News

ಕೋರ್ಟ್ ಕಲಾಪದ ನೇರ ಪ್ರಸಾರ ನಿಯಮಗಳು ಹೀಗಿವೆ: ಮಾಧ್ಯಮಗಳ ಬಳಕೆಗಿಲ್ಲ ಅವಕಾಶ!

Share It

ನ್ಯಾಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೋರ್ಟ್ ಕಲಾಪಗಳನ್ನು ರೆಕಾರ್ಡಿಂಗ್ ಮಾಡುವುದು ಹಾಗೂ ನೇರ ಪ್ರಸಾರ ಮಾಡಬೇಕೆಂಬ ಸಾರ್ವಜನಿಕ ಬೇಡಿಕೆಯನ್ನು ರಾಜ್ಯ ಹೈಕೋರ್ಟ್ ಕೊನೆಗೂ ಈಡೇರಿಸಿದೆ.

ಹೈಕೋರ್ಟ್ ಕಲಾಪದ ನೇರ ಪ್ರಸಾರ ಹಾಗೂ ಕಲಾಪದ ವಿಡಿಯೋ ರೆಕಾರ್ಡಿಂಗ್ ಮಾಡುವ ಕುರಿತು ನಿಯಮಗಳನ್ನು ರೂಪಿಸಿದ್ದು, ಹೈಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ Karnataka Rules on Live Streaming and Recording of Court Proceedings, 2021 ನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

ನ್ಯಾಯಾಲಯ ಕಲಾಪಗಳ ನೇರಪ್ರಸಾರ ಮತ್ತು ರೆಕಾರ್ಡಿಂಗ್‌ ನಿಯಮಗಳು 2022ರ ಜನವರಿ 1ರಿಂದ ಜಾರಿಗೆ ಬಂದಿದ್ದು, ಈ ನಿಯಮಗಳು ಹೈಕೋರ್ಟ್‌ ಹಾಗೂ ಹೈಕೋರ್ಟ್ ವ್ಯಾಪ್ತಿಗೆ ಒಳಪಡುವ ಎಲ್ಲ ನ್ಯಾಯಾಲಯಗಳು ಮತ್ತು ನ್ಯಾಯಾಧಿಕರಣಗಳಿಗೆ ಅನ್ವಯಿಸಲಿವೆ. ಲೈವ್‌ ಸ್ಟ್ರೀಮ್‌ ಆರಂಭಿಸಿದ ದೇಶದ ಎರಡನೇ ಹೈಕೋರ್ಟ್ ಎಂಬ ಹಿರಿಮೆಗೂ ಪಾತ್ರವಾಗಿದೆ. ಪ್ರಥಮವಾಗಿ ಗುಜರಾತ್‌ ಹೈಕೋರ್ಟ್‌ ಈ ವ್ಯವಸ್ಥೆ ಅಳವಡಿಸಿಕೊಂಡಿದೆ.

ಲೈವ್‌ಸ್ಟ್ರೀಮಿಂಗ್‌ ಮತ್ತು ರೆಕಾರ್ಡಿಂಗ್‌ ನಿಯಮಗಳ ಪ್ರಮುಖ ಅಂಶಗಳು

  • ನ್ಯಾಯಾಲಯದ ಕಲಾಪವನ್ನು ಸಂಪೂರ್ಣವಾಗಿ ಚಿತ್ರೀಕರಿಸುವಂತೆ ಕನಿಷ್ಠ 5 ಆ್ಯಂಗಲ್ ನಲ್ಲಿ 5 ಕ್ಯಾಮೆರಾಗಳ ಅಳವಡಿಕೆ ಮಾಡಲಾಗುತ್ತದೆ. ಅವುಗಳಲ್ಲಿ ಒಂದು ನ್ಯಾಯಮೂರ್ತಿಗಳನ್ನು ಚಿತ್ರೀಕರಿಸುವ ಕಡೆಗೆ, ಇನ್ನೆರಡು ಕ್ಯಾಮೆರಾಗಳು ಪ್ರಕರಣದ ಇಬ್ಬರೂ ವಕೀಲರ ಕಡೆಗೆ, ಮತ್ತೆರಡು ಕ್ಯಾಮೆರಾಗಳಲ್ಲಿ ಒಂದು ಆರೋಪಿ ಕಡೆಗೆ ಮತ್ತೊಂದು ಪ್ರತಿವಾದಿ ಅಥವಾ ಸಾಕ್ಷಿ ಇರುವ ಕಡೆಗೆ ಅಳವಡಿಸಲಾಗುತ್ತದೆ.
  • ಕ್ಯಾಮೆರಾಗಳ ಮೂಲಕ ಕಲಾಪದ ಚಿತ್ರೀಕರಣಕ್ಕೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗುತ್ತದೆ.
  • ಲೈವ್‌ ಸ್ಟ್ರೀಮಿಂಗ್‌ ನಿಯಂತ್ರಿಸಲು, ಸ್ಥಗಿತಗೊಳಿಸಲು ನ್ಯಾಯಮೂರ್ತಿಗಳಿಗೆ ರಿಮೋಟ್‌ ಕೊಡಲಾಗುತ್ತದೆ.
  • ವಕೀಲರು, ಸಾಕ್ಷಿಗಳು, ಆರೋಪಿಗಳು ಅಥವಾ ಬೇರಾವುದೇ ವ್ಯಕ್ತಿಗೆ ಮಾತನಾಡಲು ಪೀಠ ಸಮ್ಮತಿಸಿದಾಗ ಅವರು ಮೈಕ್ರೋಫೋನ್ ಬಳಸಿ ಮಾತನಾಡಬೇಕಾಗುತ್ತದೆ.
  • ಕೋರ್ಟ್‌ ಮಾಸ್ಟರ್‌ ಅಥವಾ ರೀಡರ್‌ ಲೈವ್‌ ಸ್ಟೀಮಿಂಗ್‌ ಆರಂಭವಾಗುವುದನ್ನು ಪಕ್ಷಕಾರರಿಗೆ ತಿಳಿಸಬೇಕು. ಇದಕ್ಕೆ ಆಕ್ಷೇಪ ಇದ್ದಲ್ಲಿ ಪೀಠಕ್ಕೆ ತಿಳಿಸಬಹುದು.
  • ಲೈವ್‌ ಸ್ಟ್ರೀಮಿಂಗ್‌ ಕುರಿತು ಆಕ್ಷೇಪಣೆಗಳಿದ್ದರೆ ಪ್ರಕರಣದ ವಿಚಾರಣೆ ವೇಳೆ ಅಥವಾ ನಂತರವೂ ತಿಳಿಸಬಹುದು. ನ್ಯಾಯಮೂರ್ತಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ.
  • ಲೈವ್‌ ಸ್ಟ್ರೀಮಿಂಗ್‌ ಸಂದರ್ಭದಲ್ಲಿ ಪಕ್ಷಕಾರರ ಜನ್ಮ ದಿನಾಂಕ, ವಿಳಾಸ, ಮತ್ತಿತರೆ ವೈಯಕ್ತಿಕ ಮಾಹಿತಿಗಳನ್ನು ಸೋರಿಕೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಇದೇ ವೇಳೆ ವೈಯಕ್ತಿಕ ಹಾಗೂ ಸೂಕ್ಷ್ಮ ಮಾಹಿತಿಗಳನ್ನು ಕೈಬಿಡುವಂತೆ ವಕೀಲರು ಕೋರಬಹುದಾಗಿದೆ.
  • ಲೈವ್‌ ಸ್ಟ್ರೀಮ್‌ ಅಗತ್ಯವಿಲ್ಲದಿದ್ದಾಗ ಮೇಲ್ಮನವಿ ನ್ಯಾಯಾಲಯದ ಬಳಕೆಗಾಗಿ ಕಲಾಪ ರೆಕಾರ್ಡಿಂಗ್‌ ಮಾಡಬೇಕು. ಈ ರೆಕಾರ್ಡಿಂಗ್ ವಕೀಲರಿಗೆ ಲಭ್ಯವಾಗಲಿದೆ.
  • ಕಲಾಪದ ರೆಕಾರ್ಡಿಂಗ್ ನ್ನು ನ್ಯಾಯಾಲಯದ ಸೂಚನೆ ಮೇರೆಗೆ ಕೋರ್ಟ್ ವೆಬ್ ಸೈಟ್ ಅಥವಾ ಇತರೆ ಜಾಲತಾಣದಲ್ಲಿ ಪೂರ್ತಿಯಾಗಿ ಅಥವಾ ಭಾಗಶಃ ಅಪ್ಲೋಡ್ ಮಾಡಲಾಗುತ್ತದೆ.
  • ಕಲಾಪದ ರೆಕಾರ್ಡಿಂಗ್ ನ್ನು ಕನಿಷ್ಠ ಆರು ತಿಂಗಳವರೆಗೆ ಇಟ್ಟುಕೊಳ್ಳಲಾಗುತ್ತದೆ.
  • ಲೈವ್ ಸ್ಟ್ರೀಮಿಂಗ್ 10 ನಿಮಿಷ ತಡವಾಗಿ ಪ್ರಾರಂಭ ಮಾಡಲಾಗುತ್ತದೆ. ನ್ಯಾಯಾಲಯದ ನಿರ್ದೇಶನದಂತೆ ಇದನ್ನು ಬದಲಾಯಿಸಬಹುದಾಗಿದೆ. ನ್ಯಾಯಾಲಯ ಸೂಚಿಸಿದ ಜಾಲತಾಣದಲ್ಲಿ ಮಾತ್ರ ಲೈವ್‌ ಸ್ಟ್ರೀಮಿಂಗ್‌ ಲಭ್ಯವಾಗಲಿದೆ.
  • ಕಲಾಪದ ವೇಳೆ ನ್ಯಾಯಮೂರ್ತಿಗಳು ಪರಸ್ಪರ ನಡೆಸುವ ಮಾತುಕತೆ, ಸಿಬ್ಬಂದಿಗೆ ನೀಡುವ ಸೂಚನೆ, ನ್ಯಾಯಮೂರ್ತಿಗಳು ಕಲಾಪದ ವೇಳೆ ನೋಟ್ ಮಾಡಿಕೊಳ್ಳುವುದನ್ನು ಹಾಗೂ ವಕೀಲರು ನೋಟ್ ಮಾಡಿಕೊಳ್ಳುವುದನ್ನು, ಕಕ್ಷಿದಾರರ ಜೊತೆ ವಕೀಲರು ಮಾತುಕತೆ ನಡೆಸುವುದನ್ನು ಲೈವ್‌ ಸ್ಟ್ರೀಮಿಂಗ್‌ ಮಾಡುವಂತಿಲ್ಲ.

ನೇರ ಪ್ರಸಾರ ವ್ಯಾಪ್ತಿಗೆ ಒಳಪಡದ ಪ್ರಕರಣಗಳು
ವೈವಾಹಿಕ ಪ್ರಕರಣಗಳು, ಅತ್ಯಾಚಾರ ಸೇರಿದಂತೆ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣಗಳು, ಲಿಂಗ ಆಧಾರಿತ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳು, ಪೋಕ್ಸೋ ಪ್ರಕರಣಗಳು, ಬಾಲನ್ಯಾಯ ಪ್ರಕರಣಗಳು, ಇನ್-ಕ್ಯಾಮೆರಾ-ಪ್ರೊಸೀಡಿಂಗ್ಸ್ ಪ್ರಕರಣಗಳು, ಗೌಪ್ಯ ವಿಚಾರಣೆ ನಡೆಸಬೇಕಾದ ಪ್ರಕರಣಗಳು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಹುದಾದ ಹಾಗೂ ಸಮುದಾಯಗಳ ನಡುವೆ ದ್ವೇಷ ಹರಡಬಹುದಾದ ಪ್ರಕರಣಗಳು, ಸಾಕ್ಷ್ಯ ದಾಖಲು ಹಾಗೂ ಪಾಟೀ ಸವಾಲು, ನ್ಯಾಯಮೂರ್ತಿಗಳು ಅಥವಾ ಸಿಜೆ ನಿರ್ಧರಿಸಿದ ಪ್ರಕರಣಗಳು ಲೈವ್ ಸ್ಟ್ರೀಮ್ ನಿಂದ , ನಿರ್ದಿಷ್ಟ ಪ್ರಕರಣಗಳಲ್ಲಿ ಅಂತಿಮ ವಾದಮಂಡನೆ ವೇಳೆ ಲೈವ್ ಸ್ಟ್ರೀಮ್ ನಿರ್ಬಂಧಿಸಬಹುದಾಗಿದೆ

ರೆಕಾರ್ಡಿಂಗ್ ಬಳಕೆಗೆ ನಿರ್ಬಂಧ

  • ನಿಯಮಗಳಿಗೆ ವಿರುದ್ಧವಾಗಿ‌ ಕಲಾಪದ ಆಡಿಯೋ-ವಿಡಿಯೋ ರೆಕಾರ್ಡಿಂಗ್ ಮಾಡುವುದನ್ನು ನಿರ್ಬಂಧಿಸಲಾಗಿದೆ.
  • ಕಲಾಪವನ್ನು ಪತ್ರಕರ್ತರು ಅಥವಾ ಬೇರೆಯವರು ಆಡಿಯೋ-ವಿಡಿಯೋ ಮಾಡುವುದು ನಿಷಿದ್ಧ.
  • ನ್ಯಾಯಾಲಯದ ಅನುಮತಿ ಇಲ್ಲದೆ ಯಾರೊಬ್ಬರೂ ಲೈವ್‌ ಸ್ಟ್ರೀಮಿಂಗ್‌ ರೆಕಾರ್ಡ್ ಮಾಡುವಂತಿಲ್ಲ. ಹಾಗೆಯೇ ಪ್ರಸಾರ ಮಾಡುವಂತಿಲ್ಲ, ಪತ್ರಿಕೆ, ಟಿವಿ, ಸಾಮಾಜಿಕ ಮಾಧ್ಯಮಗಳಿಗೂ ಇದು ಅನ್ವಯ. ನಿಯಮ ಮೀರಿದರೆ ಕಾನೂನಿನ ಅನ್ವಯ ವಿಚಾರಣೆ ನಡೆಸಲಾಗುತ್ತದೆ. ರೆಕಾರ್ಡಿಂಗ್‌ ಮತ್ತು ದತ್ತಾಂಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಿಶೇಷ ಕಾಪಿರೈಟ್‌ ಹೊಂದಿದ್ದು, ಅನುಮತಿ ಪಡೆಯದೇ ಲೈವ್‌ ಸ್ಟ್ರೀಮ್‌ ಬಳಕೆ ಮಾಡಿದರೆ ಕಾಪಿರೈಟ್‌ ಕಾಯ್ದೆ-1957, ಮಾಹಿತಿ ತಂತ್ರಜ್ಞಾನ ಕಾಯ್ದೆ-2000, ನ್ಯಾಯಾಂಗ ನಿಂದನೆ ಸೇರಿದಂತೆ ವಿವಿಧ ಕಾನೂನುಗಳ ಅಡಿ ಶಿಕ್ಷಾರ್ಹ ಅಪರಾಧವಾಗಲಿದೆ. ನ್ಯಾಯಾಲಯದ ಅನುಮತಿ ಇಲ್ಲದೇ ರೆಕಾರ್ಡಿಂಗ್ ಗಳ ಬಳಕೆ ಸಂಪೂರ್ಣ ನಿಷಿದ್ಧ.

ಚಿತ್ರೀಕರಣಕ್ಕೆ ಪ್ರತ್ಯೇಕ ತಂಡ
ಪ್ರತಿ ಕೋರ್ಟ್ ನ ಕಲಾಪ ಚಿತ್ರೀಕರಿಸಲು ಡೆಡಿಕೇಟೆಡ್ ಕಂಟ್ರೋಲ್ ರೂಮ್ (ಡಿಸಿಆರ್‌) ಸ್ಥಾಪಿಸಲಾಗುತ್ತದೆ. ಇಲ್ಲಿ ನ್ಯಾಯಾಲಯದ ಅಧಿಕಾರಿ ಸೇರಿದಂತೆ ತಾಂತ್ರಿಕ ಪರಿಣಿತರು ಕಾರ್ಯ ನಿರ್ವಹಿಸಲಿದ್ದಾರೆ. ಡಿಸಿಆರ್ ಮೂಲಕವೇ ಕಲಾಪದ ಲೈವ್‌ ಸ್ಟ್ರೀಮಿಂಗ್‌, ರೆಕಾರ್ಡಿಂಗ್‌ ಮಾಡಲಾಗುತ್ತದೆ ಮತ್ತು ನಿಯಂತ್ರಿಸಲಾಗುತ್ತದೆ. ನ್ಯಾಯಾಲಯದ ಐಟಿ ರಿಜಿಸ್ಟ್ರಾರ್ ಇವುಗಳ ನೇರ ಮೇಲುಸ್ತುವಾರಿ ನಡೆಸುತ್ತಾರೆ.


Share It

You cannot copy content of this page