News

ಅನಗತ್ಯವಾಗಿ ಕೋರ್ಟ್​ಗೆ ಬಂದರೆ ಜೈಲಿಗೆ ಕಳುಹಿಸಬೇಕಾಗುತ್ತದೆ: ಹೈಕೋರ್ಟ್ ಎಚ್ಚರಿಕೆ

Share It

ಸಕಾರಣವಿಲ್ಲದೆ ಅನಗತ್ಯವಾಗಿ ನ್ಯಾಯಾಲಯಕ್ಕೆ ಹಾಜರಾಗುವ ವ್ಯಕ್ತಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಸಚಿವ ಮುನಿರತ್ನ ವಿರುದ್ಧ ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜು ಗೌಡ ದಾಖಲಿಸಿರುವ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಎಚ್ಚರಿಕೆ ನೀಡಿದೆ.

ವಕೀಲರು, ಕಾನೂನು ವಿದ್ಯಾರ್ಥಿಗಳು, ಪ್ರಕರಣಕ್ಕೆ ಸಂಬಂಧಪಟ್ಟ ಕಕ್ಷಿದಾರರು, ಅಧಿಕಾರಿಗಳು ಹಾಗೂ ಸೂಕ್ತ ಕಾರಣ ಹೊಂದಿರುವ ವ್ಯಕ್ತಿಗಳು ಮಾತ್ರವೇ ಕೋರ್ಟ್ ಹಾಲ್ ಪ್ರವೇಶಿಸಲು ಅವಕಾಶವಿದೆ. ವಿನಾಕಾರಣ ಮತ್ತು ಸಂಬಂಧವಿಲ್ಲದೆ ಹೈಕೋರ್ಟ್ ನ ಕೋರ್ಟ್ ಹಾಲ್ ಗಳಿಗೆ ಪ್ರವೇಶಿಸಿದರೆ ಅಂತಹವರನ್ನು ಬಂಧಿಸಿ ನೇರವಾಗಿ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಸಿದೆ.

ಹೈಕೋರ್ಟ್ ಎಂಬುದು ಸಾಮಾನ್ಯವಲ್ಲ. ಈ ಕೋರ್ಟ್ ಹಾಲ್ ನಲ್ಲಿ ಸಂಬಂಧವಿಲ್ಲದ ಮುಖಗಳು ಕಾಣುತ್ತಿವೆ. ಇದು ವೈ ಕೆಟಗರಿ ಭದ್ರತೆ ಹೊಂದಿರುವ ನ್ಯಾಯಾಲಯ ಸಭಾಂಗಣ. ಕಲಾಪದಲ್ಲಿ ಸಂಬಂಧವಿಲ್ಲದ ವ್ಯಕ್ತಿಗಳು ಯಾವ ಕಾರಣಕ್ಕೆ ಇಲ್ಲಿಗೆ ಬಂದಿದ್ದಾರೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಅಲ್ಲದೇ, ಸಂಬಂಧವಿಲ್ಲದೆ ಹಾಜರಿದ್ದ ವ್ಯಕ್ತಿಗಳ ವಿವರ ಸಂಗ್ರಹಿಸುಂತೆ ಕೋರ್ಟ್ ಸಿಬ್ಬಂದಿಗೆ ಸೂಚಿಸಿದೆ.

ಹಿಜಾಬ್ ಪ್ರಕರಣದ ತೀರ್ಪು ನೀಡಿದ ತ್ರಿಸದಸ್ಯ ನ್ಯಾಯಪೀಠದಲ್ಲಿ ನ್ಯಾ. ಕೃಷ್ಣ ದೀಕ್ಷಿತ್ ಕೂಡ ಇದ್ದರು. ತೀರ್ಪಿನ ಬಳಿಕ ಕೆಲ ವ್ಯಕ್ತಿಗಳು ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ನ್ಯಾ. ಕಷ್ಣ ದೀಕ್ಷಿತರಿಗೆ ವೈ ಕೆಟಗರಿ ಭದ್ರತೆ ನೀಡಲಾಗಿದೆ. ಸಚಿವ ಮುನಿರತ್ನ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ಅನಗತ್ಯವಾಗಿ ಕೆಲವು ವ್ಯಕ್ತಿಗಳು ನ್ಯಾಯಾಲಯಕ್ಕೆ ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಮೌಖಿಕ ಎಚ್ಚರಿಕೆ ನೀಡಿದೆ.


Share It

You cannot copy content of this page