ಬೆಂಗಳೂರು: ಯಾವುದೇ ಪ್ರಕರಣದಲ್ಲಿ ತನಿಖೆ ಪೂರ್ಣಗೊಂಡ ಮೇಲೆ ಅಂತಿಮ ತನಿಖಾ ವರದಿಯ ಕುರಿತು ದೂರುದಾರನಿಗೆ ಅಥವಾ ಪ್ರಥಮ ಮಾಹಿತಿದಾರನಿಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ಹೈಕೋರ್ಟ್ ಆದೇಶಿಸಿದೆ.
ಅಲ್ಲದೇ ಈ ನಿಟ್ಟಿನಲ್ಲಿ ದೂರುದಾರರಿಗೆ ತನಿಖೆಯ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ ಸುತ್ತೋಲೆ ಹೊರಡಿಸಲು ಹೈಕೋರ್ಟ್ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಿದೆ.
ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಅದರ ಅಧಿಕಾರಿಗಳು ಅವ್ಯವಹಾರ ನಡೆಸಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಅಗತ್ಯ ನಿರ್ದೇಶನಗಳನ್ನು ಕೋರಿ ಬೆಂಗಳೂರಿನ ದೊಡ್ಡಕಲ್ಲಸಂದ್ರ ನಿವಾಸಿ ಪ್ರಶಾಂತ್ ಹೆಗ್ಡೆ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ. ನಟರಾಜನ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್ಪಿಸಿ) ಸೆಕ್ಷನ್ 173(2)(i) ರ ಪ್ರಕಾರ ಪ್ರಕರಣದ ತನಿಖೆ ಪೂರ್ಣಗೊಳ್ಳುತ್ತಲೇ ತನಿಖಾ ವರದಿಯನ್ನು ಮ್ಯಾಜಿಸ್ಟ್ರೇಟ್ ಗೆ ಸಲ್ಲಿಸಬೇಕು. ಅದೇ ರೀತಿ ಸೆಕ್ಷನ್ 173(2)(ii) ರ ಪ್ರಕಾರ ದೂರುದಾರನಿಗೆ ಅಥವಾ ಪ್ರಥಮ ಮಾಹಿತಿದಾರನಿಗೆ ತನಿಖಾ ವರದಿಯ ಕುರಿತು ಮಾಹಿತಿ ನೀಡಬೇಕು.
ಮಾಹಿತಿ ನೀಡಿದ ವ್ಯಕ್ತಿಗೆ ಅಥವಾ ದೂರುದಾರನಿಗೆ ತನಿಖಾ ವರದಿಯ ವಿವರ ಸಿಕ್ಕಾಗ ಆತನಿಗೆ ಪ್ರಕರಣದ ಬಗ್ಗೆ ತಿಳಿಯಲು ಹಾಗೂ ಅದನ್ನು ಫಾಲೋಅಪ್ ಮಾಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ತನಿಖಾ ಸಂಸ್ಥೆಗಳ ತನಿಖಾಧಿಕಾರಿಗಳಿಗೆ ಪ್ರಕರಣದ ಅಂತಿಮ ತನಿಖಾ ವರದಿಯ ಮಾಹಿತಿಯನ್ನು ದೂರುದಾರರಿಗೆ ತಲುಪಿಸುವಂತೆ ಸೂಚನೆ ನೀಡಿ ಸುತ್ತೋಲೆ ಹೊರಡಿಸಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಎಸ್.ಬಿ.ಐ ಬ್ಯಾಂಕ್ ನ ಅಧಿಕಾರಿಗಳು ಅವ್ಯವಹಾರದಲ್ಲಿ ತೊಡಗಿದ್ದಾರೆಂದು ಆರೋಪಿಸಿ ಪ್ರಶಾಂತ್ ಹೆಗ್ಡೆ ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ತನಿಖೆ ಬಳಿಕ ಬ್ಯಾಂಕ್ ಗಳನ್ನು ಹೊರತುಪಡಿಸಿ ಬ್ಯಾಂಕ್ ನೌಕರರನ್ನಷ್ಟೇ ಆರೋಪಿಗಳನ್ನಾಗಿಸಿ ವಿಚಾರಣಾ ನ್ಯಾಯಾಲಯಕ್ಕೆ ಅಧಿಕಾರಿಗಳು ದೋಷಾರೋಪಣೆಪಟ್ಟಿ ಸಲ್ಲಿಸಿದ್ದರು.
ಇದನ್ನು ಆಕ್ಷೇಪಿಸಿದ್ದ ಅರ್ಜಿದಾರರು ತಮಗೆ ತನಿಖಾ ವರದಿಯನ್ನು ಅಧಿಕಾರಿಗಳು ನೀಡಿಲ್ಲ. ಹೀಗಾಗಿ ಬ್ಯಾಂಕುಗಳನ್ನು ಕೂಡ ಪ್ರಕರಣದಲ್ಲಿ ಸೇರಿಸುವಂತೆ, ಹಾಗೂ ಅವುಗಳ ವಿರುದ್ಧವೂ ಸಂಜ್ಞೆ ತೆಗೆದುಕೊಳ್ಳುವಂತೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
WRIT PETITION NO.18864 OF 2021 (GM-RES)