ಬೆಂಗಳೂರು: ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಸಂಬಂಧ ಸಾಕ್ಷ್ಯಾಧಾರಗಳಿದ್ದಲ್ಲಿ ನ್ಯಾಯಾಲಯ ಸಂಪೂರ್ಣ ವಿಚಾರಣೆ ನಡೆಸಿದ ಬಳಿಕವಷ್ಟೇ ಅದರ ಸಾರಾಂಶ ಅರ್ಥೈಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪತ್ನಿ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪ ಎದುರಿಸುತ್ತಿರುವ ಪತಿಯ ವಿರುದ್ಧದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಲು ನಿರಾಕರಿಸಿದೆ.
ಪತ್ನಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ವಿಚಾರಣಾ ನ್ಯಾಯಾಲಯ ಕೈಗೊಂಡಿರುವ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕೋರಿ ಮಯೂಕ್ ಮುಖರ್ಜಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ತನಿಖಾಧಿಕಾರಿಗಳು ಸಲ್ಲಿಸಿರುವ ದಾಖಲೆಗಳು ಮತ್ತು ಸಂತ್ರಸ್ತೆ ಆತ್ಮಹತ್ಯೆಯ ವಿಡಿಯೋ, ದೂರು ಹಾಗೂ ದೋಷರೋಪಣಾ ಪಟ್ಟಿ ಪರಿಶೀಲಿಸಿದರೆ, ಆರೋಪಿಯು ಪತ್ನಿಯ ಆತ್ಮಹತ್ಯೆಗೆ ಪ್ರಚೋದಿಸಿರುವ ಅಂಶಗಳು ಮೇಲ್ನೋಟಕ್ಕೆ ಕಾಣುತ್ತವೆ. ಮೃತ ಪತ್ನಿ ತನ್ನ ಡೈರಿಯ ಹಲವೆಡೆ ಪತಿಗೆ ವಿವಾಹೇತರ ಸಂಬಂಧವಿರುವ ಬಗ್ಗೆ ಬರೆದುಕೊಂಡು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಇದು ಕೇವಲ ಕಲ್ಪನೆಯಾಗಿದ್ದರೆ, ಸನ್ನಿವೇಶವೂ ಸಂಪೂರ್ಣ ಭಿನ್ನವಾಗಿರುತ್ತಿತ್ತು ಎಂದು ಆದೇಶದಲ್ಲಿ ತಿಳಿಸಿದೆ.
ಅಲ್ಲದೇ, ದಂಪತಿಯು 10 ವರ್ಷಗಳ ಹಿಂದೆ ಮದುವೆ ಆಗಿದ್ದಲ್ಲ. ಸಂತ್ರಸ್ತೆಯ ಸಾವಿನ ವೇಳೆ ಆಕೆ ಮದುವೆಯಾಗಿ ಕೇವಲ 24 ತಿಂಗಳು ಕಳೆದಿತ್ತು. ಗಂಡನ ಕಡೆಯಿಂದ ಪ್ರಾಥಮಿಕವಾಗಿ ಹೆಂಡತಿಯ ಆತ್ಮಹತ್ಯೆಗೆ ಪ್ರಚೋದನೆ ಇತ್ತು ಎಂಬುದನ್ನು ವಿಡಿಯೋ ಮತ್ತು ಬರಹಗಳು ಮೇಲ್ನೋಟಕ್ಕೆ ಸ್ಪಷ್ಟಪಡಿಸುತ್ತವೆ. ಈ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ವಿಚಾರಣೆಯ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು, ಅರ್ಜಿದಾರ ಪತಿಯ ಮನವಿಯನ್ನು ವಜಾಗೊಳಿಸಿದೆ.
ಅರ್ಜಿದಾರರ ಪರ ವಕೀಲರ ವಾದವೇನು?: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಂತ್ರಸ್ತೆ ಖಿನ್ನತೆಯಿಂದ ಬಳಲುತ್ತಿದ್ದರು. ಆಕೆ ಆತ್ಮಹತ್ಯೆಯ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ಕುಂಟುಂಬದ ಯಾವೊಬ್ಬ ಸದಸ್ಯನ ಮೇಲೆಯೂ ಆರೋಪ ಹೊರಿಸಿಲ್ಲ. ಅಲ್ಲದೇ, ದೂರಿನಲ್ಲಿ ಹೇಳಿರುವ ಹಾಗೆ ಅರ್ಜಿದಾರರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಸಾಬೀತುಪಡಿಸುವಲ್ಲಿ ಯಾವುದೇ ಸಾಕ್ಷಾಧಾರಗಳು ಲಭ್ಯವಾಗಿಲ್ಲ. ಇದೆಲ್ಲವೂ ಸತ್ಯಕ್ಕೆ ದೂರವಾದ ಸಂಗತಿ. ಸಂತ್ರಸ್ತೆ ಡೈರಿಯಲ್ಲಿ ಆಗೊಮ್ಮೆ, ಈಗೊಮ್ಮೆ ಪತಿಯಿಂದ ಕಿರುಕುಳ ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಹೊರತಾಗಿ, ಬೇರೆನೂ ಇಲ್ಲ. ಆತ್ಮಹತ್ಯೆಗೆ ಒಳಗಾಗುವಂತೆ ಯಾವುದೇ ರೀತಿಯಲ್ಲಿ ಪತಿಯೂ ಪ್ರಚೋದನೆ ನೀಡಿಲ್ಲ. ಹಾಗಾಗಿ, ಅರ್ಜಿದಾರರ ವಿರುದ್ಧದ ವಿಚಾರಣೆ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.
ಮೃತರ ಪೋಷಕರ ವಾದವೇನು?: ದೂರುದಾರರ (ಮೃತರ ಪೋಷಕರ) ಪರ ವಕೀಲರು ವಾದ ಮಂಡಿಸಿ, ”ದೋಷರೋಪಣಾ ಪಟ್ಟಿಯಲ್ಲಿ ಲಭ್ಯವಾದ ಅನೇಕ ಅಂಶಗಳು ಅರ್ಜಿದಾರರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎನ್ನುವ ಸಂಗತಿಯನ್ನು ಬಹಿರಂಗಪಡಿಸುತ್ತವೆ. ಪತಿಯಿಂದ ಅನುಭವಿಸುತ್ತಿರುವ ಕಿರುಕುಳದ ಬಗ್ಗೆ ಸಂತ್ರಸ್ತೆಯೂ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದಾಳೆ. ಪತಿಗೆ ವಿವಾಹೇತರ ಸಂಬಂಧವಿದೆ. ಈ ನಿಟ್ಟಿನಲ್ಲಿ ಆತ ತನಗೆ ವಿವಿಧ ರೀತಿಯಲ್ಲಿ ಹಿಂಸೆ ನೀಡುತ್ತಿರುವ ಬಗ್ಗೆ ಆಕೆ ಹೇಳಿಕೊಂಡಿದ್ದಾಳೆ ಎಂಬುದನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು.
ಪ್ರಕರಣದ ಹಿನ್ನೆಲೆ: ಮಯೂಕ್ ಮುಖರ್ಜಿ 2021ರಲ್ಲಿ ಮಹಿಳೆಯನ್ನು ವಿವಾಹವಾಗಿದ್ದರು. ಬಳಿಕ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ದಿನ ಕಳೆದಂತೆ ದಂಪತಿಯ ನಡುವೆ ವೈವಾಹಿಕ ಜೀವನ ಹದಗೆಟ್ಟಿತ್ತು. 2023ರ ಫೆಬ್ರವರಿ 24ರಂದು ಪತ್ನಿ ಬೆಂಗಳೂರಿನ ನಿವಾಸದಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದರು. ಮಗಳು ಸಂದೇಶ ಹಾಗೂ ಕರೆಗಳಿಗೆ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಪೋಷಕರು ಆಕೆಯ ಮನೆಗೆ ಭೇಟಿ ನೀಡಿದಾಗ, ಅವಳು ಸಾವನ್ನಪ್ಪಿರುವ ಅಂಶ ಬೆಳಕಿಗೆ ಬಂದಿತ್ತು.
ಈ ಕುರಿತಂತೆ ಮೃತಳ ತಂದೆ, ಅರ್ಜಿದಾರ ಹಾಗೂ ಆತನ ತಂದೆ-ತಾಯಿಯ ವಿರುದ್ಧ ನಗರದ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
(CRIMINAL PETITION No.9707 OF 2023)