ⓇJudgements

“ಸೆಟಲ್‌ಮೆಂಟ್” ಆಧಾರದ ಮೇರೆಗೆ ಪೋಕ್ಸೊ ಪ್ರಕರಣ ರದ್ದುಗೊಳಿಸಲಾಗದು: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Share It

ದೆಹಲಿ: ಆರೋಪಿ ಮತ್ತು ಸಂತ್ರಸ್ತರ ನಡುವಿನ “ಸೆಟಲ್‌ಮೆಂಟ್” ಆಧಾರದ ಮೇರೆಗೆ ಅಥವಾ ಅವರ ನಡುವೆ ಇತ್ಯರ್ಥ ಮಾಡಿಕೊಳ್ಳಲಾಗಿದೆ ಎಂಬ ಆಧಾರದ ಮೇಲೆ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿ ದಾಖಲಿಸಿದ ಪ್ರಕರಣಗಳನ್ನು ರದ್ದುಗೊಳಿಸಲಾಗದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

14 ವರ್ಷದ ಸಂತ್ರಸ್ತ ಬಾಲಕಿಯ ಮೇಲೆ 25 ವರ್ಷದ ವ್ಯಕ್ತಿ ಅತ್ಯಾಚಾರ ಎಸಗಿದ ಆರೋಪದಡಿ ವಿಚಾರಣಾ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಕಲ್ಕತ್ತಾ ಹೈಕೋರ್ಟ್ ರದ್ದುಪಡಿಸಿತ್ತು.

ಈ ಕುರಿತಂತೆ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದೆ. ನ್ಯಾ.ಅಭಯ್ ಶ್ರೀನಿವಾಸ್ ಓಕ ಹಾಗೂ ನ್ಯಾ. ಉಜ್ಜಲ್ ಭುಯಾನ್ ಅವರಿದ್ದ ಪೀಠ, ಆರೋಪಿ ಹಾಗೂ ಸಂತ್ರಸ್ತೆ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ ಎಂಬ ಆಧಾರದ ಮೇಲೆ ಪೋಕ್ಸೊ ಪ್ರಕರಣವನ್ನು ರದ್ದುಪಡಿಸಲಾಗದು ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ ನ್ಯಾಯಾಲಯಗಳು ಕಾನೂನು ರೀತಿಯಲ್ಲಿ ನ್ಯಾಯದಾನ ಮಾಡಬೇಕೇ ವಿನಃ ಕಾನೂನಿಗೆ ವಿರುದ್ಧವಾಗಿ ವರ್ತಿಸಬಾರದು. ಪ್ರಸ್ತುತ ಪ್ರಕರಣದಲ್ಲಿ ಆರೋಪಿ 25 ವರ್ಷದ ವ್ಯಕ್ತಿಯಾಗಿದ್ದರೆ ಸಂತ್ರಸ್ತೆ 14 ವರ್ಷದ ಬಾಲಕಿ. ಈ ವಿಚಾರವನ್ನು ಹೈಕೋರ್ಟ್ ಗಣನೆಗೆ ತೆಗೆದುಕೊಂಡಿಲ್ಲ. ಆರೋಪಿ ಮತ್ತು ಸಂತ್ರಸ್ತೆಗೆ ಮಗು ಜನಿಸಿದೆ ಮತ್ತು ಆಕೆಯು ಆತನೊಟ್ಟಿಗೆ ಇದ್ದಾಳೆ ಎಂಬ ಕಾರಣಕ್ಕೆ ಹೈಕೋರ್ಟ್ ಪ್ರಕರಣ ರದ್ದುಪಡಿಸಿರುವ ಕ್ರಮ ಕಾನೂನುಬದ್ಧವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಅಲ್ಲದೇ, 16 ವರ್ಷ ಮೇಲ್ಪಟ್ಟವರ ನಡುವಿನ ಶೋಷಣೆಯಲ್ಲದ ಮತ್ತು ಸಮ್ಮತಿಯ ಲೈಂಗಿಕತೆಯನ್ನು ಅಪರಾಧ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬುದು ಇತರೆ ವೇದಿಕೆಗಳಲ್ಲಿ ಚರ್ಚಿಸಬಹುದಾದ ವಿಚಾರ. ಈ ವಿಚಾರಗಳನ್ನು ಪರಾಮರ್ಶಿಸುವುದು ನ್ಯಾಯಾಲಯದ ಕೆಲಸವಲ್ಲ. ಕಾನೂನಿನಲ್ಲಿ ಹೇಳಿರುವುದನ್ನು ನ್ಯಾಯಾಲಯಗಳು ಜಾರಿಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್ ಆರೋಪಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಖಾಯಂಗೊಳಿಸಿ ತೀರ್ಪು ನೀಡಿದೆ.

ಅಂತರ್ರಾಷ್ಟ್ರೀಯ ಒಪ್ಪಂದಗಳಿಗೆ ಅನುಗುಣವಾಗಿ ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಪೋಕ್ಸೊ ಕಾಯ್ದೆ ಜಾರಿ ಮಾಡಲಾಗಿದೆ. 14 ವರ್ಷದ ಬಾಲಕಿಯ ಮೇಲೆ 25 ವರ್ಷದ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಿದಾಗ ಅದು ಶೋಷಣೆಯಲ್ಲದ ಲೈಂಗಿಕತೆ ಎಂದು ಹೇಗೆ ಪರಿಗಣಿಸಲು ಸಾಧ್ಯ. 18ಕ್ಕಿಂತ ಕಡಿಮೆ ವಯಸ್ಸಿನ ಬಾಲಕಿ ಒಪ್ಪಿಗೆ ನೀಡಿದ್ದರೂ ಅದು ಪರಿಗಣನಾರ್ಹವಲ್ಲ ಎಂದು ಕಾನೂನು ಸ್ಪಷ್ಟಪಡಿಸಿದೆ. ಹಾಗಿದ್ದೂ, ಅಂತಹ ಕೃತ್ಯವನ್ನು ಶೋಷಣೆಯಲ್ಲದ ಪ್ರಣಯ ಸಂಬಂಧ ಎಂದು ಪರಿಗಣಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದೆ. ಇದೇ ವೇಳೆ ಹದಿಹರೆಯದ ಯುವತಿಯರು ತಮ್ಮ ಲೈಂಗಿಕ ಆಸೆಗಳನ್ನು ಹತ್ತಿಕ್ಕಬೇಕು ಎಂಬ ಹೈಕೋರ್ಟ್ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ಬದಿಗೆ ಸರಿಸಿದೆ.

ಅಲ್ಲದೇ, ಸಂತ್ರಸ್ತೆಯ ಜವಾಬ್ದಾರಿ ಸರ್ಕಾರಕ್ಕೆ ಸೇರಿದ್ದು, ಆಕೆಯು ತನ್ನ ಮುಂದಿನ ಭವಿಷ್ಯದ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲು ಸಹಾಯ ಮಾಡಲು ಕ್ಲಿನಿಕಲ್ ಸೈಕಾಲಜಿಸ್ಟ್ ಸೇರಿದಂತೆ ಮೂವರು ತಜ್ಞರ ಸಮಿತಿ ರಚಿಸಬೇಕು. ಸಂತ್ರಸ್ತೆ ಹಾಗೂ ಮಗುವಿನ ಭವಿಷ್ಯಕ್ಕೆ ಸಂಬಂಧಿಸಿದಂತೆ ಸರ್ಕಾರ ನೀಡುವ ನೆರವನ್ನು ಈ ಸಮಿತಿಯು ಪರಿಶೀಲಿಸಬೇಕು ಮತ್ತು ಈ ಕುರಿತಂತೆ ಕೈಗೊಂಡ ಕ್ರಮಗಳ ವರದಿಯನ್ನು 2024ರ ಅಕ್ಟೋಬರ್ 18ರೊಳಗೆ ಸಲ್ಲಿಸಬೇಕು ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

(CRIMINAL APPEAL NO.1451 OF 2024) SUO MOTU WRIT PETITION (C) NO. 3 OF 2023


Share It

You cannot copy content of this page