ⓇJudgements

ಎಸ್ಸಿ-ಎಸ್ಟಿ ಜಮೀನು ಮಾರಾಟ: 12 ವರ್ಷ ಬಳಿಕ ಹಕ್ಕು ಮರುಸ್ಥಾಪನೆ ಕೋರಿದ್ದ ಅರ್ಜಿ ವಜಾ

Share It

ಬೆಂಗಳೂರು: ಜಮೀನನ್ನು ಮಾರಾಟ ಮಾಡಿ 12 ವರ್ಷಗಳ ಬಳಿಕ ತಾವು ಮಾರಾಟ ಮಾಡಿದ್ದ ಭೂಮಿಯ ಮೇಲಿನ ಹಕ್ಕನ್ನು ಮರುಸ್ಥಾಪನೆ ಮಾಡುವಂತೆ ಕೋರಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಮಂಜೂರಾಗಿದ್ದ ಜಮೀನು ಮಾರಾಟ ಮಾಡಿ, ಪಿಟಿಸಿಎಲ್ ಕಾಯ್ದೆ ಅಡಿ ಮತ್ತೆ ಅದರ ಮೇಲೆ ಹಕ್ಕು ಮರು ಸ್ಥಾಪಿಸಲು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಹಾಗು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಅರ್ಜಿದಾರರ ಪೂರ್ವಜರು ಜಮೀನು ಮಾರಾಟ ಮಾಡಿ 12 ವರ್ಷಗಳೇ ಕಳೆದಿವೆ. ಇದೀಗ ಆ ಜಮೀನು ಮತ್ತೊಬ್ಬರಿಗೆ ವರ್ಗಾವಣೆಯಾಗಿದ್ದು, ಅದನ್ನು ಅನೂರ್ಜಿತ ಎಂದು ಹೇಳುವುದು ಅತ್ಯಂತ ಅಸಮಂಜಸ, ಅಸಮಾನತೆ ಮತ್ತು ಕಾನೂನಿಗೆ ವಿರುದ್ಧವಾಗಿರಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲವು ಭೂಮಿಗಳ ಪರಭಾರೆ ನಿಷೇಧ) ಪಿಟಿಸಿಎಲ್ ಕಾಯ್ದೆಗೆ 2023ರಲ್ಲಿ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ದು, ಕಲಂ 5ಕ್ಕೆ ಸಿ ಮತ್ತು ಡಿ ಉಪ ಕಲಂಗಳನ್ನು ಸೇರಿಸಿದ್ದರು. ಅವುಗಳಂತೆ ಸರ್ಕಾರದಿಂದ ಪರಿಶಿಷ್ಟ ಜಾತಿಗೆ ಸೇರಿದವರಿಗೆ ಮಂಜೂರಾದ ಜಮೀನನ್ನು ಮಾರಾಟದ ಬಳಿಕ ಹಿಂಪಡೆಯಲು ಯಾವುದೇ ಕಾಲಮಿತಿ ಇರುವುದಿಲ್ಲ. ಈ ನಿಯಮ ಉಪವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಿಗೆ ಅನ್ವಯಿಸಲಿದೆ ಎಂದು ಸರ್ಕಾರ ತಿಳಿಸಿದೆ. ಆದರೆ, ಈ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಏಕಸದಸ್ಯ ಪೀಠದ ಮುಂದೆ ಪ್ರಶ್ನಿಸಿದ್ದು, ಅರ್ಜಿ ಇನ್ನೂ ವಿಚಾರಣಾ ಹಂತದಲ್ಲಿದೆ. ಈ ಸಂದರ್ಭದಲ್ಲಿ ಅದರ ಮೇಲೆ ನಿರ್ಧಾರಕ್ಕೆ ಬರಲಾಗುವುದಿಲ್ಲ ಎಂದು ಪೀಠ ತಿಳಿಸಿದೆ.

ಜೊತೆಗೆ, ಗೌರಮ್ಮ ಅಲಿಯಾಸ್ ಗಂಗಮ್ಮ ಪ್ರಕರಣದಲ್ಲಿ ಹೈಕೋರ್ಟ್‌ನ ಮತ್ತೊಂದು ಪೀಠ ಜಮೀನು ಮಾರಿದ ಬಳಿಕ ಹಲವು ವರ್ಷಗಳ ನಂತರ ಮತ್ತೆ ಜಮೀನಿನ ಮೇಲಿನ ಹಕ್ಕುಗಳನ್ನು ಮರು ಸ್ಥಾಪಿಸುವಂತೆ ಆದೇಶಿಸುವುದು ಸಮರ್ಥನೀಯವಲ್ಲ ಎಂಬುದಾಗಿ ತಿಳಿಸಿದೆ. ಹೀಗಾಗಿ ಮೇಲ್ಮನವಿದಾರರು ಸಾಕಷ್ಟು ವಿಳಂಬವಾಗಿ ಆಸ್ತಿಯ ಹಕ್ಕುಗಳನ್ನು ಪುನರ್ ಸ್ಥಾಪಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: ಲಕ್ಷ್ಮಯ್ಯ ಎಂಬುವರಿಗೆ 1981ರಲ್ಲಿ ಸರ್ಕಾರದಿಂದ ಜಮೀನು ಮಂಜೂರಾಗಿತ್ತು. ಈ ಜಮೀನನ್ನು 1995ರಲ್ಲಿ ಬೇರೊಬ್ಬರಿಗೆ ಮಾರಾಟ ಮಾಡಿದ್ದರು. ಬಳಿಕ 2008ರಲ್ಲಿ ಜಮೀನಿನ ಹಕ್ಕುಗಳ ಮರುಸ್ಥಾಪನೆ ಕೋರಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ್ದ ಉಪ ವಿಭಾಗಾಧಿಕಾರಿಗಳು ಜಮೀನಿನ ಹಕ್ಕುಗಳನ್ನು ಲಕ್ಷ್ಮಯ್ಯ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದರು.

ಇದನ್ನು ಪ್ರಶ್ನಿಸಿ ಜಮೀನು ಖರೀದಿದಾರರು ಜಿಲ್ಲಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿದ್ದ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳ ಆದೇಶವನ್ನು ರದ್ದುಪಡಿಸಿದ್ದರು. ಅಲ್ಲದೆ, ಜಮೀನು ಮಾರಾಟ ಮಾಡಿ ಸಾಕಷ್ಟು ವಿಳಂಬವಾಗಿದೆ. ಆದಕಾರಣ ಅರ್ಜಿದಾರರ ಮನವಿಯನ್ನು ಪುರಸ್ಕರಿಸುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಏಕಸದಸ್ಯ ಪೀಠವೂ ತಿರಸ್ಕಿರಿದ್ದರಿಂದ ಅರ್ಜಿದಾರರು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

(WRIT APPEAL NO. 210 OF 2023 (SC-ST))


Share It

You cannot copy content of this page