ಲೇಖಕರು: ಎಸ್.ಎಚ್. ಮಿಟ್ಟಲಕೋಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ.
ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಸಂಶಯದ ಪಾತ್ರ ಬಲು ಮಹತ್ವದ್ದು. ಹಾಗಾದರೆ ಅದು ಯಾವ ಹಂತದಲ್ಲಿ ಏನು ಪಾತ್ರ ವಹಿಸುತ್ತದೆ ಅನ್ನುವದನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಒಂದೊಂದು ಹಂತದಲ್ಲಿ ಅದು ಬೇರೆ ಬೇರೆ ಪಾತ್ರ ವಹಿಸುತ್ತದೆ ಅನ್ನುವದು ಸ್ಪಷ್ಟವಾಗುತ್ತದೆ.
ಒಂದು ಅಪರಾಧ ನಡೆದಾಗ ಆ ಬಗ್ಗೆ ದೂರನ್ನು ಬಾಧಿತ ವ್ಯಕ್ತಿ ನೀಡುತ್ತಾರೆ.ದೂರು ನೀಡುವ ಮೊದಲು ಅವರು ಘಟನೆ ವಿವರ ಸಂಗ್ರಹಿಸುತ್ತಾರೆ. ಘಟನೆಗೆ ಪ್ರತ್ಯಕ್ಷ ಸಾಕ್ಷಿ ಇದ್ದರೆ ನೇರವಾಗಿ ಅವರ ವಿರುದ್ಧ ದೂರನ್ನು ಕೊಡುತ್ತಾರೆ. ಆದರೆ ಸಾಕ್ಷಿ ಇರದೇ ಇದ್ದಾಗ ಸಂಶಯದ ಮೇಲೆ ದೂರು ಕೊಡುತ್ತಾರೆ.
ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಈ ಹಂತದಲ್ಲಿ ಕಾನೂನು ಕ್ರಮಕ್ಕೆ ಚಾಲನೆ ಕೊಡಲು ಸಂಶಯದ ಆಧಾರ ಇರುತ್ತದೆ. ಆದರೆ ಸಂಶಯ ಸತ್ಯ ಇರಬಹುದು ಅಥವಾ ಸುಳ್ಳು ಇರಬಹುದು. ಸತ್ಯ ಶೋಧನೆಗೆ ತನಿಖಾ ಕ್ರಮ ಪ್ರಾರಂಭಿಸಲು ಸಕಾರಣ ಸಂಶಯ ಒಂದು ಉತ್ತಮ ಆಧಾರ ಅನ್ನುವುದರಲ್ಲಿ ಯಾವ ಸಂಶಯ ಇಲ್ಲ. ದೂರು ಕೊಡಲು ಆಧಾರವಾಗುವ ಸಂಶಯವೇ ತನಿಖೆಗೆ, ದೊಡ್ಡ ಆಧಾರ ಎನ್ನುವದು ಬೇರೆ ಹೇಳಬೇಕಿಲ್ಲ. ಸಂಶಯ ಎಂದರೆ ಸಕಾರಣ ಸಂಶಯ ಎನ್ನುವದು ಮುಖ್ಯ. ಕೇವಲ ಕಾಲ್ಪನಿಕ ಸಂಶಯ ಅಲ್ಲ.
ಎರಡನೇ ಹಂತದಲ್ಲಿ ದೂರು ಪಡೆದ ತನಿಖಾಧಕಾರಿ ದಂಡ ಪ್ರಕ್ರಿಯಾ ಸಂಹಿತೆ ಕಲಂ 154 ರನ್ವಯ ಪ್ರಥಮ ವರ್ತಮಾನ ದಾಖಲಿಸಿ, ಸಕಾರಣ ಸಂಶಯದ ಮೇಲೆ ತನಿಖೆ ಪ್ರಾರಂಭಿಸಿ ತನಿಖಾ ಸಮಯದಲ್ಲಿ, ಸಂಶಯದ ಸುಳಿಯಲ್ಲಿ ಬರುವ ವ್ಯಕ್ತಿಗಳನ್ನು ವಶಕ್ಕೆ ಪಡೆದು, ವಿಚಾರಣೆ ಮಾಡುತ್ತಾರೆ ಪೊಲೀಸರು.
ಸಂಶಯವು ಸತ್ಯವಾಗಬಹುದು ಅಥವಾ ಅದು ಸುಳ್ಳು ಇರಬಹದು. ತನಿಖೆಗಾಗಿ ವಶಕ್ಕೆ ಪಡೆದ ವ್ಯಕ್ತಿಯಿಂದ ಪೊಲೀಸರಿಗೆ, ಅಪರಾಧಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಸಿಗದೇ ಹೋದರೆ, ಅವರನ್ನು ಬಿಟ್ಟು ಕಳಿಸುತ್ತಾರೆ. ಒಂದು ವೇಳೆ ಮಾಹಿತಿ ಸಿಕ್ಕರೆ ಅದನ್ನು ಆಧರಿಸಿ, ತನಿಖೆ ಮುಂದುವರೆಸಲು ಅವರ ಅಗತ್ಯ ಬಂದರೆ, ಅವರನ್ನು ಬಂಧಿಸಿ ತನಿಖೆ ಮುಂದುವರೆಸಿ, ಇಪ್ಪತ್ನಾಲ್ಕು ಗಂಟೆಗಳ ಕಾಲ ತಮ್ಮ ವಶದಲ್ಲಿ ಇಟ್ಟುಕೊಂಡು ನಂತರ ಇನ್ನೂ ಹೆಚ್ಚಿನ ತನಿಖೆಗೆ ಅವರ ಅಗತ್ಯ ಇದೆ ಅಂತ ಎನ್ನಿಸಿದರೆ, ಆಗ ಬಂಧಿತ ಆರೋಪಿಯನ್ನು ನ್ಯಾಯಿಕ ದಂಡಾಧಿಕಾರಿಗಳ, ದಂಡ ಪ್ರಕ್ರಿಯಾ ಸಂಹಿತೆ ಕಲಂ 167 ರನ್ವಯ ರಿಮಾಂಡ್ ಆರ್ಜಿ ಜೊತೆ ಹಾಜರುಪಡಿಸಿ ಹದಿನೈದು ದಿವಸಕ್ಕೆ ಮೀರದ ಅವಧಿಗೆ ಪೊಲೀಸರು ವಶಕ್ಕೆ ಪಡೆಯಬಹುದು. ಅಥವಾ ಆರೋಪಿಯನ್ನು ನ್ಯಾಯಿಕ ಬಂಧನಕ್ಕೆ ಕಳಿಸಲು ಕೋರಬಹುದು. ಆಗ ಆರೋಪಿ ಜಾಮೀನು ಪಡೆಯಲು ಅರ್ಜಿ ಹಾಕಿಕೊಳ್ಳಬಹುದು. ಇದು ಸಂಶಯದ ಆಧಾರದ ಮೇಲೆ ತನಿಖೆ ಪ್ರಾರಂಭ ಆಗಿ ಆರೋಪಿಯ ಬಂಧನ ಆಗುತ್ತದೆ. ನಂತರ ತನಿಖೆ ಪೂರೈಸಿ ಆರೋಪ ಪಟ್ಟಿ ದಾಖಲು ಆಗುತ್ತದೆ. ತನಿಖೆ ಮುಗಿದ ಮೇಲೆ ದಂಡ ಪಕ್ರಿಯಾ ಸಂಹಿತೆ ಕಲಂ 173 ರನ್ವಯ ಆರೋಪ ಪಟ್ಟಿಯನ್ನು ನ್ಯಾಯಾಲಯದಲ್ಲಿ ದಾಖಲು ಮಾಡಲಾಗುತ್ತದೆ.
ಆರೋಪ ಪಟ್ಟಿ ಹಾಕಿದ ನಂತರ ಆರೋಪ ರಚನೆ ಹಂತ ಇದೆ. ಇಲ್ಲಿಯೂ ಕೂಡಾ ಆರೋಪ ರಚನೆಗೆ ಅರೋಪ ಪಟ್ಟಿಯಲ್ಲಿ ಇರುವ ಸಾಮಗ್ರಿಯಿಂದ ಬಲವಾದ ಸಂಶಯ ಉಂಟಾದರೂ ಸಾಕು ಆರೋಪ ರಚನೆ ಮಾಡಬಹುದು. ಆರೋಪಿ ಆರೋಪ ನಿರಾಕರಣೆ ಮಾಡಿದಾಗ ನಂತರ ವಿಚಾರಣೆ ಪ್ರಾರಂಭ ಆಗುವದು. ಆಗ ಅಭಿಯೋಗದ ಸೂಕ್ತ ಸಾಕ್ಷಿ ಹಾಜರಪಡಿಸಿ ಆರೋಪಿ ವಿರುದ್ಧದ ಆಪಾದನೆಗಳನ್ನು ಅಭಿಯೋಗ, ಸಂಶಯಾತೀತವಾಗಿ ರುಜುವಾತು ಪಡಿಸಬೇಕು. ಇಲ್ಲದೇ ಹೋದರೆ ಆರೋಪಿ ಸಂಶಯದ ಲಾಭ ಪಡೆದು ಬಿಡುಗಡೆ ಆಗುತ್ತಾನೆ. ಮೊದಲಿನ ಎಲ್ಲ ಹಂತಗಳಲ್ಲೂ ಫಿರ್ಯಾದಿ ಮತ್ತು ತನಿಖೆಗೆ ಸಹಕಾರಿಯಾಗಿದ್ದ ಸಂಶಯ, ಕೊನೆಗೆ ನ್ಯಾಯಾಲಯದಲ್ಲಿ ವಿಚಾರಣೆ ಆಗುವಾಗ ಮಾತ್ರ ಆರೋಪಿಗೆ ಬಿಡುಗಡೆ ಪಡೆಯಲು ಸಹಕಾರಿಯಾಗುತ್ತದೆ ಅನ್ನುವದು ಸತ್ಯ.
ಸಂಶಯವು ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ, ಹೇಗೆ ಪಾತ್ರ ಬದಲಾಯಿಸುತ್ತದೆ ಅನ್ನುವದು ನಾವು ಕಾಣಬಹುದು. ಈ ಕಾರಣಕ್ಕಾಗಿ ವಿಚಾರಣೆ ಮುಗಿಯುವವರೆಗೂ, ಆರೋಪಿಯನ್ನು ನಿರಪರಾಧಿ ಅಂತ ಭಾವಿಸುತ್ತದೆ ಅಪರಾಧ ನ್ಯಾಯ ಶಾಸ್ತ್ರ. ಸಂಶಯಾತೀತವಾಗಿ ಆರೋಪ ರುಜುವಾತು ಆದ ಮೇಲೆ, ಆರೋಪಿಯನ್ನು ಅಪರಾಧಿ ಎಂದು ಗಣಿಸಿ ಶಿಕ್ಷೆ ವಿಧಿಸಲಾಗುತ್ತದೆ.
ನ್ಯಾಯಾಂಗ ಬಂಧನದಲ್ಲಿ ಇರುವ ಆರೋಪಿಗಳ ವಿಚಾರಣೆ ಶೀಘ್ರವಾಗಿ ಆಗುವುದು ಅಗತ್ಯ. ಯಾಕೆಂದರೆ ಸಂಶಯದ ಲಾಭ ಪಡೆದು ಬಿಡುಗಡೆ ಆಗುವ ಆರೋಪಿ, ಅಪರಾಧಕ್ಕೆ ನಿಗದಿಯಾದ ಗರಿಷ್ಠ ಶಿಕ್ಷೆ ಅವಧಿಯಷ್ಟು ಕಾಲ ನ್ಯಾಯಿಕ ಬಂಧನದಲ್ಲಿ ಕಳೆದರೆ, ಬಿಡುಗಡೆ ಆದರೂ ಶಿಕ್ಷೆ ಅನುಭವಿಸುತ್ತಾರೆ. ಹೀಗಾಗಿ ನ್ಯಾಯಿಕ ಬಂಧನದಲ್ಲಿರುವ ಆರೋಪಿಗಳ ಪ್ರಕರಣ ಶೀಘ್ರ ವಿಚಾರಣೆ ಆಗುವದು ನ್ಯಾಯೋಚಿತ.