ಬೆಂಗಳೂರು: ಸಾರ್ವಜನಿಕ ಶೌಚಾಲಯದಲ್ಲಿ ವೇಶ್ಯೆ ಎಂದು ಬಿಂಬಿಸಿ ಮಹಿಳೆಯರ ಮೊಬೈಲ್ ಸಂಖ್ಯೆ ಬರೆದಿದ್ದ ಆರೋಪದಡಿ ವ್ಯಕ್ತಿಯೋರ್ವನ ವಿರುದ್ಧ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಇದೇ ವೇಳೆ ಇಂದಿನ ಡಿಜಿಟಲ್ ಯುಗದಲ್ಲಿ ಮಹಿಳೆಗೆ ದೈಹಿಕ ಹಾನಿ ಮಾಡಬೇಕಿಲ್ಲ, ಅವಹೇಳನಾಕಾರಿ ಹೇಳಿಕೆ, ಚಿತ್ರ ಅಥವಾ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿದರೆ ಸಾಕು. ಅದಕ್ಕಿಂತ ದೊಡ್ಡ ಆಘಾತ, ಹಾನಿ ಉಂಟಾಗುತ್ತದೆ. ಇಂತಹ ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದಾಗ ನ್ಯಾಯಾಲಯಗಳು ಮಧ್ಯಪ್ರವೇಶಿಸಲಾಗದು. ಬದಲಿಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಟುವಾಗಿ ನುಡಿದಿದೆ.
ಬೆಂಗಳೂರಿನ ಮೆಜೆಸ್ಟಿಕ್ ಶೌಚಾಲಯದ ಗೋಡೆ ಮೇಲೆ ಕಾಲ್ ಗರ್ಲ್ ಎಂದು ಬರೆದು ಅದರೊಟ್ಟಿಗೆ ಮಹಿಳೆಯರಿಬ್ಬರ ಮೊಬೈಲ್ ಸಂಖ್ಯೆಗಳನ್ನು ನಮೂದಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಚಿತ್ರದುರ್ಗದ ಅಲ್ಲಾ ಭಕ್ಷ ಪಟೇಲ್ ಅಲಿಯಾಸ್ ಎಬಿ ಪಾಟೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಮಹಿಳೆಯರ ಮೊಬೈಲ್ ನಂಬರ್ ಗಳನ್ನು ಆರೋಪಿ ಶೌಚಾಲಯದ ಗೋಡೆ ಮೇಲೆ ಬರೆದಿರುವುದಕ್ಕೆ ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷ್ಯಗಳು ಲಭ್ಯ ಇವೆ. ಪ್ರತ್ಯಕ್ಷ್ಯ ಸಾಕ್ಷಿ ಇಲ್ಲ ಅಥವಾ ಓರ್ವ ಸಾಕ್ಷಿದಾರರ ಆಧಾರದ ಮೇಲೆ ಆರೋಪಿ ವಿರುದ್ಧ ಕ್ರಮ ಸರಿಯಲ್ಲ ಎಂಬ ವಾದವನ್ನು ಒಪ್ಪಲಾಗದು. ಹಾಗೆಯೇ ಪೊಲೀಸರು ಎಫ್ಐಆರ್ ದಾಖಲಿಸುವ ವೇಳೆ ಸೂಕ್ತ ಸೆಕ್ಷನ್ ಹಾಕಿಲ್ಲ ಎಂಬ ಕಾರಣಕ್ಕೂ ಕೇಸ್ ರದ್ದುಪಡಿಸಲಾಗದು. ಈ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 309 ಅನ್ವಯವಾಗುವಂತಿದ್ದರೂ ಪೊಲೀಸರು ಎಫ್ಐಆರ್ ದಾಖಲಿಸುವ ವೇಳೆ ಕೈಬಿಟ್ಟಿರುವುದು ಮತ್ತು ಮ್ಯಾಜಿಸ್ಟ್ರೇಟ್ ಆದೇಶ ನೀಡುವ ಬದಲಿಗೆ ಅನುಮತಿ ನೀಡಿರುವುದು ಸಮಂಜಸವಲ್ಲ. ಇವೆಲ್ಲದರ ಹೊರತಾಗಿ ಮಹಿಳೆಯ ಘನತೆಗೆ ಧಕ್ಕೆಯಾಗುವ ವಿಚಾರ ದೂರಿನಲ್ಲಿ ಸ್ಪಷ್ಟವಾಗಿದೆ. ಹೀಗಾಗಿ ತಾಂತ್ರಿಕ ಕಾರಣ ಆಧರಿಸಿ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೇ, ಮಹಿಳೆಯ ಘನತೆ ವಿಚಾರವಾಗಿ ತೀರ್ಪಿನಲ್ಲಿ ಸುಧೀರ್ಘವಾಗಿ ಚರ್ಚಿಸಿರುವ ನ್ಯಾಯಪೀಠ, ಇಂತಹ ಪ್ರಕರಣಗಳು ಮಹಿಳೆಯನ್ನು ಆಘಾತಕಾರಿ ಅನುಭವಕ್ಕೆ ನೂಕುತ್ತವೆ. ಮಹಿಳೆಯ ಮೇಲೆ ದೈಹಿಕ ಹಲ್ಲೆ ನಡೆಸುವುದು ಭಿನ್ನ ಸನ್ನಿವೇಶ ಮತ್ತು ಅದು ಬೇರೆಯದೇ ಅಪರಾಧವಾಗುತ್ತದೆ. ಆದರೆ, ಮಹಿಳೆಯನ್ನು ಅಶ್ಲೀಲವಾಗಿ, ಅಪ್ರಮಾಣಿಕವಾಗಿ ಬಿಂಬಿಸಿದ ಸಂದರ್ಭಗಳಲ್ಲಿ ದೈಹಿಕ ಹಾನಿಗಿಂತಲೂ ಘೋರವಾದ ಮಾನಸಿಕ ಯಾತನೆ ಉಂಟಾಗಲಿದೆ. ಇಂತಹ ಘಟನೆಗಳು ಮನಸಿನ ಮೇಲೆ ಕಲೆಯಂತೆ ಉಳಿದುಬಿಡುತ್ತವೆ ಎಂದು ಕೃತ್ಯದ ಗಂಭೀರತೆಯನ್ನು ಹೈಕೋರ್ಟ್ ವಿವರಿಸಿದೆ.
ಎಫ್ಐಆರ್ ದಾಖಲಿಸುವ ವೇಳೆ ಐಪಿಸಿ ಸೆಕ್ಷನ್ 309 ದಾಖಲಿಸುವಲ್ಲಿ ವಿಫಲವಾಗಿರುವ ಪೊಲೀಸರು ಮತ್ತು ಸಂಜ್ಞೇಯ ಅಪರಾಧದ ತನಿಖೆಗೆ ಅನುಮತಿಸುವಾಗ ಮ್ಯಾಜಿಸ್ಟ್ರೇಟ್ ಆದೇಶದ ಬದಲಿಗೆ ಅನುಮತಿ ನೀಡಿರುವ ಕ್ರಮಗಳನ್ನು ಹೈಕೋರ್ಟ್ ತೀಕ್ಷ್ಣವಾಗಿ ಖಂಡಿಸಿದೆ. ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿರುವ ವಿಚಾರ ಓದಿದರೆ ಅದರಲ್ಲಿ ಸೆ.309 ಹಾಕಬೇಕು ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಹಾಗಿದ್ದೂ ಸೂಕ್ತ ಸೆಕ್ಷನ್ ಅನ್ವಯಿಸಿ ಎಫ್‌ಐಆರ್ ದಾಖಲಿಸದೇ ಇರುವುದು ಪೊಲೀಸರ ಅವಿವೇಕತನ. ಪೊಲೀಸರ ಈ ಬೇಜವಾಬ್ದಾರಿ ನಡೆಯಿಂದ ಸಂತ್ರಸ್ತೆಯನ್ನು ಇಕ್ಕಟ್ಟಿಗೆ ಸಿಲುಕಿಸಲಾಗದು ಎಂದು ಹೈಕೋರ್ಟ್ ಚಾಟಿ ಬೀಸಿದೆ. ಇವೇ ಮಾತುಗಳು ಮ್ಯಾಜಸ್ಟ್ರೇಟ್ ಆದೇಶಕ್ಕೂ ಅನ್ವಯಿಸುತ್ತದೆ ಎಂದು ಮ್ಯಾಜಿಸ್ಟ್ರೇಟ್‌ಗಳಿಗೆ ಹೈಕೋರ್ಟ್ ಎಚ್ಚರಿಸಿದೆ.
ಪ್ರಕರಣದ ಹಿನ್ನೆಲೆ: ಚಿತ್ರದುರ್ಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ತಮ್ಮ ಮೊಬೈಲ್ ಸಂಖ್ಯೆಯನ್ನು ಅಲ್ಲಿನ ಸಿಬ್ಬಂದಿಗೆ ನೀಡಿದ್ದರು. ಕೆಲ ದಿನಗಳಲ್ಲೇ ಈ ನಂಬರಿಗೆ ಹಲವು ಅಪರಿಚಿತರು ಹೊತ್ತಲ್ಲದ ಹೊತ್ತಿನಲ್ಲಿ ಸಂತ್ರಸ್ತ ಮಹಿಳೆಗೆ ಕರೆ ಮಾಡಿ ತಮ್ಮೊಂದಿಗೆ ಬರುವಂತೆ, ಬರದಿದ್ದರೆ ಕೊಲ್ಲುವುದಾಗಿ ಬೆದರಿಸುತ್ತಿದ್ದರು. ಕರೆ ಮಾಡಿದವರಿಗೆ ವಿಚಾರಿಸಿದಾಗ ಸಂತ್ರಸ್ತೆಯ ಮೊಬೈಲ್ ನಂಬರ್ ಬೆಂಗಳೂರಿನ ಮೆಜೆಸ್ಚಿಕ್ ಶೌಚಾಲಯದಲ್ಲಿ ಸಿಕ್ಕಿದ್ದಾಗಿ ಹೇಳಿದ್ದರು. ಕಾಲ್ ಗರ್ಲ್ ಹೆಸರಿನಲ್ಲಿ ನಂಬರ್ ಬರೆದಿರುವುದನ್ನು ತಿಳಿದು ಆತಂಕಗೊಂಡ ಮಹಿಳೆ ಬೆಂಗಳೂರಿನಗೆ ಬಂದು ಅದನ್ನು ಅಳಿಸಿದ್ದರಲ್ಲದೇ, ಚಿತ್ರದುರ್ಗ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಐಪಿಸಿ 504, 506 ಅಡಿ ಎಫ್ಐಆರ್ ದಾಖಲಿಸಿದ್ದ ಪೊಲೀಸರು ನಂತರ ಪ್ರಕರಣವನ್ನು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು. ನಂತರ ನಡೆದ ತನಿಖೆ ವೇಳೆ ಸಂತ್ರಸ್ತ ಮಹಿಳೆಯ ಫೋನ್ ನಂಬರನ್ನು ಆಕೆಯ ಸಹೋದ್ಯೋಗಿ ಮಹಿಳೆಯೇ ಸಿಟ್ಟಿನಿಂದ ಆರೋಪಿಗೆ ನೀಡಿದ್ದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಅಲ್ಲಾಬಕ್ಷ ಪಾಟೀಲ್ ವಿರುದ್ಧ ಐಪಿಸಿ ಸೆಕ್ಷನ್ 501, 504, 507 ಮತ್ತು 509ರ ಅಡಿ ಆರೋಪಪಟ್ಟಿ ಸಲ್ಲಿಸಿದ್ದರು. ಬಳಿಕ ಪ್ರಕರಣ ರದ್ದು ಕೋರಿ ಅಲ್ಲಾಬಕ್ಷ ಹೈಕೋರ್ಟ್ ಮೆಟ್ಟಿಲೇರಿದ್ದರು.
(CRIMINAL PETITION NO. 1995 OF 2022)