ಬೆಂಗಳೂರು: ವಕೀಲರ ಸೇವೆಗಳಿಗೆ ಸಂಬಂಧಿಸಿದಂತೆ ಆನ್ಲೈನ್ ಮೂಲಕ ಜಾಹೀರಾತು ನೀಡಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೆಲಸ ಕೇಳುವುದನ್ನು ತಡೆಗಟ್ಟಲು ಭಾರತೀಯ ವಕೀಲರ ಪರಿಷತ್ತು ಮುಂದಾಗಿದೆ. ಹಾಗೆಯೇ ಇಂತಹ ಜಾಹೀರಾತು ನೀಡುವ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ವಕೀಲರ ಪರಿಷತ್ತುಗಳಿಗೆ ಬಿಸಿಐ ಸೂಚನೆ ನೀಡಿದೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳನ್ನು ಉಲ್ಲಂಘಿಸಿ ಆನ್ ಲೈನ್ ವೆಬ್ ಸೈಟ್ ಗಳ ಮೂಲಕ ವಕೀಲರು ಕೆಲಸ ಕೇಳುವುದನ್ನು ಖಂಡಿಸಿ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿಗೆ ಅನುಗುಣವಾಗಿ ಬಿಸಿಐ ಈ ನಿರ್ದೇಶನ ನೀಡಿದೆ.
‘ವಕೀಲರ ಸೇವೆಗಳು ವ್ಯವಹಾರವಲ್ಲ’ ಎಂದಿರುವ ಬಿಸಿಐ, ವಕೀಲರ ಸೇವೆಗಳಿಗೆ ಸಂಬಂಧಿಸಿದಂತೆ ಜಾಹೀರಾತು ನೀಡುತ್ತಿರುವ ಕ್ವಿಕರ್, ಸುಲೇಖಾ, ಜಸ್ಟ್ ಡಯಲ್ ಹಾಗೂ ಗ್ರೋಟಲ್ ಡಾಟ್ ಕಾಮ್ ಗಳಿಗೆ ನೋಟಿಸ್ ಜಾರಿ ಮಾಡಿದ್ದು, ತಮ್ಮ ಆನ್ ಲೈನ್ ಫ್ಲಾಟ್ ಫಾರ್ಮ್ ಗಳಿಂದ ಇಂತಹ ಜಾಹೀರಾತುಗಳನ್ನು ತೆಗೆದುಹಾಕುವಂತೆ ಸೂಚಿಸಿದೆ. ಇಂತಹ ಕ್ರಮವು ಬಿಸಿಐನ ನಿಯಮಗಳಿಗೆ ವಿರುದ್ಧವಾದುದು ಎಂದು ನೋಟಿಸ್ ನಲ್ಲಿ ತಿಳಿಸಿದೆ.
ಆನ್ ಲೈನ್ ಪೋರ್ಟಲ್ ಗಳ ಮೂಲಕ ಜಾಹೀರಾತು ನೀಡಿ ಕೆಲಸ ಕೇಳುವ/ ಹುಡುಕುವ ವಕೀಲರ ವಿರುದ್ಧ ಶಿಸ್ತಿನ ಕ್ರಮಗಳನ್ನು ಕೈಗೊಳ್ಳುವಂತೆ ಬಿಸಿಐ ದೇಶದ ಎಲ್ಲಾ ರಾಜ್ಯ ವಕೀಲರ ಪರಿಷತ್ತುಗಳಿಗೆ ಸೂಚಿಸಿದೆ. ಅಲ್ಲದೇ, ಬಿಸಿಐನ ನಿಯಮ 36ರ ಅಡಿಯಲ್ಲಿ ಅಂತಹ ವಕೀಲರ ಸನ್ನದನ್ನು ಅಮಾನತು ಮಾಡುವ/ರದ್ದುಪಡಿಸುವ ಕ್ರಮ ಕೈಗೊಳ್ಳಬಹುದೆಂದು ತಿಳಿಸಿದೆ. ಅಲ್ಲದೇ, ಇಂತಹ ಜಾಹೀರಾತು ನೀಡುವ ಪ್ಲಾಟ್ ಫಾರ್ಮ್ ಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ಸೂಚಿಸಿದೆ.
ಬಿಸಿಐ ನೀಡಿರುವ ಈ ಸೂಚನೆಯನ್ನು ಪಾಲಿಸಿದ ಕುರಿತಂತೆ ಅನುಸರಣಾ ವರದಿಯನ್ನು ಮುಂದಿನ ಆಗಸ್ಟ್ 10 ರೊಳಗೆ ಸಲ್ಲಿಸುವಂತೆ ಸೂಚಿಸಿರುವ ರಾಜ್ಯ ವಕೀಲರ ಪರಿಷತ್ತುಗಳಿಗೆ ನಿರ್ದೇಶಿಸಿದೆ.