News

ಪತಿ ನಿಧನರಾದರೆ ವಿಚ್ಛೇದನದ ಮೇಲ್ಮನವಿ ವಿಚಾರಣೆ ಕೊನೆಗೊಳ್ಳುವುದಿಲ್ಲ: ಹೈಕೋರ್ಟ್

Share It

ಬೆಂಗಳೂರು: ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಚೇದನ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯು ವಿಚಾರಣಾ ಹಂತದಲ್ಲಿರುವಾಗ ಪತಿ ಸಾವನ್ನಪ್ಪಿದರೆ, ಮೇಲ್ಮನವಿ ಅರ್ಜಿಯ ವಿಚಾರಣಾ ಪ್ರಕ್ರಿಯೆ ರದ್ದುಗೊಳ್ಳುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪತ್ನಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ಹಾಗು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ. ಹಾಗೆಯೇ 2022ರಲ್ಲಿ ಪತಿ ನಿಧನರಾಗಿದ್ದರೂ ಸಹ ಪತ್ನಿಯ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸಿದೆ.

ಪ್ರಕರಣದ ಹಿನ್ನೆಲೆ : 2002ರ ಏ.19ರಂದು ವಿವಾಹ ಜೀವನಕ್ಕೆ ಕಾಲಿಟ್ಟಿದ್ದ ಬೆಂಗಳೂರಿನ ದಂಪತಿ ನಡುವೆ ವೈಮನಸ್ಯ ಮೂಡಿತ್ತು. ಮದುವೆಯಾದ 10 ತಿಂಗಳಲ್ಲೇ ಪತ್ನಿಯು ತನ್ನ ತಾಯಿ ಮತ್ತು ಸಹೋದರಿಯನ್ನು ಕೆಟ್ಟ ಶಬ್ಧಗಳಿಂದ ನಿಂದಿಸಿ ಮನೆ ಬಿಟ್ಟು ಹೋಗಿದ್ದಾರೆ ಎಂದು ಪತಿ ಆರೋಪಿಸಿದ್ದರು. ಪ್ರತ್ಯಾರೋಪ ಮಾಡಿದ್ದ ಪತ್ನಿ, ತಾನು ಗರ್ಭಿಣಿಯಾಗಿದ್ದಾಗ ತಾಯಿ ಮನೆಗೆ ಹೋಗಿದ್ದೆ, ಪತಿ ತಿರುಗಿ ನೋಡಲಿಲ್ಲ, ಮಗು ಜನಿಸಿದಾಗಲೂ ಬರಲಿಲ್ಲ ಎಂದು ಆರೋಪಿಸಿದ್ದರು.

2005ರಲ್ಲಿ ಪತ್ನಿ ಜೀವನಾಂಶ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಜೀವನಾಂಶ ನೀಡಲು ಆದೇಶಿಸಿತ್ತು. ಈ ಮಧ್ಯೆ ಪತಿ 2007ರಲ್ಲಿ ವಿವಾಹ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಪತಿ ಜೀವನಾಂಶ ಪಾವತಿಸದ ಕಾರಣ ವಿಚ್ಛೇದನ ಕೋರಿದ್ದ ಅರ್ಜಿ ವಜಾಗೊಂಡಿತ್ತು. 2015ರಲ್ಲಿ ಪತಿ ಮತ್ತೆ ಅರ್ಜಿ ಸಲ್ಲಿಸಿದ್ದಾಗ ನ್ಯಾಯಾಲಯ ಕ್ರೌರ್ಯದ ಆಧಾರದ ಮೇಲೆ ವಿಚ್ಚೇದನ ಮಂಜೂರು ಮಾಡಿತ್ತು.

ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಅರ್ಜಿ ವಿಚಾರಣೆ ಬಾಕಿ ಇರುವಾಗಲೇ 2022 ರಲ್ಲಿ ಪತಿ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಪತ್ನಿ, ಮೃತಪಟ್ಟಿರುವ ತಮ್ಮ ಪತಿ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದುರು. ಹೀಗಾಗಿ, ಅವರ ನಿವೃತ್ತಿ ಭತ್ಯೆ ಹಾಗೂ ಅನುಕುಂಪದ ಉದ್ಯೋಗ ಸೇರಿ ಕಾನೂನಾತ್ಮಕ ಪರಿಹಾರ ತನಗೆ ದೊರಕಬೇಕು ಹಾಗೂ ಕೌಟುಂಬಿಕ ನ್ಯಾಯಾಲಯ ನೀಡಿರುವ ವಿಚ್ಚೇದನ ಆದೇಶ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಹೈಕೋರ್ಟ್ ತೀರ್ಪಿನ ಸಾರಾಂಶ: ಪತಿ ನಿಧನರಾಗಿದ್ದರೂ ಪತಿ ವಿಧವೆಯಾಗುವುದರಿಂದ ಕಾನೂನು ಪ್ರಕಾರ ಅವರಿಗೆ ಸೇರಬೇಕಾದ ಸವಲತ್ತುಗಳು ಸೇರಬೇಕಾಗುತ್ತದೆ. ಪತಿಯ ಆಸ್ತಿಯಲ್ಲಿ ಬರಬೇಕಾದ ಪರಿಹಾರ ಮತ್ತು ಅನುಕಂಪದ ಹುದ್ದೆಗೆ ಪತ್ನಿಯನ್ನು ಪರಿಗಣಿಸಬೇಕಾಗುತ್ತದೆ ಎಂದು ಆದೇಶಿಸಿದೆ.

ಮೇಲ್ಮನವಿ ಬಾಕಿ ಇದ್ದಾಗ ಪತಿ ನಿಧನರಾದರೆ ಪತ್ನಿಯ ಸ್ಥಾನಮಾನ ಮತ್ತು ಹಕ್ಕುಗಳ ಮೇಲೆ ಕೂಡ ಪರಿಣಾಮ ಬೀರುತ್ತದೆ. ಯಲ್ಲವ್ವ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ಕೌಟುಂಬಿಕ ವ್ಯಾಜ್ಯಗಳಲ್ಲಿ ಒಬ್ಬರು ಮೃತಪಟ್ಟರೆ ಪ್ರಕರಣ ರದ್ದಾಗದು ಎಂದು ಹೇಳಲಾಗಿದೆ. ಇನ್ನು ಪ್ರಸ್ತುತ ಪ್ರಕರಣದಲ್ಲಿ ಪತಿ ಸಹಜೀವನ ಮುಂದುವರಿಸುವಂತೆ ಹಾಗೂ ತವರಿನಿಂದ ವಾಪಸ್ಸಾಗುವಂತೆ ಪತ್ನಿಗೆ ಕೋರಿಲ್ಲ. ವಿವಾಹ ವಿಚ್ಚೇದನ ಮಂಜೂರು ಮಾಡಲು ಕ್ರೌರ್ಯವನ್ನು ಸಾಬೀತುಪಡಿಸಿಲ್ಲ. ಹಾಗಿದ್ದೂ, ಕೌಟುಂಬಿಕ ನ್ಯಾಯಾಲಯ ವಿಚ್ಚೇದನ ಮಂಜೂರು ಮಾಡಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟು ವಿಚ್ಚೇದನ ಆದೇಶವನ್ನು ರದ್ದುಗೊಳಿಸಿದೆ.

(MISCELLANEOUS FIRST APPEAL NO.4677 OF 2016 (FC)


Share It

You cannot copy content of this page