Columns News

ಗಡಿ ವಿವಾದ ಮತ್ತು ರಾಜಕೀಯ

Share It

ಲೇಖಕರು: ಎಸ್.ಎಚ್ ಮಿಟ್ಟಲಕೋಡ, ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಧಾರವಾಡ.

ಮಹಾರಾಷ್ಟ್ರದ ಜತ್ತ ತಾಲೂಕನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು ಮಾತಾಡಿದ್ದಾರೆ. ಆದರೆ ಇದು ಒಂದು ರಾಜಕೀಯ ಹೇಳಿಕೆ ಅಂತ ಹೇಳಬಹುದು.

ಮಹಾಜನ ವರದಿ ಪ್ರಕಾರ ಜತ್ತ ತಾಲೂಕು, ಅಕ್ಕಲಕೋಟೆ ದಕ್ಷಿಣ ಸೊಲ್ಲಾಪುರ ತಾಲೂಕು ನಮಗೆ ಬಂದರೆ ನಿಪ್ಪಾಣಿ, ಖಾನಾಪುರ ಮಹಾರಾಷ್ಟ್ರಕ್ಕೆ ಹೋಗುತ್ತವೆ.

ಕೇರಳದ ಕಾಸರಗೋಡು, ಚಂದ್ರಗಿರಿ ನದಿಯ ಉತ್ತರ ಭಾಗ ಕರ್ನಾಟಕ ಸೇರಲು ಕೇರಳದ ಹೆಚ್ಚಿನ ತಕರಾರು ಇರಲಿಲ್ಲ. ಆದರೆ ಕರ್ನಾಟಕ ಸರಕಾರದ ಇಚ್ಛಾ ಶಕ್ತಿಯ ಕೊರತೆ ಕಾರಣ ಅದು ಕೈಗೂಡಲಿಲ್ಲ. ಈ ಕೊರಗಿನಲ್ಲಿ ಕವಿ ಕೈಯಾರ ಕಿಞ್ಞಣ್ಣ ರೈ ಅವರು ತೀರಿಕೊಂಡರು ಅನ್ನುವದು ವಿಷಾದಕರ.

ಮಹಾಜನ ವರದಿ ಕೇಂದ್ರ ಸರ್ಕಾರದ ಕಡತ ಕೊಠಡಿಯಲ್ಲಿ ಧೂಳು ತಿನ್ನುತ್ತಾ ಬಿದ್ದಿದೆ. ಅದನ್ನು ಜಾರಿ ಮಾಡದೇ ಈ ಗಡಿ ಸಮಸ್ಯೆ ಬಗೆ ಹರಿಯದು. ಮಹಾರಾಷ್ಟ್ರ ಸರಕಾರ ಗಡಿ ವಿವಾದದ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಹೂಡಿದ ದಾವೆ ಇನ್ನೂ ಪ್ರಾರಂಭಿಕ ಹಂತದಲ್ಲಿ ಇದೆ. ಹೀಗಾಗಿ ಮಹಾಜನ ವರದಿ ಕೂಡಾ ಈಗ ಜಾರಿ ಮಾಡಲು ಸಾಧ್ಯವಿಲ್ಲ.

ಕರ್ನಾಟಕಕ್ಕೆ ಒಂದಿಷ್ಟು ಅನ್ಯಾಯ ಆದರೂ ಮಹಾಜನ ವರದಿಯನ್ನು ಒಪ್ಪಿಕೊಂಡಿದೆ. ಆದರೆ ಕನ್ನಡದ ಗಂಡು ಮೆಟ್ಟಿನ ಭೂಮಿ, ಬೆಳಗಾವಿಯ ಮೇಲೆ ಕಣ್ಣು ಇಟ್ಟಿರುವ ಮಹಾರಾಷ್ಟ್ರಕ್ಕೆ ಬೆಳಗಾವಿ ಸಿಗದ ಕಾರಣ ಇದು ಒಪ್ಪಿಗೆ ಇಲ್ಲ. ಮಹಾಜನ ವರದಿ ಸುಮಾರು ಆರು ದಶಕಗಳ ಹಿಂದೆ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಅದು ಕಡತಗಳ ಕೊಠಡಿಯಲ್ಲಿ ಹಾಯಾಗಿದೆ. ಹಿಂದೆ ಕೇಂದ್ರ ಮತ್ತು ಕರ್ನಾಟಕ ರಾಜ್ಯದಲ್ಲಿ ಸುಮಾರು ಮೂವತ್ತು ವರ್ಷಗಳ ಕಾಲ ಒಂದೇ ಸರಕಾರ ಇದ್ದರೂ, ಮಹಾಜನ ವರದಿ ಮೇಲೆ ಯಾವದೇ ಅಂತಿಮ ತೀರ್ಮಾನ ಆಗಲಿಲ್ಲ. ಅಂದು ಕರ್ನಾಟಕದ ಎಲ್ಲ ಸಂಸದರು ಕಾಂಗ್ರೆಸ್ ಪಕ್ಷದವರೇ ಇರುತ್ತಿದ್ದರು.

ಆನಂತರ ಈವರೆಗೆ ರಾಜ್ಯ ಮತ್ತು ಕೇಂದ್ರಗಳಲ್ಲೂ ಒಂದೇ ಪಕ್ಷದ ಸರಕಾರಗಳು ಬಂದರೂ ಗಡಿ ವಿವಾದ ಯಥಾಸ್ಥಿತಿಯಲ್ಲಿ ಇದೆ. ಹಿಂದೆ ಬೆಳಗಾವಿಯಲ್ಲಿ ಐದಾರು ಜನ ಮಹಾರಾಷ್ಟ್ರ ಏಕೀಕರಣ ಸಮಿತಿ ಶಾಸಕರು ಆಯ್ಕೆಯಾಗುತ್ತಿದರು, ಅದು ಒಂದು ಆತಂಕದ ಅಂಶ ಆಗಿತ್ತು. ಆದರೆ ಇಂದು ಯಾರೂ ಆಯ್ಕೆಯಾಗುತ್ತಿಲ್ಲ ಅನ್ನುವದು ನೆಮ್ಮದಿ ಸಂಗತಿ. ಮಹಾಜನ ವರದಿ ಒಪ್ಪದ ಮಹಾರಾಷ್ಟ್ರ, ಆಗಾಗ ಕುಚೋದ್ಯ ಹೇಳಿಕೆ ನೀಡುತ್ತಾ ಗಡಿ ವಿವಾದ ನೆನಪಿಸುತ್ತ ಅದನ್ನು ರಾಜಕೀಯ ಕಾರಣಕ್ಕಾಗಿ ಜೀವಂತ ಇಡುವಲ್ಲಿ ಯಶಸ್ವಿ ಆಗಿದೆ. ಮಹಾಜನ ವರದಿ ಶೈತ್ಯಾಗಾರದಲ್ಲಿ ಇದೆ. ಬೆಳಗಾವಿ ಕರ್ನಾಟಕಲ್ಲಿ ಇದೆ. ಆ ಕಾರಣ ಮಹಾರಾಷ್ಟ್ರ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಗಡಿ ವಿವಾದ ಬಳಸಿಕೊಳ್ಳುತ್ತಲಿದೆ.

ಮಹಾಜನ ವರದಿ ತನ್ನ ಪರ ಇಲ್ಲ ಅನ್ನುವ ಕಾರಣ, ಅದನ್ನು ಕೈಬಿಟ್ಟು ಮಹಾರಾಷ್ಟ್ರ, ಮಾನ್ಯ ಸರ್ವೋಚ್ಚ ನ್ಯಾಯಾಲಯಲ್ಲಿ ಬೆಳಗಾವಿ ತಮಗೆ ಸೇರಬೇಕು ಅಂತ ಮೂಲ ದಾವೆ 4/2004 ದಾವೆ ಹಾಕಿ ಈ ವಿವಾದವನ್ನು ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸಿದೆ. ಈ ಮೊದಲು ಅರುಣ ದತ್ತಾತ್ರೆಯ ಸರ್ದೇಸಾಯಿ ಅನ್ನುವವರು ಖಾನಾಪುರ ಮುನಸಿಫ್ ನ್ಯಾಯಾಲಯದಲ್ಲಿ ಮೂಲದಾವೆ 128/1988 ದಾಖಲಿಸಿ, ರಾಜ್ಯ ಪುನರ್ಘಟನೆ ಕಾನೂನಿನ ಕಲಂ ಪ್ರಶ್ನೆ ಮಾಡಿ ಹಾಕಿದ್ದರು ಅದು ವಜಾ ಆಗಿದೆ. ಕಾನೂನು ಸಿಂಧುತ್ವ ತೀರ್ಮಾನಿಸುವ ಅಧಿಕಾರ ಅಧೀನ ನ್ಯಾಯಾಲಯಕ್ಕೆ ಇಲ್ಲ ಅನ್ನುವ ಸಂಗತಿ ಗೊತ್ತಿದ್ದರೂ, ಇಂತಹ ದಾವೆ ಹಾಕುವ ದುಸ್ಸಾಹಸ ಮರಾಠಿಗರು ಮಾಡುತ್ತಾರೆ.

ಈಗಿನ ಸ್ಥಿತಿಯಲ್ಲಿ ಕರ್ನಾಟಕದ ಯಾವದೇ ಭಾಗ ಮಹಾರಾಷ್ಟ್ರ ಪಡೆಯಲು ಅಥವಾ ಮಹಾರಾಷ್ಟ್ರದ ಯಾವದೇ ಭಾಗ ಕರ್ನಾಟಕ ಪಡೆಯಲು ಸಾಧ್ಯವಿಲ್ಲ. ಆದರೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸುಮ್ಮನೆ ಪ್ರಚೋದನ ಕಾರಿ ಹೇಳಿಕೆ ನೀಡಿ, ಸುಮ್ಮನೆ ಸಂಚಲನ ಮೂಡಿಸುತ್ತಾರೆ. ಇದರಿಂದ ಉಭಯ ರಾಜ್ಯಗಳಲ್ಲಿ ಪ್ರತಿಭಟನೆ ನಡೆದು ವಾಹನ ಸಂಚಾರ ವ್ಯತ್ಯಯ ಮತ್ತು ವಾಹನಗಳಿಗೆ ಹಾನಿ ಮತ್ತು ಉದ್ರಿಕ್ತ ವಾತಾವರಣ ನಿರ್ಮಾಣ ಆಗಿ ಶಾಂತಿ ಮತ್ತು ಸುವ್ಯವಸ್ಥೆ ಭಂಗ ಆಗುವದು ಬಿಟ್ಟರೆ ಬೇರೇನೂ ಸಾಧಿಸಲಾಗದು.

ನಿಜವಾಗಿ ಗಡಿನಾಡು ಅಭಿವೃದ್ದಿ ಆಗಬೇಕಾದರೆ ಉಭಯ ಸರಕಾರಗಳು ತಮ್ಮ ಗಡಿನಾಡಿನಲ್ಲಿ ಇರುವ ನೆರೆರಾಜ್ಯದ ಭಾಷಾ ಅಲ್ಪ ಸಂಖ್ಯಾತರ ಹಿತಾಸಕ್ತಿ ಕಾಯಬೇಕು. ಸುಮಾರು ಆರು ದಶಕಗಳ ಹಿಂದೆ ಸಲ್ಲಿಕೆಯಾದ ಮಹಾಜನ ವರದಿ ಜಾರಿ ಆಗಲು ಇನ್ನೂ ಎಷ್ಟು ದಶಕ ಬೇಕು ಗೊತ್ತಿಲ್ಲ. ಆದರೆ ಅಲ್ಲಿಯವರೆಗೆ ಗಡಿನಾಡಿನ ಅಭಿವೃದ್ದಿ ಕುಂಠಿತವಾಗಿ ಗಡಿನಾಡಿನ ಜನರಿಗೆ ತೊಂದೆರೆ ತಪ್ಪಿದ್ದಲ್ಲ.

ನಾನು ಅಥಣಿಯಲ್ಲಿ ನ್ಯಾಯಾಧೀಶ ಆಗಿದ್ದಾಗ ಆ ತಾಲೂಕಿನ ಉತ್ತರ ಮತ್ತು ಪೂರ್ವ ಭಾಗದ ಪಕ್ಷಗಾರರು ಮರಾಠಿಯಲ್ಲಿಯೇ ಸಾಕ್ಷಿ ಹೇಳುತ್ತಿದ್ದರು, ಅದನ್ನು ವಕೀಲರ ಸಹಾಯದಿಂದ ಕನ್ನಡಕ್ಕೆ ಭಾಷಾಂತರ ಮಾಡಿ ಬೆರಳಚ್ಚು ಮಾಡಿಸಿಕೊಳ್ಳಾಗುತ್ತಿತ್ತು. ಇದರ ಅರ್ಥ ಕರ್ನಾಟಕದಲ್ಲಿ ಮರಾಠಿಗರ ಹಿತಾಸಕ್ತಿ ಕಾಪಾಡುವ ಕೆಲಸ ನಡೆಯುತ್ತದೆ. ಆದರೆ ನಾವು ಮಹಾರಾಷ್ಟ್ರಕ್ಕೆ ಹೋದರೆ ಅಲ್ಲಿ ಕನ್ನಡ ಪ್ರೋತ್ಸಾಹಿಸುವ ವಾತಾವರಣ ಇಲ್ಲದ್ದು ಗಮನಿಸಿದ್ದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಇರುವ ಅಲ್ಪ ಸಂಖ್ಯಾತ ಗಡಿನಾಡ ಕನ್ನಡಿಗರು ಅಲ್ಲಿಯ ಸರಕಾರದ ನಿರ್ಲಕ್ಷ ಧೋರಣೆಗೆ ಬೇಸತ್ತು ಕನ್ನಡ ಬಿಟ್ಟು ಮರಾಠಿ ಭಾಷೆಯತ್ತ ಒಲವು ತೋರುವುದು ಅನಿವಾರ್ಯ ಆಗುತ್ತದೆ. ಇದಕ್ಕೆ ಬಗೆಹರಿಯದ ಗಡಿ ತಂಟೆ ನೇರ ಕಾರಣ.

ಗಡಿವಿವಾದ ಎಂದು ಮುಗಿಯುತ್ತದೆ ಎನ್ನುವ ಅನಿಶ್ಚಿತತೆ ಕಾರಣ, ಕರ್ನಾಟಕ ಮಹಾರಾಷ್ಟ್ರ ಗಡಿನಾಡು ಮೂಲಭೂತ ಸೌಕರ್ಯ ಅಭಿವೃದ್ದಿ ಮಾಡಲು ಒಂದು ವ್ಯವಸ್ಥೆ ಮಾಡಬೇಕು. ಕೇವಲ ಗಡಿ ತಂಟೆ ಕಾರಣ ರಾಜ್ಯ ಸರ್ಕಾರಗಳ ಅಸಡ್ಡೆಗೆ ಗುರಿಯಾಗಿ ಮೂಲಭೂತ ಸೌಕರ್ಯ ವಂಚಿತರಾಗಿರುವ ಗಡಿನಾಡು ಜನರಿಗೆ ಪರಿಹಾರ ನೀಡುವದು ಅಗತ್ಯ. ಆಗ ಗಡಿ ಅಭಿವೃದ್ಧಿ ತಾನಾಗಿಯೇ ನಡೆಯುತ್ತದೆ. ಮುಂದೆ ಎಂದೋ ಒಂದು ದಿನ ಗಡಿವಿವಾದ ಮುಗಿದಾಗ, ಯಾವ ಪ್ರದೇಶ ಯಾರಿಗೆ ಬಂದರೂ ಅದು ಅಭಿವೃದ್ದಿಯಾದ ಪ್ರದೇಶ ಆಗಿರುತ್ತದೆ.ವಿವಾದದ ಕಾರಣ ಉಭಯ ರಾಜ್ಯದ ಗಡಿನಾಡ ಜನ ಅಭಿವೃದ್ದಿ ವಂಚಿರಾಗುವುದು ತಪ್ಪುತ್ತದೆ. ಕೇವಲ ರಾಜಕೀಯಕ್ಕಾಗಿ ಹೇಳಿಕೆ ನೀಡಿ, ಉಭಯ ರಾಜ್ಯಗಳಲ್ಲಿ ಉದ್ರಿಕ್ತ ವಾತಾವರಣ ಸೃಷ್ಟಿ ಮಾಡುವ ಚಿಲ್ಲರೆ ರಾಜಕೀಯವೂ ನಿಲ್ಲುತ್ತದೆ.

ಯಾವುದೇ ರಾಜ್ಯದ ವಿರೋಧ ಕಟ್ಟಿಕೊಳ್ಳಲು ಸಿದ್ದ ಇಲ್ಲದ, ಕೇಂದ್ರ ಸರಕಾರ ಈ ವಿವಾದ ಬಗೆ ಹರಿಸಲು ಇಷ್ಟ ಪಡುವದಿಲ್ಲ. ಇನ್ನು ಸುಪ್ರೀಮ್ ಕೋರ್ಟಿನಲ್ಲಿ ದಾವೆ ಇರುವದನ್ನು ಕೇಂದ್ರ ಸರಕಾರ ಬಳಸಿಕೊಂಡು ನ್ಯಾಯಾಲಯದ ತೀರ್ಪು ಬರಲಿ ಎಂದು ನುಣುಚಿಕೊಳ್ಳಬಹದು. ಇನ್ನು ಸುಪ್ರೀಮ್ ಕೋರ್ಟ್ ತೀರ್ಪು ಎಂದು ಬರುವುದೊ ಗೊತ್ತಿಲ್ಲ.

ಉಭಯ ರಾಜ್ಯಗಳ ಸಭೆಗಳು ಯಾವ ಪರಿಹಾರ ನೀಡಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಹೀಗಾಗಿ ಗಡಿ ವಿವಾದದಲ್ಲಿ ಕೇಂದ್ರ ಯಾವುದೇ ತೀರ್ಮಾನ ಮಾಡುವ ಸಾಧ್ಯತೆ ಇಲ್ಲ. ಆದರೆ ಸಂಸತ್ತಿನಲ್ಲಿ ಮಹಾಜನ ವರದಿ ಮೇಲೆ ತೀರ್ಮಾನ ಆಗಬೇಕು ಅದು ಮಾತ್ರ ಈ ಸಮಸ್ಯೆಗೆ ಪರಿಹಾರ ನೀಡಬಲ್ಲದು.

ರಾಜಕೀಯ ಬದಿಗಿಟ್ಟು, ಒಟ್ಟಾರೆ ಉಭಯ ರಾಜ್ಯಗಳ ಗಡಿ ಪ್ರದೇಶ ಅಭಿವೃದ್ಧಿಗೆ ಒಂದು ಸೂಕ್ತ ಸ್ವತಂತ್ರ ಪ್ರಾಧಿಕಾರ ರಚನೆ ಮಾಡಿ, ಜನಹಿತ ಕಾಪಾಡುವುದು ಇಂದಿನ ಅಗತ್ಯ. ಯಾವ ರಾಜ್ಯದಲ್ಲಿದ್ದರೂ ಈ ದೇಶದ ನಾಗರಿಕರು ಯಾವದೇ ಮೂಲಭೂತ ಸೌಕರ್ಯ ವಂಚಿತರಾಗಬಾರದು. ಆದರೆ ಕೇವಲ ರಾಜಕೀಯ ಕಾರಣಕ್ಕಾಗಿ ಗಡಿವಿವಾದ ಚುನಾವಣೆ ಸಮಯದಲ್ಲಿ ಕೆದಕುತ್ತ ಗಡಿನಾಡ ಜನರ ಜೀವನ ದುರ್ಭರ ಮಾಡುವದು ಅಕ್ಷಮ್ಯ.

ಗಡಿವಿವಾದ ಎಂದಾದರೂ ಮುಗಿಯಲಿ, ಅದು ತೀರ್ಮಾನ ಆಗುವವರೆಗೆ, ಉಭಯ ಗಡಿನಾಡು ಪ್ರದೇಶ ಅಭಿವೃದ್ದಿ ಮಾಡುವ ಕುರಿತು ಒಂದು ಕ್ರಿಯಾಯೋಜನೆ ಕೇಂದ್ರ ಸರಕಾರ ರೂಪಿಸಿ, ಗಡಿ ರಾಜಕೀಯದ ಕಾರಣ ಮೂಲಭೂತ ಸೌಕರ್ಯ ಗಡಿನಾಡು ಜನರಿಗೆ ಒದಗಿಸಿ ಅವರ ಬವಣೆ ನೀಗಿಸಬೇಕು.


Share It

You cannot copy content of this page