ದೆಹಲಿ: ಚಿತ್ರ ನಟಿಯೊಬ್ಬರ ವಿರುದ್ಧ ಮಾನಹಾನಿಕರ ವರದಿ ಪ್ರಸಾರ ಮಾಡಿದ್ದ ಆರೋಪಕ್ಕೆ ಸಿಲುಕಿರುವ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಸುವರ್ಣ ವಾಹಿನಿ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಅಲ್ಲದೇ, ಚಿತ್ರನಟಿಯ ವಿರುದ್ಧ ಪ್ರಸಾರ ಮಾಡಿದ ಸುದ್ದಿಯಲ್ಲಿ ಅವರ ವಿಡಿಯೋ ಹಾಗೂ ಚಿತ್ರಗಳನ್ನು ಬಿತ್ತರಿಸಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ದೂರನ್ನು ವಜಾಗೊಳಿಸಲಾಗದು ಎಂದು ತಿಳಿಸಿ ಪ್ರಕರಣ ರದ್ದು ಕೋರಿದ್ದ ಮನವಿಯನ್ನು ತಿರಸ್ಕರಿಸಿದೆ.
ತಮ್ಮ ವಿರುದ್ಧ ನಟಿ ರಮ್ಯಾ ದಾಖಲಿಸಿರುವ ದೂರನ್ನು ರದ್ದುಪಡಿಸುವಂತೆ ಕೋರಿ ಏಷಿಯಾ ನ್ಯೂಸ್ ನೆಟ್ವವರ್ಕ್ ಪ್ರೈ.ಲಿ., ಏಷಿಯಾ ನೆಟ್ ಸುವರ್ಣ ನ್ಯೂಸ್ ಹಾಗೂ ಅದರ ಮಾಜಿ ಸಂಪಾದಕ ವಿಶ್ವೇಶ್ವರ ಭಟ್ ಅಲಿಯಾಸ್ ವಿ.ಭಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಡಿವೈ ಚಂದ್ರಚೂಡ್, ನ್ಯಾ. ಜೆ.ಬಿ ಪರ್ದಿವಾಲಾ, ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ: ಕ್ರಿಕೆಟ್ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ್ದೇನೆಂದು ಆರೋಪಿತರು ನನ್ನ ವಿರುದ್ಧ 2013ರ ಮೇ 31 ರಂದು ಸುಳ್ಳು ಸುದ್ದಿ ಬಿತ್ತರಿಸಿದ್ದಾರೆ. ಪದೆಪದೇ ತನ್ನ ಚಿತ್ರ, ವಿಡಿಯೋ ಪ್ರಸಾರ ಮಾಡುವ ಮೂಲಕ ನನ್ನ ವರ್ಚಸ್ಸಿಗೆ ಹಾನಿ ಮಾಡಿದ್ದಾರೆ ಎಂದು ನಟಿ, ರಾಜಕಾರಣಿ ದಿವ್ಯ ಸ್ಪಂದನಾ ಅಲಿಯಾಸ್ ರಮ್ಯಾ ಖಾಸಗಿ ದೂರು ದಾಖಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ಆರೋಪಿತರಿಗೆ 2016ರ ಜೂನ್ 13ರಂದು ಸಮನ್ಸ್ ಜಾರಿ ಮಾಡಿತ್ತು. ನಂತರ, ದೂರನ್ನು ರದ್ದುಪಡಿಸುವಂತೆ ಕೋರಿ ಆರೋಪಿತರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಮಾನಹಾನಿ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಹಾಗೂ ಪ್ರಕರಣ ರದ್ದು ಕೋರಿ ಆರೋಪಿತರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
(SLP(Crl) No. 9517/2024)