ಸರ್ಕಾರಿ ಕಚೇರಿಗಳಲ್ಲಿ ಲಂಚಾವತರಾ ಮಿತಿ ಮೀರಿದೆ. ಲಂಚ ಇಲ್ಲದೇ ಯಾವುದೇ ಫೈಲ್ ಕೂಡ ಮುಂದಕ್ಕೆ ಹೋಗುವುದಿಲ್ಲ ಎಂದು ಹೈಕೋರ್ಟ್ ಲಂಚ ಪ್ರಕರಣದಲ್ಲಿ ಆರೋಪಿಯೊಬ್ಬರ ಜಾಮೀನು ಅರ್ಜಿ ತಿರಸ್ಕರಿಸುವ ವೇಳೆ ಅಭಿಪ್ರಾಯಪಟ್ಟಿದೆ.
ಲಂಚ ಪ್ರಕರಣದಲ್ಲಿ ಜೈಲು ಸೇರಿರುವ ಬಿಡಿಎ ಎಂಜನಿಯರ್ ಬಿ.ಟಿ ರಾಜು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ ತೀರ್ಪಿನಲ್ಲಿಯೇ ಈ ಅಂಶ ಉಲ್ಲೇಖಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಬಿಡಿಎ ಅಧಿಕಾರಿಗಳು ಅನುಕೂಲಕರ ಆದೇಶ ಮಾಡಿಕೊಡಲು ದೂರುದಾರರಿಂದ 1 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು ಚೌಕಾಸಿ ಮಾಡಿದ ನಂತರ 60 ಲಕ್ಷಕ್ಕೆ ಒಪ್ಪಿದ್ದಾರೆಂದು ಆರೋಪಿಸಲಾಗಿದೆ. ಆರೋಪಿತ ಬಿಡಿಎ ಎಂಜನಿಯರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮುಂಗಡವಾಗಿ 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಬಂಧಿಸಿದ್ದಾರೆ. ಹಣವನ್ನೂ ಜಪ್ತಿ ಮಾಡಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಲಂಚವಿಲ್ಲದೇ ಯಾವ ಫೈಲ್ ಕೂಡ ಮುಂದೆ ಹೋಗುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟು, ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ಪರ್ಯಾಯ ನಿವೇಶನಕ್ಕೆ ಸಂಬಂಧಿಸಿದಂತೆ ಅನುಕೂಲಕರ ಆದೇಶ ಮಾಡಿಕೊಡಲು ಬಿಡಿಎ ಅಧಿಕಾರಿಗಳು ಮಂಜುನಾಥ್ ಎಂಬುವರಿಂದ 1 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತಂತೆ ಮಂಜುನಾಥ್ ಎಸಿಬಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಬಿಡಿಎ ಸಹಾಯಕ ಎಂಜನಿಯರ್ ಬಿ.ಟಿ ರಾಜು ಮಾತುಕತೆಯಂತೆ ನಿಗದಿಪಡಿಸಿದ್ದ 60 ಲಕ್ಷ ಲಂಚದಲ್ಲಿ 5 ಲಕ್ಷ ಅಡ್ವಾನ್ಸ್ ಆಗಿ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು.
ರಾಜು ನ್ಯಾಯಾಂಗ ಬಂಧನಕ್ಕೆ ಸಿಲುಕಿದ ಬಳಿಕ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಗರದ 24ನೇ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ರಾಜು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
(CRL.P 5614/2022)