ಬೆಂಗಳೂರು: ಮೈಸೂರು ಮಹಾರಾಜರು 1929ರಲ್ಲಿ ರಾಜ್ಯ ಮೀಸಲು ಅರಣ್ಯವೆಂದು ಅಧಿಸೂಚನೆ ಹೊರಡಿಸಿದ್ದ ಜಾಗದ ಸ್ವಲ್ಪ ಭಾಗವನ್ನು ಖಾಸಗಿ ವ್ಯಕ್ತಿಗಳ ಪರ ಡಿಕ್ರಿ ಮಾಡಿಕೊಡಲು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಇದೇ ವೇಳೆ, ಒಮ್ಮೆ ಅರಣ್ಯ ಪ್ರದೇಶವೆಂದು ಘೋಷಣೆಯಾದ ಮೇಲೆ ಅದು ಸದಾ ಅರಣ್ಯವೇ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಜನಸಂಖ್ಯಾ ಬೆಳವಣಿಗೆ ಮತ್ತಿತರ ಕಾರಣಗಳಿಂದಾಗಿ ಅರಣ್ಯ ಅತ್ಯಂತ ವೇಗವಾಗಿ ನಾಶವಾಗುತ್ತಿದೆ. ಇದನ್ನು ತಡೆಯುವ ಅಗತ್ಯವಿದೆ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಸಾಂವಿಧಾನಿಕ ನ್ಯಾಯಾಲಯಗಳ ಕೆಲಸ ಕೇವಲ ನ್ಯಾಯ ದೊರಕಿಸಿಕೊಡುವುದಷ್ಟೇ ಅಲ್ಲ. ನದಿಗಳು ಹಾಗೂ ಅರಣ್ಯಗಳ ರಕ್ಷಣೆಯ ವಿಚಾರದಲ್ಲಿ ಪಾಲುದಾರರಂತೆಯೂ ವರ್ತಿಸಬೇಕು ಎಂದು ಅಭಿಪ್ರಾಯಪಟ್ಟಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗಳನ್ನು ಮಾನ್ಯ ಮಾಡಿರುವ ನ್ಯಾ. ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾ. ರಾಮಚಂದ್ರ ಡಿ. ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ 2011ರ ಆಗಸ್ಟ್ 29ರಂದು ಮಲ್ಲಯ್ಯ ಹಾಗೂ ಇತರರ ಪರವಾಗಿ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.
ವಿವಾದಿತ ಜಾಗಕ್ಕೆ ಸಂಬಂಧಿಸಿದ ಕಂದಾಯ ದಾಖಲೆಗಳನ್ನು ಸರಿಪಡಿಸುವಂತೆ ಆದೇಶಿಸಿರುವ ಹೈಕೋರ್ಟ್, ಆ ಜಾಗವನ್ನು ಚಾಮುಂಡಿ ಬೆಟ್ಟದ ರಾಜ್ಯ ಮೀಸಲು ಅರಣ್ಯದ ಭಾಗವೆಂದು ನಮೂದಿಸುವಂತೆ ಸೂಚಿಸಿದೆ. ಅಲ್ಲದೇ, ಕಂದಾಯ ದಾಖಲೆಗಳ ಪ್ರಕಾರ ವಿವಾದಿತ ಜಾಗ ರಾಜ್ಯ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ. 1950ರಿಂದಲೂ ದಾಖಲೆಗಳು ಅರಣ್ಯ ಇಲಾಖೆಯ ಹೆಸರಿನಲ್ಲೇ ಇವೆ. ಆದರೆ 1970-74ರ ನಡುವೆ ಇದ್ದಕ್ಕಿದ್ದಂತೆ ಯಾವುದೇ ಆಧಾರವಿಲ್ಲದೆ ಅರಣ್ಯ ಇಲಾಖೆ ಹೆಸರಿನ ಜಾಗದಲ್ಲಿ ಏಕಾಏಕಿ ಮಾಯಾಗ ಎಂಬುವರ ಹೆಸರು ನಮೂದಾಗಿದೆ ಎಂದು ಹೇಳಿದೆ.
ಹಾಗೆಯೇ, ವಿವಾದಿತ ಜಾಗದ ಸರ್ವೇ ನಂಬರ್‌ಗಳು ಮೈಸೂರು ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಅಥವಾ ಅರಣ್ಯ ನಕ್ಷೆಯ ಭಾಗವಲ್ಲ. ಆದರೆ ರಾಜ್ಯ ಮೀಸಲು ಅರಣ್ಯ ಅಧಿಸೂಚನೆ ಅನ್ವಯ ಸೃಷ್ಟಿಯಾಗಿದ್ದು, ಅದರಂತೆ ಗಡಿಗಳನ್ನು ನಿಗದಿಪಡಿಸಲಾಗಿದೆ. ಚಾಮುಂಡಿ ಬೆಟ್ಟ ರಾಜ್ಯ ಮೀಸಲು ಅರಣ್ಯದಿಂದ ವಿವಾದಿತ ಜಾಗವನ್ನು ಡಿನೋಟಿಫೈ ಮಾಡಿರುವ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಒಮ್ಮೆ ಅರಣ್ಯ ಪ್ರದೇಶವೆಂದು ಘೋಷಿಸಿದಂತೆ ಅದು ಎಂದೆಂದಿಗೂ ಅರಣ್ಯವೇ ಆಗಿರುತ್ತದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಮೈಸೂರು ಸರ್ಕಾರವು 1929ರಲ್ಲಿ ರಾಜ್ಯ ಮೀಸಲು ಅರಣ್ಯ ಸೃಷ್ಟಿಗೆ ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ ಈ ಜಾಗವೂ ಸೇರಿದ್ದು, 1935ರಿಂದ ಕಂದಾಯ ದಾಖಲೆಗಳಲ್ಲಿ ಅರಣ್ಯ ಇಲಾಖೆ ಭೂಮಿ ಎಂದೇ ಉಲ್ಲೇಖವಾಗಿತ್ತು. ಆದರೆ 1970ರ ಬಳಿಕ ಏಕಾಏಕಿ ಮಾಯಾಗ ಅವರ ಹೆಸರನ್ನು ದಾಖಲೆಗಳಲ್ಲಿ ನಮೂದಿಸಲಾಗಿತ್ತು. ಬದಲಾದ ಕಾಲಘಟದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಚಾಮುಂಡಿ ಬೆಟ್ಟದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲಾಗಿತ್ತು. ಇದರ ನಡುವೆ ಜಾಗ ತಮ್ಮದೆಂದು ಮಾಯಾಗ ಅವರ ಪುತ್ರ ಮಲ್ಲಯ್ಯ ಎಂಬುವರು ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದರು. ಆ ಜಾಗ ಮಾಯಾಗ ಅವರಿಗೆ ಸೇರಿದ್ದು, ಅವರ ಪುತ್ರನ ಹೆಸರಿಗೆ ಡಿಕ್ರಿ ಮಾಡಿಕೊಡಬೇಕೆಂದು ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಕೆಎಸ್‌ಆರ್‌ಟಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದವು.
R.F.A. 1653 of 2011