ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣನಾಗಿದ್ದ ವ್ಯಕ್ತಿಗೆ ಬೆಂಗಳೂರಿನ ನ್ಯಾಯಾಲಯ 10 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಮಧುಗಿರಿ ಮೂಲದ ರಾಮ್ ಪ್ರಸಾದ್ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಈತನ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರದ 71 ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶ ವಿ. ಪ್ರಕಾಶ್ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಎಂಎಸ್ಸಿ-ಬಿಎಡ್ ಓದಿದ್ದ ಮಂಡ್ಯದ ಲಾವಣ್ಯ ಎಂಬುವರನ್ನು ರಾಮಪ್ರಸಾದ್ ಪ್ರೀತಿಸಿ ವಿವಾಹವಾಗಿದ್ದ. ಮದುವೆಯ ಆರಂಭದ ದಿನಗಳಲ್ಲಿ ಪತ್ನಿಯೊಂದಿಗೆ ಮಂಡ್ಯದಲ್ಲೇ ವಾಸವಿದ್ದ ರಾಮಪ್ರಸಾದ್ ನಂತರ ವಾಸ್ತವ್ಯವನ್ನು ಬೆಂಗಳೂರಿಗೆ ವರ್ಗಾಯಿಸಿದ್ದ.
2015ರ ಜೂನ್ 11 ರಂದು ಲಾವಣ್ಯ ಪತಿ ರಾಮಪ್ರಸಾದ್ ಮನೆಯಲ್ಲಿದ್ದ ವೇಳೆಯೇ ನೇಣಿಗೆ ಕೊರಳೊಡ್ಡಿದ್ದರು. ಈ ಸಂಬಂಧ ಲಾವಣ್ಯ ತಂದೆ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನಲ್ಲಿ, ರಾಮಪ್ರಸಾದ್ ಹೆಚ್ಚಿನ ವರದಕ್ಷಿಣೆ ತರುವಂತೆ ಲಾವಣ್ಯಗೆ ಕಿರುಕುಳ ನೀಡುತ್ತಿದ್ದ. ಇದಲ್ಲದೇ ಮೇಲ್ಜಾತಿಗೆ ಸೇರಿರುವ ರಾಮಪ್ರಸಾದ್ ಮತ್ತು ಕುಟುಂಬದವರು ತಮ್ಮ ಮಗಳಿಗೆ ಜಾತಿ ನಿಂದನೆ ಮಾಡಿದ್ದಾರೆ. ಈ ಕಾರಣಕ್ಕೆ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಾವಿಗೂ ಮುನ್ನ ಲಾವಣ್ಯ ಡೈರಿಯಲ್ಲಿ ಪತಿಯ ಕಿರುಕುಳ, ಮಾನಸಿಕ ಹಿಂಸೆ, ದೈಹಿಕ ಕಿರುಕುಳ ಕುರಿತಂತೆ ದಾಖಲಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದರು.
ದೂರಿನ ಮೇರೆಗೆ ಪೊಲೀಸರು ಪೊಲೀಸರು ಐಪಿಸಿ ಸೆಕ್ಷನ್ 498(A), 304(B), 109 r/w 34 ಹಾಗೂ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(2)(v) ಅಡಿ ಎಫ್ಐಆರ್ ದಾಖಲಿಸಿ, ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅಭಿಯೋಜನೆ ಪರ ವಿಶೇಷ ಸರ್ಕಾರಿ ಅಭಿಯೋಜಕ ವಿ. ಶ್ರೀರಾಮ ವಾದ ಮಂಡಿಸಿದ್ದರು.
(S.C.No.1075/2015)