News

ವಕೀಲರ ಮೇಲೆ ಪೊಲೀಸರ ಹಲ್ಲೆ: ಸುಮೊಟೊ ಕೇಸ್ ದಾಖಲಿಸಿಕೊಂಡ ಹೈಕೋರ್ಟ್

Share It

ಕೇರಳ ರಾಜ್ಯದಲ್ಲಿ ಪೊಲೀಸರಿಂದ ವಕೀಲರ ಮೇಲೆ ಆಗಾಗ್ಗೆ ನಡೆಯುತ್ತಿರುವ ಹಿಂಸಾಚಾರ ಪ್ರಕರಣಗಳನ್ನು ತಡೆಗಟ್ಟಲು ಕೇರಳ ಹೈಕೋರ್ಟ್ ಇತ್ತೀಚೆಗೆ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದೆ.

ನ್ಯಾಯಾಲಯದ ಆವರಣದಲ್ಲೇ ವಕೀಲರೊಬ್ಬರ ಮೇಲೆ ಪೊಲೀಸ್ ಅಧಿಕಾರಿಗಳು ಹಲ್ಲೆ ನಡೆಸಿದ ನಂತರ ಹೈಕೋರ್ಟ್ ಈ ಮಹತ್ವದ ಕ್ರಮ ಕೈಗೊಂಡಿದೆ.

ಇದೇ ಸೆಪ್ಟೆಂಬರ್ 9 ರಂದು ಅಲಪ್ಪುಳದ ರಾಮಂಕರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆವರಣದಲ್ಲಿ ವಕೀಲರಾದ ಗೋಪಕುಮಾರ್ ಪಾಂಡವತ್ ಅವರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದರು. ಈ ಘಟನೆ ನಡೆದ ಮರು ದಿನ ಕೇರಳ ಹೈಕೋರ್ಟ್ ವಕೀಲರ ಸಂಘವು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್ ಅವರಿಗೆ ಪತ್ರ ಬರೆದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿತ್ತು.

ಇದೀಗ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಎ.ಕೆ ಜಯಶಂಕರನ್ ನಂಬಿಯಾರ್ ಹಾಗೂ ನ್ಯಾಯಮೂರ್ತಿ ಶ್ಯಾಮ್ ಕುಮಾರ್ ವಿ.ಎಂ ಅವರಿರುವ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದೆ.

ಅರ್ಜಿ ವಿಚಾರಣೆ ವೇಳೆ, ನ್ಯಾಯಾಲಯದ ಆವರಣದಲ್ಲಿ ವಕೀಲರ ಮೇಲೆ ಹಲ್ಲೆ ನಡೆದಿರುವುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಪೊಲೀಸರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ, ವಕೀಲರು, ನ್ಯಾಯಾಧೀಶರು ಮತ್ತು ನ್ಯಾಯಾಲಯಗಳ ಸಿಬ್ಬಂದಿಗಳ ಜತೆ ಸಂವಹನ ನಡೆಸುವಾಗ ಪೊಲೀಸ್ ಅಧಿಕಾರಿಗಳು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಜಾರಿ ಮಾಡುವುದಾಗಿ ಹೈಕೋರ್ಟ್ ತಿಳಿಸಿದೆ.

ಕೇರಳದಲ್ಲಿ ವಕೀಲರು ಮತ್ತು ಪೊಲೀಸರ ನಡುವಿನ ಘರ್ಷಣೆ ಆಗಾಗ್ಗೆ ನಡೆಯುತ್ತಿಲೇ ಇರುತ್ತವೆ. ಕಳೆದ ವಾರವಷ್ಟೇ, ವಕೀಲರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪೊಲೀಸ್ ಅಧಿಕಾರಿಗೆ ಕೇರಳ ಹೈಕೋರ್ಟ್ ಎರಡು ತಿಂಗಳ ಷರತ್ತುಬದ್ಧ ಜೈಲು ಶಿಕ್ಷೆ ವಿಧಿಸಿತ್ತು. ಈ ತೀರ್ಪಿನಲ್ಲಿ, ಕಾನೂನು ವೃತ್ತಿಪರರನ್ನು ಅಗೌರವದಿಂದ ನಡೆಸಿಕೊಂಡರೆ ಪರಿಣಾಮ ಏನಾಗುತ್ತದೆ ಎಂಬ ನಿಟ್ಟಿನಲ್ಲಿ ಈ ತೀರ್ಪು ಎಲ್ಲಾ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆಯಾಗಬೇಕು ಎಂದಿತ್ತು.


Share It

You cannot copy content of this page