ⓇJudgements

ಕೋರಿಕೆ ಮೇರೆಗೆ ಒಂದೇ ಗ್ರಾಮದಲ್ಲಿ ಎರಡು ನ್ಯಾಯಬೆಲೆ ಅಂಗಡಿ ಸ್ಥಾಪಿಸಬಹುದು: ಹೈಕೋರ್ಟ್ ಮಹತ್ವದ ತೀರ್ಪು

Share It

ಬೆಂಗಳೂರು: ಒಂದೇ ಗ್ರಾಮದಲ್ಲಿ ಎರಡು ನ್ಯಾಯಬೆಲೆ ಅಂಗಡಿ ಸ್ಥಾಪಿಸಲು ಕಾನೂನಿನಲ್ಲಿ ಅಡ್ಡಿಯಿಲ್ಲ ಮತ್ತು ಅದನ್ನು ಮತ್ತೊಂದು ನ್ಯಾಯಬೆಲೆ ಅಂಗಡಿ ಹೊಂದಿರುವ ವ್ಯಕ್ತಿ ಪ್ರಶ್ನಿಸಲಾಗದು ಎಂದು ಹೈಕೋರ್ಟ್ ನ ಕಲಬುರಗಿ ಪೀಠ ಮಹತ್ವದ ತೀರ್ಪು ನೀಡಿದೆ.

ದೇಶದಲ್ಲಿ ಅತಿ ಹೆಚ್ಚು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಅವರಿಗೆ ನ್ಯಾಯಯುತವಾಗಿ ಅಗತ್ಯ ಸಾಮಗ್ರಿಗಳನ್ನು ವಿತರಿಸಲು ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಬೆಲೆ ಅಂಗಡಿಗಳನ್ನು ಪ್ರಾರಂಭಿಸಲಾಗಿದೆ. ಕನಿಷ್ಟ 500 ಜನರಿಗೆ ಒಂದು ನ್ಯಾಯಬೆಲೆ ಅಂಗಡಿ ಸ್ಥಾಪಿಸಬಹುದಾಗಿದೆ. ಜನರಿಗೆ ಕಡಿಮೆ ಬೆಲೆಯಲ್ಲಿ ಪಡಿತರಗಳನ್ನು ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಸ್ಥಾಪಿಸುವುದು ನ್ಯಾಯಸಮ್ಮತ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಒಂದೇ ಗ್ರಾಮದಲ್ಲಿ ಎರಡು ನ್ಯಾಯಬೆಲೆ ಅಂಗಡಿ ಪ್ರಾರಂಭಿಸಿರುವ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದಿದೆ.

ಈಗಾಗಲೇ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯಿದ್ದು ಅವರಿಗೆ ಯಾವುದೇ ನೋಟಿಸ್ ನೀಡದೇ ಮತ್ತೊಂದು ನ್ಯಾಯಬೆಲೆ ಅಂಗಡಿ ಸ್ಥಾಪಿಸಿರುವ ಸರ್ಕಾರ ಕ್ರಮ ಸರಿಯಲ್ಲ ಎಂದು ಆಕ್ಷೇಪಿಸಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಹಳ್ಳಿಯ ಮಹಾತ್ಮ ಗಾಂಧೀಜಿ ಗ್ರಾಮ ಹಿತ ಮಂಡಳಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಎರಡು ನ್ಯಾಯಬೆಲೆ ಅಂಗಡಿ ಸ್ಥಾಪನೆ ನ್ಯಾಯಸಮ್ಮತವಾಗಿದೆ ಎಂದು ಆದೇಶ ನೀಡಿ, ಅರ್ಜಿದಾರರ ಮನವಿಯನ್ನು ವಜಾಗೊಳಿಸಿದೆ.

ಅಲ್ಲದೇ, ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ಅವರ ನ್ಯಾಯಬೆಲೆ ಅಂಗಡಿಯಲ್ಲಿ 1200 ಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿದ್ದಾರೆ. 2016ರ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ವ್ಯವಸ್ಥೆ (ನಿಯಂತ್ರಣ) ಆದೇಶ ನಿಯಮ 11 ಉಪನಿಯಮ 2 ರ ಅನುಸಾರ ಒಂದು ನ್ಯಾಯಬೆಲೆ ಅಂಗಡಿಯಲ್ಲಿ ಕನಿಷ್ಟ 500 ಪಡಿತರ ಚೀಟಿ ಹೊಂದಿರುವವರು ಇರಬೇಕು. ಪಡಿತರದಾರರು ಇದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿದ್ದಾಗ ಮತ್ತೊಂದು ನ್ಯಾಯಬೆಲೆ ಅಂಗಡಿಯನ್ನು ಸಾರ್ವಜನಿಕರ ಕೋರಿಕೆ ಮೇರೆಗೆ ನೀಡಬಹುದು. ಸರ್ಕಾರ ಸಾರ್ವಜನಿಕರ ಕೋರಿಕೆ ಮೇರೆಗೆ ಮತ್ತೊಂದು ನ್ಯಾಯಬೆಲೆ ಅಂಗಡಿಗೆ ಅನುಮತಿ ನೀಡಿರುವುದರಿಂದ ಅರ್ಜಿದಾರರಿಗೆ ಯಾವುದೇ ತೊಂದರೆಯಾಗದು. ಇಂತಹ ವಿಚಾರಗಳಲ್ಲಿ ಏಕಸ್ವಾಮ್ಯಕ್ಕೆ ಅವಕಾಶ ನೀಡಲಾಗದು. ಜನರಿಗೆ ತ್ವರಿತವಾಗಿ ಮತ್ತು ಕನಿಷ್ಟ ಬೆಲೆಯಲ್ಲಿ ವಸ್ತುಗಳು ಲಭ್ಯವಾಗುವುದಷ್ಚೇ ಮುಖ್ಯ ಎಂದು ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದೆ.

ಹಾಗೆಯೇ, ನ್ಯಾಯಬೆಲೆ ಅಂಗಡಿಗಳಿಗೆ ಲೈಸೆನ್ಸ್ ಅವಧಿ ನಿಗದಿಪಡಿಸಲಾಗಿದೆ. ಈ ಅವಧಿ ಮುಗಿದ ನಂತರ ಅದನ್ನು ಅಧಿಕಾರಿಗಳು ಹೊಸದಾಗಿ ಲೈಸೆನ್ಸ್ ನೀಡಲು ನೋಟಿಫಿಕೇಷನ್ ಹೊರಡಿಸಲು ನಿಯಮಗಳಲ್ಲಿ ಅವಕಾಶವಿದೆ. ಹೀಗಾಗಿ ನ್ಯಾಯಬೆಲೆ ಅಂಗಡಿ ನಡೆಸಲು ತಮಗಷ್ಟೇ ಸ್ಥಾಪಿತ ಹಕ್ಕು ಇದೆ ಎಂಬಂತೆ ಮತ್ತೊಂದು ನ್ಯಾಯಬೆಲೆ ಅಂಗಡಿ ಸ್ಥಾಪನೆಯನ್ನು ಪ್ರಶ್ನಿಸಲಾಗದು ಎಂದು ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ”ಸರ್ಕಾರದಿಂದ 1998ರಲ್ಲಿ ಅರ್ಜಿದಾರರಿಗೆ ನ್ಯಾಯಬೆಲೆ ಅಂಗಡಿ ನಡೆಸಲು ಪರವಾನಗಿ ನೀಡಲಾಗಿದೆ. ಆದರೆ, ಇದೀಗ ಅರ್ಜಿದಾರರ ಗಮನಕ್ಕೆ ತಾರದೆ ಅದೇ ಗ್ರಾಮದಲ್ಲಿ ನೂತನವಾಗಿ ಮತ್ತೊಂದು ನ್ಯಾಯಬೆಲೆ ಅಂಗಡಿಗೆ ಅವಕಾಶ ಮಾಡಿಕೊಡಲಾಗಿದೆ. ಒಂದು ಗ್ರಾಮದಲ್ಲಿ ಈ ರೀತಿ ಮತ್ತೊಂದು ನ್ಯಾಯಬೆಲೆ ಅಂಗಡಿ ಪ್ರಾರಂಭಿಸುವುದು ಅರ್ಜಿದಾರರ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಸರ್ಕಾರ ಈ ಕುರಿತಂತೆ ಹೊರಡಿಸಿರುವ ಅಧಿಸೂಚನೆ ರದ್ದುಗೊಳಿಸಬೇಕು” ಎಂದು ಮನವಿ ಮಾಡಿದ್ದರು. ಅಲ್ಲದೆ, 2016ರ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ವ್ಯವಸ್ಥೆ (ನಿಯಂತ್ರಣ) ಆದೇಶ ನಿಯಮ 11ರ ಅನುಸಾರ ಗ್ರಾಮಸ್ಥರು ಇನ್ನೊಂದು ನ್ಯಾಯಬೆಲೆ ಅಂಗಡಿ ತೆರೆಯುವಂತೆ ವಿನಂತಿ ಮಾಡದ ಹೊರತು, ಅಸ್ತಿತ್ವದಲ್ಲಿರುವ ಅಧಿಕೃತ ನ್ಯಾಯಬೆಲೆ ಅಂಗಡಿಯಲ್ಲಿ ನೋಂದಾಯಿಸಿರುವ ಪಡಿತರ ಚೀಟಿದಾರರನ್ನು ಬೇರೊಂದು ನ್ಯಾಯಬೆಲೆ ಅಂಗಡಿಗೆ ವರ್ಗಾವಣೆ ಮಾಡುವಂತಿಲ್ಲ ಎಂದು ವಾದಿಸಿದ್ದರು.

(WRIT PETITION NO.202758 OF 2022)


Share It

You cannot copy content of this page