News

₹50 ಲಂಚ ಸ್ವೀಕರಿಸಿದ್ದಕ್ಕೆ ಕಡ್ಡಾಯ ನಿವೃತ್ತಿ ಶಿಕ್ಷೆ: ಪರಿಶೀಲಿಸಲು ಹೈಕೋರ್ಟ್ ಆದೇಶ

Share It

ಸುಮಾರು 18 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸರ್ಕಾರಿ ಉದ್ಯೋಗಿಯನ್ನು 50 ರೂಪಾಯಿ ಲಂಚ ಸ್ವೀಕರಿಸಿ ಕಾರಣಕ್ಕೆ ಕಡ್ಡಾಯ ನಿವೃತ್ತಿ ಶಿಕ್ಷೆ ನೀಡಿರುವುದು ಸಮಂಜಸವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಕುರಿತಂತೆ ಎಂ.ಎಸ್ ಕಡ್ಕೋಳ್ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಜಿ ಪಂಡಿತ್ ಹಾಗೂ ನ್ಯಾ. ಅನಂತ್ ರಾಮನಾಥ್ ಹೆಗ್ಡೆ ಅವರಿದ್ದ ವಿಭಾಗೀಯ ಪೀಠ ಶಿಕ್ಷೆಯನ್ನು ರದ್ದುಪಡಿಸಿದೆ. ಅಲ್ಲದೇ, ಪ್ರಕರಣವನ್ನು ಮತ್ತೆ ಹೊಸದಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಶಿಸ್ತುಪ್ರಾಧಿಕಾರಕ್ಕೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಚಂದ್ರಾಚಾರಿ ಎಂಬುವರನ್ನು 1998ರಲ್ಲಿ ಬ್ಯಾಡಗಿಯಿಂದ ಧಾರವಾಡಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆ ಕಡತವನ್ನು ವಿಲೇವಾರಿ ಮಾಡಲು 150 ರೂಪಾಯಿ ಲಂಚ ಕೇಳಿದ್ದರೆಂದು ದೂರು ನೀಡಲಾಗಿತ್ತು. ಅದರಂತೆ 50 ರೂಪಾಯಿ ಲಂಚ ಪಡೆಯುವ ವೇಳೆ ಕಡ್ಕೋಳ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 7, 13(1) ಹಾಗೂ 13(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆ ಬಳಿಕ ಇಲಾಖಾ ತನಿಖೆ ಕೂಡ ನಡೆಸಲಾಗಿತ್ತು. ತನಿಖಾಧಿಕಾರಿ ದೋಷಾರೋಪಣೆ ಸಲ್ಲಿಸಿದ ಬಳಿಕ ಶಿಸ್ತುಪ್ರಾಧಿಕಾರ 2004ರ ಸೆಪ್ಟೆಂಬರ್ 7ರಂದು ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಿತ್ತು.

ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು 2016ರ ಜೂನ್ 1ರಂದು ಕರ್ನಾಟಕ ಆಡಳಿತ ನ್ಯಾಯಮಂಡಳಿ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಕಡ್ಕೋಳ್ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, 50 ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ಸೇವೆಯಿಂದ ಕಡ್ಡಾಯ ನಿವೃತ್ತಿ ನೀಡಿರುವ ಕ್ರಮ ಸೂಕ್ತವಲ್ಲ.

ದೂರುದಾರರ ಯಾವುದೇ ಕೆಲಸ ಅರ್ಜಿದಾರರ ಮುಂದೆ ಇರಲಿಲ್ಲ. ಅರ್ಜಿದಾರರ ವಿರುದ್ಧ ಲಂಚ ಕೇಳಿದ್ದಾರೆ ಎಂಬ ಯಾವುದೇ ದೂರು ಇರಲಿಲ್ಲ. ಹಾಗಿದ್ದೂ ಅವರ ಬಳಿ ಲಂಚ ನೀಡಿದ್ದಾರೆ ಎನ್ನಲಾದ 50 ರೂ ಸಿಕ್ಕಿತ್ತು ಎಂಬ ಕಾರಣಕ್ಕೆ ಕಡ್ಡಾಯ ನಿವೃತ್ತಿ ಸರಿಯಲ್ಲ ಎಂದು ವಾದಿಸಿದ್ದರು. ವಾದ ಪರಿಗಣಿಸಿದ ಹೈಕೋರ್ಟ್ ಪ್ರಕರಣವನ್ನು ಹೊಸದಾಗಿ ಪರಿಗಣಿಸಿ ಇತ್ಯರ್ಥಪಡಿಸಲು ಆದೇಶಿಸಿದೆ.

(WP 110912/2017)


Share It

You cannot copy content of this page