News ⓇJudgements

ಕಾರ್ಮಿಕ ಕೆಲಸಕ್ಕೆ ಹೋಗುವಾಗ ಮೃತಪಟ್ಟರೂ ಪರಿಹಾರ ಕೊಡಬೇಕು: ಹೈಕೋರ್ಟ್

Share It

ಬೆಂಗಳೂರು: ಕಾರ್ಮಿಕ ಕೆಲಸಕ್ಕೆ ತೆರಳುವ ವೇಳೆ ಸಾವನ್ನಪ್ಪಿದರೂ ಅದನ್ನು ಕೆಲಸದ ಅವಧಿಯಲ್ಲಿ ಸಂಭವಿಸಿದ ಸಾವು ಎಂದೇ ಪರಿಗಣಿಸಿ, ಆತನ ವಾರಸುದಾರರಿಗೆ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾರ್ಮಿಕ ಮೃತಪಟ್ಟಿದ್ದ ಪ್ರಕರಣದಲ್ಲಿ ಆತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಚಿಕ್ಕಮಗಳೂರಿನ ಕಾರ್ಮಿಕ ಆಯುಕ್ತರು ಆದೇಶ ಹೊರಡಿಸಿದ್ದರು.

ಈ ಆದೇಶ ಪ್ರಶ್ನಿಸಿ ಕಾಫಿ ಎಸ್ಟೇಟ್ ಮಾಲಿಕರು ಹಾಗೂ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ, ಕೆಲಸಕ್ಕೆ ತೆರಳುವ ವೇಳೆ ಕಾರ್ಮಿಕ ಮೃತಪಟ್ಟರೂ ಆತನ ವಾರಸುದಾರರು ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2006ರ ಜುಲೈ 12ರಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಸುಭಾಷನಗರ ನಿವಾಸಿ ಸ್ವಾಮಿಗೌಡ, ಕೊಳ್ಳಿಬೈಲು ಗ್ರಾಮದ ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದರು. ಮೃತನ ಕುಟುಂಬ ಪರಿಹಾರ ಕೋರಿ ಕಾರ್ಮಿಕ ಆಯುಕ್ತರಿಗೆ ಅರ್ಜಿ ಸಲ್ಲಿಸಿತ್ತು. 2010ರ ಅಕ್ಟೋಬರ್ 28ರಂದು ಸ್ವಾಮಿಗೌಡ ಕುಟುಂಬಕ್ಕೆ ಕಾಫಿ ತೋಟದ ಮಾಲಿಕ 75,032 ರೂಪಾಯಿ ಹಾಗೂ ವಿಮಾ ಸಂಸ್ಥೆ 1,01,196 ರೂಪಾಯಿ ಸೇರಿ ಒಟ್ಟು 1,76,228 ರೂಪಾಯಿ ಪರಿಹಾರವನ್ನು ಶೇ. 7 ಬಡ್ಡಿದರದೊಂದಿಗೆ ನೀಡುವಂತೆ ಆಯುಕ್ತರು ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ತೋಟದ ಮಾಲಿಕ ಹಾಗೂ ವಿಮಾ ಸಂಸ್ಥೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಿಮಾ ಸಂಸ್ಥೆ ವಾದ: ಕೂಲಿ ಕಾರ್ಮಿಕನ ಸಾವು ಅಪಘಾತದಿಂದ ಆಗಿರುವಂತದ್ದಲ್ಲ. ಸಾವು ಸಂಭವಿಸಿದ ವೇಳೆ ಆತ ಕೆಲಸ ಮಾಡುತ್ತಿರಲಿಲ್ಲ. ಘಟನೆಯ ದಿನ ಅವನು ಕೆಲಸಕ್ಕೆ ಹಾಜರಾಗಿಯೇ ಇಲ್ಲ. ಮಳೆಯಿಂದ ತೋಯ್ದಿದ್ದ ಹಸಿ ನೆಲದ ಮೇಲೆ ಕಾಲಿಟ್ಟು ಜಾರಿ ಬಿದ್ದು, ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾನೆ. ಇದನ್ನು ಕೆಲಸ ಅವಧಿಯಲ್ಲಿ ಸಂಭವಿಸಿದ ಸಾವು ಎಂದು ಪರಿಗಣಿಸಲು ಸಾಧ್ಯವಿಲ್ಲವಾದ್ದರಿಂದ, ಮೃತನ ಕುಟುಂಬಕ್ಕೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ವಾದಿಸಿತ್ತು.

ಎಸ್ಟೇಟ್ ಮಾಲೀಕರ ವಾದ: ಎಸ್ಟೇಟ್‌ನ ಕೆಲಸದ ಅವಧಿ ಬೆಳಗ್ಗೆ 8ರಿಂದ ಸಂಜೆ 4.30. ಆದರೆ, ಕಾರ್ಮಿಕ ಬೆಳಗ್ಗೆ 7 ಗಂಟೆಗೆ ಮೃತಪಟ್ಟಿರುವುದರಿಂದ ಕೆಲಸದ ವೇಳೆ ಸಂಭವಿಸಿದ ಸಾವು ಎನ್ನಲಾಗುವುದಿಲ್ಲ. ಇನ್ನು, ತೋಟದಲ್ಲಿ ಕೆಲಸ ಮಾಡುವ ಎಲ್ಲ ಕಾರ್ಮಿಕರಿಗೂ ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯಲ್ಲಿ ವಿಮೆ ಮಾಡಿಸಿದ್ದು, ಸಾವನ್ನಪ್ಪಿದ ವೇಳೆ ಆತನ ವಿಮೆ ಚಾಲ್ತಿಯಲ್ಲಿತ್ತು. ಆದ್ದರಿಂದ, ಮೃತನಿಗೆ ಪರಿಹಾರ ಪಾವತಿಸುವ ಹೊಣೆ ತನ್ನದಲ್ಲ ಎಂದು ತೋಟದ ಮಾಲೀಕ ವಾದಿಸಿದ್ದರು.

ಹೈಕೋರ್ಟ್ ತೀರ್ಪು: ಸ್ವಾಮಿಗೌಡ ಕೆಲಸದ ವೇಳೆ ಸಾವನ್ನಪ್ಪಿಲ್ಲ ಎಂದು ವಿಮಾ ಸಂಸ್ಥೆ ಮತ್ತು ತೋಟದ ಮಾಲೀಕ ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಕಾರ್ಮಿಕ ಸ್ವಾಮಿಗೌಡ ಕೆಲಸಕ್ಕೆಂದೇ ಮನೆಯಿಂದ ಹೊರಟಿದ್ದಾನೆ. ಹೀಗಾಗಿ ಆತನ ಸಾವು ಕೆಲಸದ ಅವಧಿಯಲ್ಲಿ ಸಂಭವಿಸಿರುವುದಲ್ಲ ಎಂಬ ವಾದ ಒಪ್ಪಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್, ಮಂಜು ಸರ್ಕಾರ್ ವರ್ಸಸ್ ಮೊಬೀಷ್ ಮಿಯಾ ಪ್ರಕರಣದಲ್ಲಿ ಕೆಲಸಕ್ಕೆ ಆಗಮಿಸುವ ಮತ್ತು ಕೆಲಸ ಮುಗಿಸಿ ಹಿಂದಿರುಗುವ ಸಮಯವೂ ಕೆಲಸದ ಅವಧಿಯಾಗಿರುತ್ತದೆ ಎಂದು ಹೇಳಿದೆ.

ಈ ಪ್ರಕರಣದಲ್ಲಿ ಬೆಳಗ್ಗೆ 8 ಗಂಟೆಯಿಂದ ಕೆಲಸದ ಸಮಯ ಆರಂಭವಾದರೂ, ಕೆಲಸಕ್ಕೆಂದೇ ಮನೆಯಿಂದ ಹೊರಟು ಬರುವ ವೇಳೆ 7.30ಕ್ಕೆ ಸಾವು ಸಂಭವಿಸಿದೆ. ಒಂದು ವೇಳೆ ಮನೆಯಲ್ಲೇ ಆತ ಮೃತಪಟ್ಟಿದ್ದರೆ ಮಾಲೀಕ ಹಾಗೂ ವಿಮಾ ಸಂಸ್ಥೆಯ ವಾದ ಒಪ್ಪಬಹುದಿತ್ತು. ಆದರೆ, ಕೆಲಸಕ್ಕೆಂದೇ ತೆರಳುತ್ತಿದ್ದಾಗ ಮಾಲೀಕನಿಗೆ ಸೇರಿದ ಜಾಗದಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿರುವುದರಿಂದ, ಮಾಲೀಕರು ಹಾಗೂ ವಿಮಾ ಕಂಪನಿ ಪರಿಹಾರ ಪಾವತಿಸಬೇಕು. ಆ ಪ್ರಕಾರ ಕಾರ್ಮಿಕ ಆಯುಕ್ತರು ಹೊರಡಿಸಿರುವ ಆದೇಶ ನ್ಯಾಯಸಮ್ಮತವಾಗಿದ್ದು, ಮೃತನ ಕುಟುಂಬಕ್ಕೆ ವಿಮಾ ಸಂಸ್ಥೆ ಮತ್ತು ಎಸ್ಟೇಟ್ ಮಾಲೀಕ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

(MFA 5322/2011)


Share It

You cannot copy content of this page