ಬೆಂಗಳೂರು: 500 ರೂಪಾಯಿ ಮುಖಬೆಲೆಯ ಖೋಟಾನೋಟು (ಕಲರ್ ಜೆರಾಕ್ಸ್) ಹೊಂದಿದ್ದ ವ್ಯಕ್ತಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 5 ವರ್ಷ ಜೈಲು ಶಿಕ್ಷೆ ಹಾಗೂ 3000 ರೂಪಾಯಿ ದಂಡವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಮೈಸೂರಿನ ಟಿ.ಎನ್ ಕುಮಾರ್ ಎಂಬಾತ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಆರೋಪಿಯ ವಿರುದ್ಧ ಖೋಟಾನೋಟು ಹೊಂದಿದ್ದ ಮತ್ತು ಚಲಾವಣೆ ಮಾಡುತ್ತಿದ್ದ ಆರೋಪದಡಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 489ಬಿ, 489ಸಿ ಅಡಿ ಪೊಲೀಸರು ಎಫ್ಐಆರ್ ದಾಖಲಿಸಿ, ತನಿಖೆ ನಡೆಸಿ ದೋಷಾರೋಪಣೆ ಸಲ್ಲಿಸಿದ್ದಾರೆ. ಅದರಂತೆ ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ವಿಚಾರಣೆ ನಡೆಸಿ ಆರೋಪಿಗೆ ಶಿಕ್ಷೆ ವಿಧಿಸಿದೆ.
ಪ್ರಮುಖ ಸಾಕ್ಷಿಗಳಾಗಿ ಪೊಲೀಸರೇ ಇದ್ದಾರೆ, ಹೀಗಾಗಿ ಅವರ ಸಾಕ್ಷ್ಯವನ್ನು ಪರಿಗಣಿಸಬಾರದು ಎಂದು ಆರೋಪಿ ಕೋರಿದ್ದಾನೆ. ಆದರೆ, ಪೊಲೀಸ್ ಸಾಕ್ಷಿಗಳು ನಂಬಲರ್ಹ ಸಾಕ್ಷಿಗಳಲ್ಲ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಭಾರತೀಯ ಸಾಕ್ಷ್ಯ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ, ಪೊಲೀಸರ ಸಾಕ್ಷ್ಯವು ವಿಶ್ವಾಸಾರ್ಹವಾಗಿದ್ದರೆ, ಅಂತಹ ಸಾಕ್ಷ್ಯವನ್ನು ಒಪ್ಪಿಕೊಳ್ಳಬೇಕು ಎಂದು ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದೆ.
ಅಲ್ಲದೇ, ಆರೋಪಿ ತನಗೆ ಖೋಟಾ ನೋಟುಗಳು ಹೇಗೆ ಬಂದವು ಅವುಗಳ ಮೂಲ ಎಲ್ಲಿಯದ್ದು ಎಂಬುದನ್ನು ವಿವರಿಸಿಲ್ಲ. ಸಿಕ್ಕಿರುವ ಖೋಟಾನೋಟುಗಳೆಲ್ಲವೂ ಒಂದೇ ನಂಬರ್ ಅನ್ನು ಹೊಂದಿದ್ದು, ಅವುಗಳು ನಕಲಿ ಎಂದು ಆರ್.ಬಿ.ಐ ಸ್ಪಷ್ಟಪಡಿಸಿದೆ. ಇನ್ನು ಆರೋಪಿಯನ್ನು ಪೊಲೀಸರು ಕಂಡಾಗ ಆತ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದಾನೆ.
ಸರ್ಕಾರದ ಪರ ವಕೀಲರು ವಾದ ಮಂಡಿಸುವ ವೇಳೆ, ಆರೋಪಿ ಕಲರ್ ಜೆರಾಕ್ಸ್ ನೋಟುಗಳನ್ನು ಹೊಂದಿದ್ದು, ಅವುಗಳನ್ನು ಅಸಲಿ ಎಂದು ಬಿಂಬಿಸಿ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಎಂಬುದನ್ನು ತಿಳಿಸಿದ್ದಾರೆ. ಇವೆಲ್ಲವನ್ನೂ ಗಮನಿಸಿದಾಗ ಆರೋಪಿಯು ಖೋಟಾನೋಟು ಚಲಾವಣೆ ಅಪರಾಧದಲ್ಲಿ ಭಾಗಿಯಾಗಿರುವುದನ್ನು ಸ್ಪಷ್ಟಪಡಿಸುತ್ತದೆ. ಅದರಂತೆ ವಿಚಾರಣಾ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ವಿವರಿಸಿದೆ.
ಅಲ್ಲದೇ, ಆರೋಪಿಗೆ ವಿಧಿಸಿರುವ ಶಿಕ್ಷೆಯನ್ನು ಎತ್ತಿಹಿಡಿರುವ ಹೈಕೋರ್ಟ್ ಶಿಕ್ಷೆ ಪೂರ್ಣಗೊಳಿಸಲು ಆರೋಪಿಯು ಶರಣಾಗಬೇಕು ಎಂದು ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ ಕಟ್ಟಡದ ಬಳ ಖೋಟಾನೋಟು ಚಲಾವಣೆ ಮಾಡುವ ಪ್ರಯತ್ನದಲ್ಲಿದ್ದಾಗ ಪೊಲೀಸರು ಆರೋಪಿ ಟಿ.ಎನ್ ಕುಮಾರ್ ನನ್ನು ಬಂಧಿಸಿದ್ದರು. 2013ರ ಜನವರಿ 3ರಂದು ವಿಚಾರಣಾ ನ್ಯಾಯಾಲಯ ಆರೋಪಿಯ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ 5 ವರ್ಷ ಜೈಲು ಶಿಕ್ಷೆ ಮತ್ತು 3 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿ ಕುಮಾರ್ ತನ್ನ ವಿರುದ್ಧ ಪೊಲೀಸರು ಇಲ್ಲದ ಆರೋಪ ಸೃಷ್ಟಿಸಿ ಕೇಸು ದಾಖಲಿಸಿದ್ದಾರೆ. ಪೊಲೀಸರ ಆರೋಪಗಳಿಗೆ ಸೂಕ್ತ ಸಾಕ್ಷ್ಯಗಳಿಲ್ಲ. ಹೀಗಾಗಿ ತನಗೆ ವಿಧಿಸಿರುವ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ.
(CRIMINAL APPEAL NO. 55 OF 2013 (C)