ಬೆಂಗಳೂರು: ವಿಚ್ಛೇದನ ಪಡೆದ ನಂತರ ಮರು ವಿವಾಹವಾಗಿರುವ ಪತಿಗೆ ತನ್ನ ಮಗಳನ್ನು ಭೇಟಿಯಾಗುವ ಹಕ್ಕು ನೀಡಬಾರದು ಎಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಮಗಳನ್ನು ರಜಾ ದಿನಗಳಂದು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿರುವ ಕೌಟುಂಬಿಕ ನ್ಯಾಯಾಲಯದ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿ ಮಂಗಳೂರಿನ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಲೋಕ್ ಆರಾಧೆ ಹಾಗೂ ನ್ಯಾ. ವಿಜಯ್ ಕುಮಾರ್ ಎ ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ: 2001ರಲ್ಲಿ ವಿವಾಹವಾಗಿದ್ದ ದಂಪತಿಗೆ 2002 ಹಾಗೂ 2007 ರಲ್ಲಿ ಓರ್ವ ಪುತ್ರ ಹಾಗೂ ಪುತ್ರಿ ಜನಿಸಿದ್ದು, ಕೆಲ ವರ್ಷಗಳ ಬಳಿಕ ಪತ್ನಿ ಕ್ರೌರ್ಯದ ಕಾರಣ ನೀಡಿ ವಿಚ್ಛೇದನ ಕೋರಿ ಕೋರ್ಟ್ ಮೊರೆ ಹೋಗಿದ್ದರು. 2010 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಕೌಟುಂಬಿಕ ನ್ಯಾಯಾಲಯ ದಂಪತಿಗೆ ವಿಚ್ಛೇದನ ನೀಡಿತ್ತು. ಮಗ ವಿಚ್ಛೇದಿತ ಪತಿಯ ಸುಪರ್ದಿಯಲ್ಲೂ ಮಗಳು ಪತ್ನಿಯ ಸುಪರ್ದಿಯಲ್ಲೂ ಉಳಿದಿದ್ದಳು.
ಆ ಬಳಿಕ ಮಗಳನ್ನು ತನ್ನ ಸುಪರ್ದಿಗೆ ನೀಡುವಂತೆ ಕೋರಿ ವಿಚ್ಛೇದಿತ ಪತಿ ಕೋರ್ಟ್ ಮೊರೆ ಹೋಗಿದ್ದರು. ತಾನು ಮಗಳನ್ನು ಇಂಗ್ಲಿಷ್ ಮೀಡಿಯಂ ಸ್ಕೂಲ್ ಗೆ ಸೇರಿಸುತ್ತೇನೆ ಹಾಗೂ ಆಕೆಯನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತೇನೆ. ಹೀಗಾಗಿ ಮಗಳನ್ನು ಪತ್ನಿಯ ಬದಲು ತನ್ನ ಸುಪರ್ದಿಗೆ ನೀಡಬೇಕು ಎಂದು ಕೋರಿದ್ದರು. 2015ರ ಸೆಪ್ಟೆಂಬರ್ 8ರಂದು ವಿಚ್ಛೇದಿತ ಪತಿಯು ತನ್ನ ಮಗಳನ್ನು ರಜಾ ದಿನಗಳಂದು ಭೇಟಿ ಮಾಡಲು ಅವಕಾಶ ನೀಡಿ ಕೋರ್ಟ್ ಆದೇಶಿಸಿತ್ತು.
ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚ್ಛೇದಿತ ಪತಿ ಮತ್ತೊಂದು ವಿವಾಹವಾಗಿದ್ದಾರೆ. ಆಕೆಗೂ ಓರ್ವ ಪುತ್ರನಿದ್ದು ಒಟ್ಟಿಗೆ ನೆಲೆಸಿದ್ದಾರೆ. ಮುಖ್ಯವಾಗಿ ಈವರೆಗೂ ತನ್ನ ಮಗಳ ಯೋಗ ಕ್ಷೇಮ ವಿಚಾರಿಸದ, ಆಕೆಯ ಶೈಕ್ಷಣಿಕ ವೆಚ್ಚ ಭರಿಸದ ವಿಚ್ಛೇದಿತ ಪತಿಗೆ ಮಗಳ ಭೇಟಿ ಅವಕಾಶವನ್ನು ನೀಡಬಾರದು ಎಂದು ಮನವಿ ಮಾಡಿದ್ದರು.
ಹೈಕೋರ್ಟ್ ತೀರ್ಪು: ಪ್ರತಿವಾದಿಯಾಗಿರುವ ವಿಚ್ಛೇದಿತ ಪತಿ ಮರು ವಿವಾಹವಾಗಿರುವುದನ್ನು ಹಾಗೂ ಎರಡನೇ ಮದುವೆಯಾಗಿರುವ ಮಹಿಳೆಗೂ ಓರ್ವ ಪುತ್ರನಿರುವುದನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿದೆ. ಹೀಗಾಗಿಯೇ ಅಪ್ರಾಪ್ತ ಮಗಳ ಸುಪರ್ದಿಯನ್ನು ತಂದೆಗೆ ನೀಡದೇ ತಾಯಿಗೆ ನೀಡಿದೆ. ಇನ್ನು ಅಪ್ರಾಪ್ತ ಮಗಳ ಸರ್ವತೋಮುಕ ಬೆಳವಣಿಗೆಗಾಗಿಯೇ ತಂದೆಯ ಭೇಟಿಗೆ ಅವಕಾಶ ನೀಡಿದೆ. ನಿಗದಿತ ರಜಾ ದಿನಗಳಂದು ಮಗಳನ್ನು ಭೇಟಿ ಮಾಡಲು ಅವಕಾಶ ನೀಡಿರುವ ವಿಚಾರಣಾ ನ್ಯಾಯಾಲಯ, ಆಕೆಯ ಶೈಕ್ಷಣಿಕ ವೆಚ್ಚ ಭರಿಸುವಂತೆ ಹಾಗೂ ಭೇಟಿ ಅವಧಿಯಲ್ಲಿ ಸುರಕ್ಷಿತವಾಗಿ ನೋಡಿಕೊಳ್ಳುವಂತೆ, ಭೇಟಿಯ ಬಳಿಕ ಸುರಕ್ಷಿತವಾಗಿ ತಾಯಿ ಬಳಿಗೆ ಕಳುಹಿಸುವಂತೆ ಆದೇಶಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸುವ ಯಾವುದೇ ಸೂಕ್ತ ಕಾರಣವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
(M.F.A. NO.8527 OF 2015 (GW)