ರಾಜ್ಯದಲ್ಲಿ ಘೋಷಣೆ ಮಾಡಿರುವ ಮತ್ತು ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳು ಸಮಾನತೆಗೆ ವಿರುದ್ಧವಾಗಿವೆ ಮತ್ತು ಸಂವಿಧಾನದ ವಿಧಿ 14ನ್ನು ಉಲ್ಲಂಘಿಸಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಯ್ಕೆ ಅಸಿಂಧು ಕೋರಿ ಸಲ್ಲಿಸಿರುವ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದಾರೆ.
ರಾಜ್ಯದಲ್ಲಿ ಮಹಿಳೆಯರಿಗಷ್ಟೇ ಅನ್ವಯಿಸುವಂತೆ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳು ಸಂವಿಧಾನದ ವಿಧಿ 14ರ ಉಲ್ಲಂಘನೆಯಾಗಿವೆ. ಇಂತಹ ಯೋಜನೆಗಳು ಪುರುಷರನ್ನು ಅಸಮಾನತೆಯಿಂದ ಕಾಣಲು ಕಾರಣವಾಗಲಿದೆ” ಎಂದು ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹೈಕೋರ್ಟ್ಗೆ ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಮೈಸೂರಿನ ವರುಣಾ ಕ್ಷೇತ್ರದ ಕೂಡನಹಳ್ಳಿ ನಿವಾಸಿ ಕೆ.ಎಂ.ಶಂಕರ್ ಸಲ್ಲಿಸಿರುವ ಚುನಾವಣಾ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ.ಎಸ್.ಸುನಿಲ್ ದತ್ ಯಾದವ್ ಅವರ ಪೀಠದಲ್ಲಿ ಮೇಲಿನಂತೆ ವಕೀಲರು ವಾದಿಸಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಅಗತ್ಯವಿರುವವರೆಗೆ ನೀಡಬಹುದಿತ್ತು. ಆದರೆ ಅದನ್ನು ಎಲ್ಲರಿಗೂ ವಿಸ್ತರಿಸಲಾಗಿದೆ. ಮಹಿಳೆಯರಿಗೆ ನೀಡಿರುವ ಉಚಿತ ಬಸ್ ಪ್ರಯಾಣ ಸೇವೆಯನ್ನು ಪುರುಷರಿಗೆ ವಿಸ್ತರಿಸದಿರುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ. ಗ್ಯಾರಂಟಿ ಯೋಜನೆಗಳನ್ನು ಅಗತ್ಯವಿರುವವರಿಗೆ ನೀಡಬಹುದಿತ್ತು. ರಾಜ್ಯದ ಮತದಾರರನ್ನು ಲಘುವಾಗಿ ಪರಿಗಣಿಸಲಾಗಿದೆ. ಇದು ಸಂವಿಧಾನಬಾಹಿರ” ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಅಲ್ಲದೇ, ವಿಶ್ವದ ಅನೇಕ ದೇಶಗಳು ತಮ್ಮ ಅಧಿಕಾರಿಗಳು/ಸಿಬ್ಬಂದಿಗೆ ವೇತನ ನೀಡಲಾಗದ ಸ್ಥಿತಿ ತಲುಪಿವೆ. ಕಾಂಗ್ರೆಸ್ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಕೊನೆಗೊಳಿಸದಿದ್ದರೆ, ನಮ್ಮ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೂ ಗಂಭೀರ ಪರಿಣಾಮ ಬೀರಲಿದೆ.
ಸಿದ್ದರಾಮಯ್ಯ ಆಯ್ಕೆ ಸಿಂಧುವಲ್ಲ: ಗ್ಯಾರಂಟಿ ಯೋಜನೆಗಳು ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನೀತಿ ನಿರ್ದೇಶಕ ತತ್ವಗಳಿಗೆ ವಿರುದ್ಧವಾಗಿವೆ. ಯೋಜನೆಗಳನ್ನು ಒಳಗೊಂಡ ಪ್ರಣಾಳಿಕೆಯು ನೋಂದಾಯಿತ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪ್ರಣಾಳಿಕೆ ಅಲ್ಲ. ಅದು ಕೆಪಿಸಿಸಿಯ ಪ್ರಣಾಳಿಕೆ. ಆದರೆ, ಕೆಪಿಸಿಸಿ ನೋಂದಾಯಿತ ಪಕ್ಷವಲ್ಲ, ಅದರ ಹೆಸರಿನಲ್ಲಿ ರೂಪಿಸಿರುವ ಪ್ರಣಾಳಿಕೆಯು ಭ್ರಷ್ಟಾಚಾರಕ್ಕೆ ಸಮ. ಸಿದ್ದರಾಮಯ್ಯನವರೇ ಪ್ರಣಾಳಿಕೆ ರೂಪಿಸಿ, ಪ್ರಚಾರ ಮಾಡಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಅವರ ಆಯ್ಕೆ ಅನೂರ್ಜಿತಗೊಳಿಸಬೇಕು ಎಂದು ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ.
ಅಲ್ಲದೇ, ಗ್ಯಾರಂಟಿ ಯೋಜನೆಗಳ ಕಾರ್ಡ್‌ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಹಿ ಮಾಡಿದ್ದಾರೆ. ಹೀಗಾಗಿ, ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು. ಕ್ರೋಢೀಕೃತ ನಿಧಿಯನ್ನು ಉಚಿತ ಯೋಜನೆಗೆ ಬಳಸಲಾಗದು. ಅದಕ್ಕೆ ವಿಶೇಷ ಮಸೂದೆಯನ್ನು ಹಣಕಾಸು ಮಸೂದೆಯ ಪ್ರಕಾರ ಅಂಗೀಕರಿಸಬೇಕು. ಹಾಲಿ ಪ್ರಕರಣದಲ್ಲಿ ಯಾವುದೇ ಹಣಕಾಸು ಮಸೂದೆಯನ್ನು ಅಂಗೀಕರಿಸಿಲ್ಲ. ಇದು ತೆರಿಗೆದಾರರ ಹಣದ ದುರ್ಬಳಕೆ. ಪ್ರಕರಣದಲ್ಲಿ ಸಿದ್ದರಾಮಯ್ಯ ಅಪರಾಧಿಯಾಗಿದ್ದಾರೆ. ಹೀಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ವಾದ ಮಂಡಿಸಿದ್ದಾರೆ.
ನ್ಯಾಯಾಲಯವು ಉಚಿತ ಯೋಜನೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು. ಪ್ರಣಾಳಿಕೆ ಮತ್ತು ಅದರಲ್ಲಿನ ಅಂಶಗಳನ್ನು ಒಪ್ಪಿದರೆ ಅದನ್ನು ಕೆಪಿಸಿಸಿ ಮಾಡಬಹುದೇ? ಅದು ಭ್ರಷ್ಟಾಚಾರವಾಗುತ್ತದೆಯೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕು ಎಂದು ಕೋರಿದ್ದಾರೆ. ವಾದ ಆಲಿಸಿದ ಪೀಠ, ನ್ಯಾಯಾಲಯವು ಮುಕ್ತ ಮನಸ್ಸಿನಿಂದ ಎಲ್ಲಾ ವಿಚಾರಗಳನ್ನು ಪರಿಶೀಲಿಸಲಿದೆ. ದಸರಾ ರಜೆಯ ಬಳಿಕ ವಿಚಾರಣೆ ಮುಂದುವರೆಸಲಾವುದು ಎಂದು ತಿಳಿಸಿ ಪ್ರಕರಣ ಮುಂದೂಡಿದೆ.