News ⓇJudgements

ಪರಿವರ್ತನೆಗೊಂಡ ಎಸ್ಸಿ-ಎಸ್ಟಿ ಭೂಮಿ ಮಾರಾಟಕ್ಕೆ ಪೂರ್ವಾನುಮತಿ ಬೇಕಿಲ್ಲ: ಹೈಕೋರ್ಟ್

Share It

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾಗಿದ್ದ ಜಮೀನು ಕೃಷಿಯೇತರ ಉದ್ದೇಶಗಳ ಬಳಕೆಗೆ ಪರಿವರ್ತನೆಗೊಂಡಿದ್ದರೆ ಅದರ ಮಾರಾಟಕ್ಕೆ ಜಿಲ್ಲಾಧಿಕಾರಿಯ (ಸರ್ಕಾರದ) ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಬೆಂಗಳೂರು ಉತ್ತರ ತಾಲೂಕಿನ ಜಾಲ ಹೋಬಳಿಯ ಮೀನುಕುಂಟೆ ಗ್ರಾಮದ ಮುನ್ನಯ್ಯ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಲೋಕ್ ಆರಾಧೆ, ನ್ಯಾ. ಸಚಿನ್ ಶಂಕರ್ ಮಗದಂ ಮತ್ತು ನ್ಯಾ. ಎಂ ನಾಗಪ್ರಸನ್ನ ಅವರಿದ್ದ ತ್ರಿಸದಸ್ಯಪೀಠ ಈ ಮಹತ್ವದ ತೀರ್ಪು ನೀಡಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾಗಿರುವ ಭೂಮಿಯನ್ನು ‘ಕರ್ನಾಟಕ ಭೂ ಕಂದಾಯ ಕಾಯ್ದೆ-1964’ರ ಸೆಕ್ಷನ್ 95ರ ಅಡಿಯಲ್ಲಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಿದ್ದರೆ, ಅದು ಮಂಜೂರಾದ ಭೂಮಿಯ ಸ್ವರೂಪ ಕಳೆದುಕೊಳ್ಳಲಿದೆ. ಅಂತಹ ಸಂದರ್ಭದಲ್ಲಿ ಆ ಭೂಮಿಯನ್ನು ಮಾರಾಟ ಮಾಡಲು ಅಥವಾ ಬೇರೆಯವರಿಗೆ ವರ್ಗಾಯಿಸಲು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿ ವರ್ಗಾವಣೆ ನಿಷೇಧ) ಕಾಯ್ದೆ-1978ರ ಸೆಕ್ಷನ್‌4 (2)ರ ಪ್ರಕಾರ ಜಿಲ್ಲಾಧಿಕಾರಿಯಿಂದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ. ಮಂಜೂರಾದ ಭೂಮಿಗೆ ಮಾತ್ರ ಪೂರ್ವಾನುಮತಿ ಪಡೆಯುವ ಅಗತ್ಯವಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಎಸ್ಸಿ ಎಸ್ಟಿ ಸಮುದಾಯಕ್ಕೆ ಮಂಜೂರು ಮಾಡಿದ ಭೂಮಿಯನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 95(2)ರಡಿ ಭೂ ಪರಿವರ್ತನೆ ಮಾಡಿದ್ದರೆ ಅದನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಮುಂದಾಗಿದ್ದಾರೆ ಎಂದೇ ಅರ್ಥ. ಶಾಸನದ ಉದ್ದೇಶ ‘ಮಂಜೂರಾದ ಭೂಮಿ’ಗೆ ರಕ್ಷಣೆ ನೀಡುವುದಷ್ಟೇ. ಆದರೆ, ಮಂಜೂರಾದ ಭೂಮಿ ಪರಿವರ್ತನೆಯಾದಾಗ ಅದು ತನ್ನ ಮೂಲ ಸ್ವರೂಪ ಕಳೆದುಕೊಳ್ಳುವುದರಿಂದ 1978ರ ಪಿಟಿಸಿಎಲ್ ಅಡಿ ಲಭ್ಯವಿರುವ ರಕ್ಷಣೆ ಮುಂದುವರಿಯುವುದಿಲ್ಲ ಎಂದು ಪೀಠ ವಿವರಿಸಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರು ಉತ್ತರ ತಾಲೂಕಿನ ಕೊಂಡಪ್ಪ ಎಂಬುವರಿಗೆ 1927-28ರಲ್ಲಿ ಜಾಲ ಹೋಬಳಿಯ ಮೀನುಕುಂಟೆ ಗ್ರಾಮದಲ್ಲಿ 5 ಎಕರೆ 3 ಗುಂಟೆ ಭೂಮಿ ಸರ್ಕಾರದಿಂದ ಮಂಜೂರಾಗಿತ್ತು. ನಂತರ ಆ ಭೂಮಿಯನ್ನು ಮಾರಾಟ ಮಾಡಲಾಗಿತ್ತು. ಆದರೆ ಅದರ ವಾರಸುದಾರರು 1996ರಲ್ಲಿ ದಾವೆ ಹೂಡಿ, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿ ವರ್ಗಾವಣೆ ನಿಷೇಧ) ಕಾಯ್ದೆ-1978ರ ಸೆಕ್ಷನ್ 4(2)ಪ್ರಕಾರ ಮಂಜೂರಾದ ಭೂಮಿ ಮಾರಾಟ ಮಾಡಲು ಸರ್ಕಾರದ ಪೂರ್ವಾನುಮತಿ ಪಡೆಯಬೇಕು. ಈ ಭೂಮಿಯ ಮಾರಾಟಕ್ಕೆ ಸರ್ಕಾರದಿಂದ ಪೂರ್ವಾನುಮತಿ ಪಡೆದಿಲ್ಲ. ಹಾಗಾಗಿ, ಭೂ ಮಾರಾಟ ರದ್ದುಗೊಳಿಸಬೇಕೆಂದು ಕೋರಿದ್ದರು.

ಭೂಮಿ ಖರೀದಿಸಿದ್ದ ಭಿಮಲ್ ಕುಮಾರ ಗೋಯಂಕಾ ಪರ ವಕೀಲರು, ಕರ್ನಾಟಕ ಭೂ ಸುಧಾರಣಾ ಕಾಯ್ದೆ-1964ರ ಸೆಕ್ಷನ್ 95ರಡಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆ ಮಾಡಿ ಮಾರಾಟ ಮಾಡಲಾಗಿದೆ, ಆದ್ದರಿಂದ ಭೂ ಮಾರಾಟಕ್ಕೆ ಸರ್ಕಾರದ ಪೂರ್ವಾನುಮತಿ ಅಗತ್ಯವಿಲ್ಲ ಎಂದು ವಾದಿಸಿದ್ದರು.

(WP 60483/2016)


Share It

You cannot copy content of this page