ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ಪ್ರಕರಣವೊಂದರ ವಿಚಾರಣೆ ವೇಳೆ ವ್ಯಕ್ತಪಡಿಸಿದ ಹೇಳಿಕೆಯು ವಿವಾದಾತ್ಮಕ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಹೈಕೋರ್ಟ್ ನಿಂದ ವರದಿ ಕೇಳಿದೆ.
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ನ್ಯಾ.ಬಿ.ಆರ್. ಗವಾಯಿ, ನ್ಯಾ.ಸೂರ್ಯಕಾಂತ್ ಮತ್ತು ನ್ಯಾ.ಹೃಷಿಕೇಶ್‌ರಾಯ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಶುಕ್ರವಾರ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅವರು ನೀಡಿದ ಹೇಳಿಕೆ ಬಗ್ಗೆ ಗಮನ ಸೆಳೆಯಲಾಗಿದ್ದು, ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ನಾವು ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರನ್ನು ಕೇಳಿಕೊಳ್ಳುತ್ತಿದ್ದೇವೆ. ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಸೂಚಿಸುತ್ತಿದ್ದೇವೆ. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಂದ ಆಡಳಿತಾತ್ಮಕ ನಿರ್ದೇಶನ ಪಡೆದು 2 ವಾರಗಳಲ್ಲಿ ಈ ಪ್ರಕ್ರಿಯೆ ಕೈಗೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಅಲ್ಲದೆ, ಇಂತಹ ಘಟನೆಗಳು ಮರುಕಳಿಸದಿರುವ ನಿಟ್ಟಿನಲ್ಲಿ ಕೆಲ ಮಾರ್ಗಸೂಚಿಗಳನ್ನು ರೂಪಿಸಬೇಕಿದೆ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ವಿಚಾರಣೆಯನ್ನು ಸೆ.25ಕ್ಕೆ ಮುಂದೂಡಿದೆ.
ಹೈಕೋರ್ಟ್ ನ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಕೆಲ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಬಹುತೇಕ ವಿಡಿಯೋಗಳು ಅವರ ಪ್ರಬುದ್ಧತೆ, ವೈಚಾರಿಕತೆ ಮತ್ತು ನ್ಯಾಯದಾನ ಪ್ರಕ್ರಿಯೆ ಕುರಿತಂತೆ ಇದ್ದವು. ಇವುಗಳ ನಡುವೆ ಒಂದು ವಿಡಿಯೋದಲ್ಲಿ ಅವರು ಬೆಂಗಳೂರಿನ ಗೋರಿಪಾಳ್ಯ ಪ್ರದೇಶವನ್ನು ಪಾಕಿಸ್ತಾನ ಹೋಲಿಸಿ ಮಾತನಾಡಿದ್ದಕ್ಕೆ ಸಂಬಂಧಿಸಿತ್ತು. ವಿಡಿಯೋದಲ್ಲಿ, ಕೆ.ಆರ್ ಮಾರುಕಟ್ಟೆ-ಗೋರಿಪಾಳ್ಯ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಮತ್ತು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ವಿಫಲವಾಗಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ದರು. ಈ ಹೇಳಿಕೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಮತ್ತೊಂದು ವಿಡಿಯೋದಲ್ಲಿ ಮಹಿಳಾ ವಕೀಲೆಯೊಬ್ಬರಿಗೆ ಮುಜುಗರ ಉಂಟಾಗುವಂತೆ ಮಾತನಾಡಿದ್ದರು. ನ್ಯಾಯಮೂರ್ತಿ ಹೇಳಿಕೆಗಳು ವಿವಾದಕ್ಕೀಡಾದ ನಂತರ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದೆ.
ಲೈವ್ ಸ್ಟ್ರೀಮಿಂಗ್ ನಿಲ್ಲಿಸಲು ಎಎಬಿ ಮನವಿ: ಕೆಲ ದಿನಗಳ ಕಾಲ ನ್ಯಾಯಾಲಯದ ಕಲಾಪಗಳನ್ನು ನೇರಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರಿಗೆ ಬೆಂಗಳೂರಿನ ವಕೀಲರ ಸಂಘ ಶುಕ್ರವಾರ ಮನವಿ ಮಾಡಿದೆ. ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾ ರೆಡ್ಡಿ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಸಿಜೆ ಎನ್.ವಿ. ಅಂಜಾರಿಯಾ ಅವರಿಗೆ ಪತ್ರ ಬರೆದಿದ್ದಾರೆ.
ಹೈಕೋರ್ಟ್ ಕಲಾಪದ ವಿಡಿಯೋ ಬಳಕೆಗೆ ನಿರ್ಬಂಧ: ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಮುಡಾ ಕೇಸ್ ವಿಚಾರಣೆ ಆರಂಭವಾದ ನಂತರ ಯೂಟೂಬರ್ ಗಳು ಹೈಕೋರ್ಟ್ ನ ವಿಡಿಯೋಗಳನ್ನು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಬಳಕೆ ಮಾಡಲು ಆರಂಭಿಸಿದ್ದರು. ಕೆಲವರು ನೇರ ಪ್ರಸಾರಕ್ಕೆ ಇಳಿದರೆ ಹಲವರು ವಿಡಿಯೋಗಳನ್ನು ಎಡಿಟ್ ಮಾಡಿ ಬಳಸುತ್ತಿದ್ದರು. ಲೈವ್ ಸ್ಟ್ರೀಮಿಂಗ್ ನಿಯಮಗಳಿಗೆ ವಿರುದ್ಧವಾಗಿ ಹೈಕೋರ್ಟ್ ಕಲಾಪದ ವಿಡಿಯೋಗಳನ್ನು ಬಳಸುತ್ತಿದ್ದುದರಿಂದ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಕಲಾಪದ ಲೈವ್ ಸ್ಟ್ರೀಮಿಂಗ್ ಅನ್ನು ರೆಕಾರ್ಡಿಂಗ್ ಹಾಗೂ ಹಂಚಿಕೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲು ಮುಂದಾಗಿದೆ.
2022ರ ಜ.1ರಿಂದ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್‌ಸ್ಟ್ರೀಮ್) ನಿಯಮಗಳು ಜಾರಿಯಲ್ಲಿವೆ. ಆದರೆ ಅವುಗಳನ್ನು ಪರಿಗಣಿಸದೆ ಯೂಟೂಬರ್ ಗಳು ಪ್ರಸಾರ ಮಾಡಿದ್ದರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆದೇಶಿಸಲಾಗಿದೆ.