ಲೇಖಕರು: ಪದ್ಮಶ್ರೀ.ಬಿ.ಎಲ್.ಬಿಳಿಯ, ವಕೀಲರು. ಮೊ:9741628251
ಭ್ರಷ್ಟಾಚಾರ ಎಂದಾಕ್ಷಣ ನಮ್ಮ ಮನಸಿಗೆ ಬರೋ ಆಲೋಚನೆ ಎಂದರೆ “ದೊಡ್ಡ ಮಟ್ಟದ ಹಗರಣ”. ಆದರೆ, ಭ್ರಷ್ಟಾಚಾರ ಆರಂಭವಾಗುವುದು ಮನುಷ್ಯನ ಮೂಲ ಅವಶ್ಯಕತೆಗಿಂತಲೂ ಹೆಚ್ಚು ಅವನ ದುರಾಸೆಯ ಪ್ರತಿರೂಪವಾಗಿ. ಭ್ರಷ್ಟಾಚಾರವನ್ನು ಕಾನೂನಾತ್ಮಕವಾಗಿ ನಿಗ್ರಹಿಸಬಹುದು.
ಭ್ರಷ್ಟಾಚಾರದ ಅಡಿಯಲ್ಲಿ ಲಂಚ ತೆಗೆದುಕೊಳ್ಳುವವರು ಎಷ್ಟು ಭಾಧ್ಯರೋ ಲಂಚ ಕೊಡುವವರು ಕೂಡಾ ಅಷ್ಟೇ ಭಾಧ್ಯರು. ಇದರಿಂದಾಗಿ, ಮಾನವನ ನೈತಿಕತೆ ಮೇಲೆ ದುಷ್ಪರಿಣಾಮ ಬೀರುತ್ತದೆ ಹಾಗೂ ದೇಶದ ಆರ್ಥಿಕ ಸ್ವಾಸ್ತ್ಯ ಹದಗೆಡುತ್ತದೆ. ಭ್ರಷ್ಟಾಚಾರ ಎನ್ನುವುದು “ಆರ್ಥಿಕ ಅಪರಾಧ”.
ಹೆಚ್ಚು ಭ್ರಷ್ಟಾಚಾರ ಹೊಂದಿದ ಇಲಾಖೆಗಳು ಎಂದರೆ ಭೂ ದಾಖಲೆ ಮತ್ತು ಕಂದಾಯ ಇಲಾಖೆ, ಮಾಧ್ಯಮ ಸಂಪರ್ಕ ಇಲಾಖೆ, ಅಭಿವೃದ್ಧಿ ಯೋಜನೆಗಳ ಇಲಾಖೆ, ಗಣಿಗಾರಿಕೆ, ತೈಲೋತ್ಪಾದನಗಳ ಇಲಾಖೆಗಳು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೆಂದೇ “ಭ್ರಷ್ಟಾಚಾರ ತಡೆ ಕಾಯ್ದೆ, 1988” ಎಂಬ ಕಾನೂನು ತರಲಾಗಿದೆ. ಈ ಕಾಯಿದೆಯು ಪ್ರಮುಖವಾಗಿ ಭಾರತದಲ್ಲಿನ ಸರ್ಕಾರಿ ನಿಯೋಜಿತ ಸಂಸ್ಥೆಗಳು ಹಾಗೂ ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ರೂಪುಗೊಂಡಿದೆ.
ಈ ಕಾಯ್ದೆಯು 9 ಸೆಪ್ಟೆಂಬರ್ 1988 ರಂದು ಸಂಸತ್ ನಲ್ಲಿ ಜಾರಿಗೊಳಿಸಲಾಯಿತು ಮತ್ತು ಪ್ರತಿಯೊಬ್ಬ ಭಾರತೀಯ ನಾಗರೀಕನಿಗೂ ಅನ್ವಯವಾಗುತ್ತದೆ. ಈ ಕಾಯಿದೆಯು 5 ಅಧ್ಯಯ 31 ಪರಿಚ್ಛೇದಗಳನ್ನು ಒಳಗೊಂಡಿದೆ. ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಸಲು ಸ್ಪೆಷಲ್ ಕೋರ್ಟ್ ಗಳನ್ನು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಫೀಷಿಯಲ್ ಗೆಜೆಟ್ ಮೂಲಕ ನೋಟಿಫಿಕೇಟಿನ್ ನಿಯೋಜಿಸುತ್ತದೆ. ಈ ಪ್ರಕರಣಗಳ ಸ್ಪೆಷಲ್ ಜಡ್ಜ್ ಸೆಷನ್ಸ್ ಜಡ್ಜ್ / ಹೆಚ್ಚುವರಿ ಸೆಷನ್ಸ್ ಜಡ್ಜ್ / ಸಹಾಯಕ ಸೆಷನ್ಸ್ ಜಡ್ಜ್ ಆಗಿರುತ್ತಾರೆ.
ಈ ಕಾಯ್ದೆ ಜೊತೆ ಬೇರೆ ಕಾಯ್ದೆಯ ಅಪರಾಧಗಳನ್ನು ಆಪಾದಿತನ ವಿರುದ್ಧ ಚಾರ್ಜ್ ಮಾಡುವಾಗ ಸೇರಿಸಿ ವಿಚಾರಣೆ ಮಾಡಲು ಅವಕಾಶವಿದೆ. ವಿಚಾರಣೆಯನ್ನು ಪ್ರತಿದಿನ ಮಾಡಬೇಕಾಗಿರುತ್ತದೆ. ವಿಚಾರಣೆಯನ್ನು ವಾರಂಟ್ ಕೇಸ್ ಮಾದರಿಯಲ್ಲಿ ನಡೆಸಬೇಕಾಗುತ್ತದೆ. ಆಪಾಧಿತನು ಅಪರಾಧಕ್ಕೆ ಸಂಬಂಧಪಟ್ಟ ವಿವರಣೆ ಬಗ್ಗೆ ತನಗೆ ತಿಳಿದಂತೆ ಸಂಪೂರ್ಣ ಮಾಹಿತಿಯ ಸತ್ಯಾಂಶವನ್ನು ತಿಳಿಸಬೇಕು. ಅಪರಾಧವು ತೀವ್ರ ಸ್ವರೂಪವೆಂದು ಕಂಡು ಬಂದರೆ, ಸ್ಪೆಷಲ್ ಜಡ್ಜ್ ಅಪರಾಧಿಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ. ಸಾರ್ವಜನಿಕ ಸೇವಕ ಅನಗತ್ಯ ಪ್ರಯೋಜನವನ್ನು ದುರುದ್ದೇಶದಿಂದ ಪಡೆದುಕೊಂಡು ಸಾರ್ವಜನಿಕ ಸೇವೆಯನ್ನು ಪ್ರಾಮಾಣಿಕವಾಗಿ ಮಾಡದೆ ಇದ್ದರೆ ಜೂಲ್ಮನೆ ಜೊತೆ 3-5 ವರ್ಷ ಜೈಲು ಶಿಕ್ಷೆಯಾಗುತ್ತದೆ.
ಸಾರ್ವಜನಿಕ ಕೆಲಸವನ್ನು ವೈಯಕ್ತಿಕ ಶಿಫಾರಸ್ಸು ಪಡೆದುಕೊಂಡು ದುರಾಸೆಯ ಪ್ರತಿರೂಪವನ್ನು ವ್ಯಕ್ತಪಡಿಸಿದರೆ ಅಂತಹ ಸಾರ್ವಜನಿಕ ಅಧಿಕಾರಿಗೆ ಜುಲ್ಮಾನೆ ಸಹಿತ 6 ತಿಂಗಳಿಂದ 5 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಸಾರ್ವಜನಿಕ ಅಧಿಕಾರಿಯು ಕುಮ್ಮಕ್ಕು ಉಪಯೋಗ ಮಾಡಿ ತನ್ನ ಹುದ್ದೆಯನ್ನು ದುರುಪಯೋಗ ಮಾಡಿಕೊಂಡರು ಕೂಡಾ ಭ್ರಷ್ಟಾಚಾರದ ಸ್ವರೂಪವಾಗುವುದು ಹಾಗೆ 6 ತಿಂಗಳಿಂದ 5 ವರ್ಷದವರೆಗೂ ಸಜೆ ಹಾಗೂ ದಂಡ ವಿಧಿಸಲಾಗುವುದು. ಸಾಮಾನ್ಯ ವ್ಯಕ್ತಿಯು ಯಾವುದಾದರು ವಿಚಾರಣೆಗೆ ಒಳಗಾದಲ್ಲಿ ಅಥವಾ ಸರ್ಕಾರಿ ವ್ಯವಹಾರಕ್ಕೆ ಸಂಬಂಧಪಟ್ಟಿದ್ದರೆ, ಅಂತಹ ವ್ಯಕ್ತಿಯಿಂದ ಯಾವುದೇ ದುಬಾರಿ ಬೆಲೆಬಾಳುವ ವಸ್ತುವನ್ನು ಸಾರ್ವಜನಿಕ ಅಧಿಕಾರಿಯು ಪಡೆದುಕೊಂಡರೆ ಅಂತಹ ವ್ಯಕ್ತಿಗೆ ಜುಲ್ಮಾನೆ ಸಹಿತ 6 ತಿಂಗಳಿಂದ 5 ವರ್ಷದವರೆಗೂ ಶಿಕ್ಷೆ ನೀಡಲಾಗುವುದು.
ಸಾರ್ವಜನಿಕ ಅಧಿಕಾರಿಗಳು ಕ್ರಿಮಿನಲ್ ದುಷ್ಕೃತ್ಯ ಎಸಗಿದರೆ 1 ವರ್ಷದಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಜುಲ್ಮಾನೆ ವಿಧಿಸಲಾಗುವುದು. ಅಭ್ಯಾಸ ಬದ್ಧತೆಯಿಂದ ಕೂಡಿದ ಕೃತ್ಯವನ್ನು ಸಾರ್ವಜನಿಕ ಅಧಿಕಾರಿಗಳು ಮಾಡಿದ್ದಲ್ಲಿ 2 ವರ್ಷದಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಜುಲ್ಮಾನೆ ವಿಧಿಸಲಾಗುತ್ತದೆ. ಸಾರ್ವಜನಿಕ ಅಧಿಕಾರಿಗಳು ನೈತಿಕವಾಗಿ, ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾಗಿ ಬದ್ದರಾಗಿರುತಾರೆ. ಸಾರ್ವಜನಿಕ ಕರ್ತವ್ಯವನ್ನು ನಿರ್ವಹಿಸದಿರುವುದು ಕೂಡಾ ಭ್ರಷ್ಟಾಚಾರದ ಭಾಗವಾಗಿರುತ್ತದೆ ಹಾಗೂ ಶಿಕ್ಷರ್ಹವಾಗಿರುತ್ತದೆ.
ಭ್ರಷ್ಟಾಚಾರದ ಕೃತ್ಯವನ್ನು ತನಿಖೆ ನಡೆಸುವ ಬಗೆ ಹೇಗೆ ಅನ್ನೋದಾದ್ರೆ ಪೊಲೀಸ್ ಆಫೀಸರ್ಕ್ಕಿಂತ ಕೆಳಗಿನ ಅಧಿಕಾರಿಗಳು ತನಿಖೆ ನಡೆಸುವ ಹಾಗಿಲ್ಲ. ಒಂದು ವೇಳೆ ದೆಹಲಿ ಸ್ಪೆಷಲ್ ಪೊಲೀಸ್ ಎಷ್ಟಾಬ್ಲಿಷ್ಮೆಂಟ್ನಿಂದ ತನಿಖೆ ನಡೆಸುವುದಾದರೆ, ಪೊಲೀಸ್ ಇನ್ಸ್ಪೆಕ್ಟರ್ ತನಿಖೆ ನಡೆಸಬೇಕು. ಮೆಟ್ರೋಪಾಲಿಟನ್ ಏರಿಯಾಗಳಲ್ಲಿ ಅಸಿಸ್ಟೆಂಟ್ ಕಮಿಷನರ್ ಒಫ್ ಪೊಲೀಸ್ ತನಿಖೆ ಕೈಗೊಳ್ಳಬೇಕು. ಮೆಟ್ರೋಪಾಲಿಟನ್ ಹೊರತುಪಡಿಸಿದ ಜಾಗಗಳಲ್ಲಿ ಡೆಪ್ಯೂಟಿ ಸುಪರಿಂಟೆಂಡೆಂಟ್ ಒಫ್ ಪೊಲೀಸ್ ತನಿಖೆ ನಡೆಸಬೇಕು. (ಆದರೆ, ಮೆಟ್ರೋಪೋಲೀಟನ್ ಮ್ಯಾಜಿಸ್ಟ್ರೇಟ್ ಆರ್ಡರ್ ಹಾಗೆ ವಾರಂಟ್ ಇಲ್ಲದೆ ಅರೆಸ್ಟ್ ಮಾಡುವ ಹಾಗಿಲ್ಲ). ಒಂದು ವೇಳೆ, ಪೊಲೀಸ್ ಇನ್ಸ್ಪೆಕ್ಟರ್ ತನಿಖೆ ನಡೆಸಬೇಕಾದರೆ ರಾಜ್ಯ ಸರ್ಕಾರದಿಂದ ಸಾಮಾನ್ಯ/ಸ್ಪೆಷಲ್ ಆರ್ಡರ್ ಪಡೆದಿರಬೇಕು. ಸೆಕ್ಷನ್ 13 (1) (e) ರ ಅಡಿಯಲ್ಲಿ ತನಿಖೆಯನ್ನು ಕೇವಲ ಸೂಪರ್ಇನ್ಟೆಂಡೆಂಟ್ ಆಫ್ ಪೊಲೀಸ್ ನಡೆಸಬೇಕು. ಒಂದು ವೇಳೆ ಅವರಿಗಿಂತ ಕೆಳ ದರ್ಜೆಯ ಅಧಿಕಾರಿ ನಡೆಸಿದರೆ, ಸೂಪರ್ಇನ್ಟೆಂಡೆಂಟ್ ಒಫ್ ಪೊಲೀಸ್ ಆಜ್ಞೆ ಕಡ್ಡಾಯವಾಗಿ ಇರಲೇಬೇಕು. ಇಲ್ಲದಿದ್ದರೆ, ತನಿಖೆಯು ಅಮಾನ್ಯ/ರದ್ದತಿ ಆಗುತದೆ.
ಭ್ರಷ್ಟಾಚಾರ ತಡೆ ಕಾಯಿದೆಯನ್ನು 26 ಜುಲೈ, 2018 ರಂದು ಅಮೆಂಡ್ಮೆಂಟ್ ಮಾಡಲಾಯ್ತು. ಅದರಂತೆ, ಕಾನೂನುನಾತ್ಮಕ ಸಂಬಳ ಹೊರತುಪಡಿಸಿ ಬೇರೆ ವಿಧದ ಯಾವುದೇ ಬೆಲೆಬಾಳುವ ವಸ್ತು /ಹಣವನ್ನು ಪಡೆದರೆ ಸಾರ್ವಜನಿಕ ಕರ್ತವ್ಯಕ್ಕೆ ಭಂಗ ತಂದರೆ 3 ವರ್ಷದಿಂದ 7 ವರ್ಷದವರೆಗೂ ಜೈಲು ಶಿಕ್ಷೆ ಆಗುತ್ತದೆ. ಯಾವುದೇ ವ್ಯಕ್ತಿ/ವ್ಯವಹಾರ ಸಂಸ್ಥೆಗಳಿಂದ ಲಂಚ ಪಡೆಯುವುದು. ಯಾವುದೇ ಸ್ಥಿರಾಸ್ತಿಯನ್ನು ಕ್ರಿಮಿನಲ್ ಕೃತ್ಯವೆಸಗಿ ದುರುದ್ದೇಶದಿಂದ/ಮೋಸದ ಹಾದಿಯನ್ನು ಅನುಸರಿಸಿ ಸಾರ್ವಜನಿಕ ಅಧಿಕಾರಿಯು ಪಡೆಯುವುದು, ತನಿಖೆ ನಡೆಸದೆ/ವಿಚಾರಣೆ ಮಾಡದೆ ಸರ್ಕಾರಿ ಮಾನ್ಯತೆಯನ್ನು ಯೋಜನೆಗಳಿಗೆ ಅನುಮೋದನೆ ನೀಡಿದರೆ ಭ್ರಷ್ಟಾಚಾರವೆಂದು ಪರಿಗಣಿಸಲಾಗುತ್ತದೆ ಹಾಗೂ ಸೆಕ್ಷನ್ 18A ಅಡಿಯಲ್ಲಿ ಸ್ಪೆಷಲ್ ಕೋರ್ಟ್ನಲ್ಲಿ ವಿಚಾರಣೆ ನಡೆಸಿ, ಭ್ರಷ್ಟಾಚಾರದ ಕೃತ್ಯವು ಸಾಬೀತು ಆದರೆ ಭ್ರಷ್ಟಾಚಾರದಿಂದ ಬಂದಂತಹ ಆಸ್ತಿಯನ್ನು ಮುಟ್ಟುಗೊಲು ಹಾಕಿಕೊಳ್ಳಲಾಗುತ್ತದೆ. ಇಂತಹ ಪ್ರಕರಣಗಳನ್ನು 2 ವರ್ಷದಿಂದ 4 ವರ್ಷದ ಒಳಗೆ ಇತ್ಯಾರ್ಥಪಡಿಸಬೇಕು ಎಂಬ ನಿಯಮವಿದೆ. ಅದರಂತೆ, ಶಿಕ್ಷೆಯನ್ನು ಕೂಡಾ 6 ತಿಂಗಳುಗಳಿಂದ 3 ವರ್ಷಕ್ಕೆ ಮತ್ತು ಹೆಚ್ಚಿನ ಗರಿಷ್ಠ ಶಿಕ್ಷೆಯನ್ನು 5 ವರ್ಷದಿಂದ 7 ವರ್ಷಕ್ಕೆ ಜುಲ್ಮಾನೆ ಸಹಿತ ಅಥವಾ ಇಲ್ಲದೆ ವಿಧಿಸಲಾಗುತ್ತದೆ.