ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ತನ್ನ ಮತ್ತು ಕುಟುಂಬ ಸದಸ್ಯರ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಅವರ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಆದಾಯಕ್ಕಿಂತ ಶೇ 488 ರಷ್ಟು ಅಧಿಕ ಆಸ್ತಿ ಹೊಂದಿರುವ ಆರೋಪದಡಿ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿಯ ಕುಂದಾಣ ಗ್ರಾಮ ಪಂಚಾಯ್ತಿ ಪಿಡಿಒ ಪದ್ಮನಾಭ, ಅವರ ಪತ್ನಿ ಭವ್ಯ ಹಾಗೂ ಅತ್ತೆ ಲಕ್ಷ್ಮಮ್ಮ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಲೋಕಾಯುಕ್ತ ಪೊಲೀಸರು ಸಾಕಷ್ಟು ಮಾಹಿತಿ ಕಲೆಹಾಕಿದ ನಂತರವೇ ಅರ್ಜಿದಾರರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ. ಅರ್ಜಿದಾರರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದಕ್ಕೆ ಸಾಕಷ್ಟು ದಾಖಲೆಗಳು ಕಂಡು ಬಂದಿವೆ. ನೈಜ ಸಂಪಾದನೆ ಹಾಗೂ ಅಕ್ರಮ ಸಂಪಾದನೆಗಳ ಪಟ್ಟಿಯನ್ನು ಪೊಲೀಸರು ಸಿದ್ದಪಡಿಸಿದ್ದಾರೆ. ತನ್ನ ಮತ್ತು ಪತ್ನಿ ಹಾಗೂ ಅತ್ತೆಯ ಹೆಸರಿನಲ್ಲಿಯೂ ಆಸ್ತಿ ಖರೀದಿಸಿರುವ ವಿವರಗಳಿವೆ. ಮೇಲ್ನೋಟಕ್ಕೆ ಆರೋಪಿತರ ವಿರುದ್ಧ ಸಾಕ್ಷ್ಯಗಳು ಕಂಡು ಬಂದಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿತರಿಗೆ ಪರಿಹಾರ ಕಂಡುಕೊಳ್ಳಲು ಸಿಆರ್ಪಿಸಿಯಲ್ಲಿ ಹಲವು ಹಂತದ ಅವಕಾಶಗಳಿವೆ. ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ ಸಿಆರ್ಪಿಸಿ ಸೆಕ್ಷನ್ 227, 239, 445 ಅಡಿಯಲ್ಲಿ ಪರಿಹಾರ ಕೋರಬಹುದಾಗಿದೆ. ಆರೋಪಿತರು ತನಿಖೆ ಪೂರ್ಣಗೊಳ್ಳುವ ಮುನ್ನವೇ ಪ್ರಕರಣ ರದ್ದು ಕೋರಿದ್ದಾರೆ. ಸಿಆರ್ಪಿಸಿ ಸೆಕ್ಷನ್ 482 ಅಡಿಯಲ್ಲಿ ಹೈಕೋರ್ಟ್ ಗೆ ನೀಡಿರುವ ಅಂತರ್ಗತ ಅಧಿಕಾರವನ್ನು ಅತ್ಯಂತ ವಿವೇಚನೆಯಿಂದ ಬಳಸುವಂತೆ ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಪುನರುಚ್ಚರಿಸಿದೆ ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೇ, ಸಿಆರ್ಪಿಸಿ ಸೆಕ್ಷನ್ 482 ಅಡಿಯಲ್ಲಿ ಲಭ್ಯವಿರುವ ಅಂತರ್ಗತ ಅಧಿಕಾರವನ್ನು ಹೈಕೋರ್ಟ್ ವಿರಳಾತಿ ವಿರಳ ಪ್ರಕರಣಗಳಲ್ಲಿ ಮಾತ್ರ ಬಳಸಬೇಕಾಗುತ್ತದೆ. ಪೊಲೀಸರ ತನಿಖೆಯಲ್ಲಿ ನ್ಯಾಯಾಲಯಗಳು ಅನಗತ್ಯವಾಗಿ ಮಧ್ಯಪ್ರವೇಶಲು ಸಾಧ್ಯವಿಲ್ಲ. ನ್ಯಾಯಾಲಯಗಳು ಪೊಲೀಸರ ಕಾರ್ಯವ್ಯಾಪ್ತಿಯನ್ನು ಅತಿಕ್ರಮಿಸಲಾಗದು. ಕಾಗ್ನಿಜಬಲ್ ಅಪರಾಧಗಳ ತನಿಖೆಯಲ್ಲಿ ನ್ಯಾಯಾಲಯಗಳು ಮಧ್ಯ ಪ್ರವೇಶಿಸಿದರೆ ತನಿಖೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಹಂತದಲ್ಲಿ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ಮನವಿ ವಜಾಗೊಳಿಸಿದೆ.
ಪಿಡಿಒ ಪದ್ಮನಾಭ 2002 ರ ಮಾರ್ಚ್ 26ರಂದು ಅನುಕಂಪದ ಆಧಾರದಲ್ಲಿ ಗ್ರಾ.ಪಂ.ನ ಗ್ರೇಡ್-2 ಕಾರ್ಯದರ್ಶಿ ಆಗಿ ನೇಮಕಗೊಂಡಿದ್ದರು. 2007ರಲ್ಲಿ ಗ್ರೇಡ್-1 ಕಾರ್ಯದರ್ಶಿಯಾಗಿ ಮುಂಬಡ್ತಿ ಪಡೆದಿದ್ದರು. 2011 ರಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿ ಮತ್ತೊಂದು ಬಡ್ತಿ ಪಡೆದಿದ್ದರು. 2023ರಲ್ಲಿ ಕುಂದಾಣ ಗ್ರಾಮ ಪಂಚಾಯ್ತಿ ಪಿಡಿಒ ಆಗಿ ಕೆಲಸ ಮಾಡುವ ವೇಳೆ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದಿತ್ತು. ಈ ಕುರಿತಂತೆ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ 2023ರ ಡಿಸೆಂಬರ್ 22ರಂದು ವರದಿ ಸಿದ್ದಪಡಿಸಿದ್ದರು. ಬಳಿಕ ಆರೋಪಿತರ ವಿರುದ್ಧ 2024ರ ಜನವರಿ 8ರಂದು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13 (1)(b), 13(2) ಹಾಗೂ 12 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು.
(W.P.No.2413/2024 (GM-RES)