್ಕುಗಳು ವರ್ಗಾವಣೆ ಆಗುತ್ತವೆ.

ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ಹಕ್ಕು ಏನು ಹೇಳುತ್ತದೆ?: ಒಬ್ಬ ವ್ಯಕ್ತಿ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆದು ಸ್ವಯಾರ್ಜಿತವಾದ ಬಳಿಕ, ಅಂತಹ ಆಸ್ತಿಯನ್ನು ಆ ವ್ಯಕ್ತಿ ತನ್ನ ಮಕ್ಕಳಿಗೆ ಬಿಟ್ಟು ಕೊಡದೇ ಅದರಲ್ಲಿ ಮಕ್ಕಳು ಪಾಲು ಪಡೆಯಲು ಅನರ್ಹರು. ಒಬ್ಬ ವ್ಯಕ್ತಿಗೆ ಸ್ವಯಾರ್ಜಿತವಾಗಿ ಬಂದಿರುವ ಮನೆ ಇದೆ ಎಂದಿಟ್ಟುಕೊಳ್ಳಿ. ವಯಸ್ಕ ಮಗಳು ಅಥವಾ ಮಗ ತನ್ನ ಪಾಲು ಕೇಳುವಂತಿಲ್ಲ. ಪೋಷಕರು ಇಷ್ಟಪಟ್ಟರೆ ಆ ಮನೆಯಲ್ಲಿ ವಾಸ ಮಾಡಬಹುದು ವಿನಃ ಪಾಲು ಪಡೆಯಲು ಆಗದು. ಈ ಆಸ್ತಿಯ ಮೇಲೆ ಮಕ್ಕಳು ಯಾವುದೇ ಹಕ್ಕು ಸಾಧಿಸಲು ಬರುವುದಿಲ್ಲ. ಈ ಕುರಿತು ದೆಹಲಿ ಹೈಕೋರ್ಟ್ 2016 ರಲ್ಲಿ ನೀಡಿರುವ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಹಿರಿಯ ನಾಗರಿಕರ ಆಧಾರವಾಗಿರುವ ಆಸ್ತಿಯನ್ನು ಮಕ್ಕಳು ಸ್ವಾಧೀನ ಪಡಿಸಿಕೊಂಡಿದ್ದರೆ, ಅಂತಹ ಆಸ್ತಿಯನ್ನು ಸಹ ಮಕ್ಕಳು ತಮ್ಮ ಪಾಲಕರಿಗೆ ಬಿಟ್ಟುಕೊಡಬೇಕು. ಬಿಟ್ಟುಕೊಡದಿದ್ದ ಪಕ್ಷದಲ್ಲಿ ಅವರನ್ನು ತೆರವುಗೊಳಿಸಬಹುದು ಎಂದು ಸಹ ದೆಹಲಿ ಹೈಕೋರ್ಟ್ 2018 ರಲ್ಲಿ ತೀರ್ಪನ್ನು ನೀಡಿದೆ. ಒಬ್ಬ ವ್ಯಕ್ತಿ ತನ್ನ ಸ್ವಯಾರ್ಜಿತ ಆಸ್ತಿಯನ್ನು ತನಗೆ ಇಷ್ಟ ಬಂದವರಿಗೆ ಮಾರಾಟ ಮಾಡಬಹುದು ಅಥವಾ ಮಕ್ಕಳಿಗೆ ನೀಡಬಹುದು.

ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರ ಪಾಲು: ಹಿಂದೂ ಉತ್ತರ ದಾಯಿತ್ವ ಕಾಯಿದೆ 1956 ಕ್ಕೆ ತಿದ್ದುಪಡಿ ತರುವ ಮುನ್ನ ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಹಕ್ಕು ಇರಲಿಲ್ಲ. 2005 ರಲ್ಲಿ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಸಮಪಾಲು ಹಕ್ಕು ಲಭ್ಯವಾಯಿತು. ಹೆಣ್ಣು ಮಕ್ಕಳ ಮಕ್ಕಳು ಅಥವಾ ಮೊಮ್ಮಕ್ಕಳು ಸಹ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರು. ಮಹಿಳೆ ಮದುವೆಯಾದ ಬಳಿಕವೂ ಪಿತ್ರಾರ್ಜಿತ ಸ್ವತಿನಲ್ಲಿ ಭಾಗ ಪಡೆಯಲು ಅರ್ಹ ರಾಗಿರುತ್ತರೆ.


Share It

You cannot copy content of this page