News

ಏರುತ್ತಿರುವ ಜೀವನ ವೆಚ್ಚ ಪರಿಗಣನೆ: ಪತ್ನಿಯ ಜೀವನಾಂಶ ದುಪ್ಪಟ್ಟುಗೊಳಿಸಿದ ಹೈಕೋರ್ಟ್

Share It

ಬದಲಾಗುತ್ತಿರುವ ಕಾಲಘಟ್ಟ ಹಾಗೂ ಏರುತ್ತಿರುವ ಜೀವನ ವೆಚ್ಚಗಳನ್ನು ಪರಿಗಣಿಸಿರುವ ಹೈಕೋರ್ಟ್ ಪತಿ ಪತ್ನಿಗೆ ನೀಡುತ್ತಿದ್ದ ಜೀವನಾಂಶ ಮೊತ್ತವನ್ನು 10 ಸಾವಿರ ರೂ.ನಿಂದ 20 ಸಾವಿರ ರೂ.ಗೆ ಹೆಚ್ಚಿಸಿ ತೀರ್ಪು ನೀಡಿದೆ.

ಜೀವನಾಂಶ ಹೆಚ್ಚಿಸುವಂತೆ ಕೋರಿ ಬೆಂಗಳೂರಿನ ವಿನಿತಾ ಥಾಮಸ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ಪೀಠ ತನ್ನ ತೀರ್ಪಿನಲ್ಲಿ “ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪತ್ನಿ ತಾವು ಬದುಕುತ್ತಿರುವ ರೀತಿ, ಏರಿಕೆಯಾಗುತ್ತಿರುವ ಜೀವನ ವೆಚ್ಚ ಮತ್ತಿತರ ವಿವರಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಿದೆ. ಆ ಅಂಶಗಳನ್ನು ಪರಿಗಣಿಸಿ ಜೀವನಾಂಶ ಮೊತ್ತ ಹೆಚ್ಚಳ ಮಾಡುವ ಕುರಿತು ಕೋರ್ಟ್‌ಗಳು ತೀರ್ಮಾನಿಸಬೇಕಾಗುತ್ತದೆ” ಎಂದು ಹೇಳಿದೆ.

ಅಲ್ಲದೇ, ವಿಶೇಷ ಮದುವೆ ಕಾಯಿದೆ ಸೆಕ್ಷನ್ 37ರಡಿ ಜೀವನಾಂಶ ಹೆಚ್ಚಳ ಕೋರಿ ಅರ್ಜಿದಾರರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಹಾಗೆಯೇ, ಪತಿ ಚೆನ್ನಾಗಿ ಆದಾಯ ಗಳಿಸಿದ್ದಾರೆಂಬ ಕಾರಣಕ್ಕೆ ಹೆಚ್ಚಿನ ಜೀವನಾಂಶ ನೀಡಬೇಕೆಂಬ ವಾದ ತಿರಸ್ಕರಿಸಿದ್ದ ಕೌಟುಂಬಿಕ ಅಭಿಪ್ರಾಯವನ್ನೂ ಹೈಕೋರ್ಟ್ ತಿರಸ್ಕರಿಸಿದೆ.

ಸುಪ್ರೀಂಕೋರ್ಟ್ ರೀಮಾ ಸಲ್ಕನ್ ವರ್ಸಸ್ ಸುಮೇರ್ ಸಿಂಗ್ ಸಲ್ಕನ್ ಪ್ರಕರಣದಲ್ಲಿ ಸಿಆರ್‌ಪಿಸಿ ಸೆಕ್ಷನ್ 125ರಡಿ ಒಮ್ಮೆ ಜೀವನಾಂಶ ನಿಗದಿಪಡಿಸಿದ ನಂತರವೂ ಕೋರ್ಟ್‌ಗಳು ಜೀವನ ವೆಚ್ಚ ಏರಿಕೆ ಮತ್ತಿತರ ಅಂಶಗಳನ್ನು ಪರಿಗಣಿಸಿ ಅದನ್ನು ಹೆಚ್ಚಳ ಮಾಡಬಹುದು ಎಂದು ಆದೇಶಿಸಿರುವ ಅಂಶವನ್ನು ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಈ ಪ್ರಕರಣದಲ್ಲಿ ಪತಿಯ ಆದಾಯವು ತಿಂಗಳಿಗೆ 1.5 ಲಕ್ಷದಿಂದ 2 ಲಕ್ಷ ರೂ.ಗಳಷ್ಟಿದೆ. ಆದರೂ, ಕೌಟುಂಬಿಕ ನ್ಯಾಯಾಲಯ ಜೀವನಾಂಶ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವುದು ಸರಿಯಲ್ಲ. ಅದು ಸಮಂಜಸವೂ ಅಲ್ಲ. ಜೀವನ ವೆಚ್ಚ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದಾಗಿ ಜೀವನಾಂಶ ಹೆಚ್ಚಳ ಮಾಡಲೇಬೇಕಾದ ಅನಿವಾರ್ಯತೆ ಕಂಡುಬಂದಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: 2010 ರಲ್ಲಿ ವಿವಾಹವಾಗಿದ್ದ ದಂಪತಿ ತಮ್ಮ ವಿವಾಹವನ್ನು “ವಿಶೇಷ ವಿವಾಹ ಕಾಯ್ದೆ – 1954″ರ ಅಡಿ ನೋಂದಾಯಿಸಿದ್ದರು. ದಂಪತಿ ನಡುವೆ ಕಲಹ ಏರ್ಪಟ್ಟಿದ್ದರಿಂದ 2012 ರಲ್ಲಿ ಪ್ರಕರಣ ಕೌಟುಂಬಿಕ ನ್ಯಾಯಾಲಯದ ಮುಂದೆ ಹೋಗಿತ್ತು. ಈ ವೇಳೆ ಪತಿ ವಿವಾಹ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ ಪತ್ನಿಗೆ ತಿಂಗಳಿಗೆ 10 ಸಾವಿರ ಜೀವನಾಂಶ ನಿಗದಿ ಮಾಡಿತ್ತು.

ಆ ಬಳಿಕ ಪತ್ನಿ ಜೀವನಾಂಶ ಹೆಚ್ಚಳ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಜೀವನ ವೆಚ್ಚ ದಿನೇದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೌಟುಂಬಿಕ ನ್ಯಾಯಾಲಯ ಮಾಸಿಕ 10 ಸಾವಿರ ಜೀವನಾಂಶ ನಿಗದಿಪಡಿಸಿರುವುದು ಸಮರ್ಪಕವಾಗಿಲ್ಲ. ಆದ್ದರಿಂದ ಮಾಸಿಕ 25 ಸಾವಿರ ಜೀವನಾಂಶ ಕೊಡಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.

(WP 16949/2021)


Share It

You cannot copy content of this page