ದೆಹಲಿ: ಖಾಸಗಿ ಶಾಲೆಗಳಲ್ಲಿ ಹವಾ ನಿಯಂತ್ರಕ (ಎಸಿ) ಸೌಲ್ಯಭ್ಯ ನೀಡುವುದಕ್ಕೆ ಶುಲ್ಕ ವಿಧಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಶಾಲಾ ಕೊಠಡಿಗಳಲ್ಲಿ ಮಕ್ಕಳು ಹವಾನಿಯಂತ್ರಕ (ಎ.ಸಿ) ಬಳಸುತ್ತಿದ್ದರೆ, ಅದಕ್ಕೆ ತಗಲುವ ಖರ್ಚನ್ನು ಭರಿಸುವ ಜವಾಜ್ದಾರಿ ಪೋಷಕರ ಮೇಲೂ ಇರುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಸ್ಮಾರ್ಟ್ ಕ್ಲಾಸ್, ಪ್ರಯೋಗಾಲಯ ಶುಲ್ಕವನ್ನು ಪೋಷಕರು ಭರಿಸುತ್ತಿದ್ದಾರೆ. ಎಸಿ ಶುಲ್ಕ ಅವುಗಳಿಗಿಂತ ಭಿನ್ನವಾಗಿಲ್ಲ. ಹೀಗಾಗಿ ಶುಲ್ಕವನ್ನು ಶಾಲಾ ಆಡಳಿತವೇ ಭರಿಸಬೇಕು ಎಂದು ಆದೇಶಿಸಲಾಗದು ಎಂದು ಹೈಕೋರ್ಟ್ ಹೇಳಿದೆ.
ದೆಹಲಿಯ ಖಾಸಗಿ ಶಾಲೆಯೊಂದು ತರಗತಿಯಲ್ಲಿ ಎಸಿ ಬಳಕೆಗಾಗಿ ಪೋಷಕರಿಂದ ತಿಂಗಳಿಗೆ 2000 ರೂಪಾಯಿ ಶುಲ್ಕ ವಸೂಲಿ ಮಾಡುತ್ತಿತ್ತು. ಇದನ್ನು ಪ್ರಶ್ನಿಸಿ ಮನೀಶ್ ಗೋಯೆಲ್ ಎಂಬುವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ, ತಮ್ಮ ಮಗು ಕೇಂಬ್ರಿಡ್ಜ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಓದುತ್ತಿದ್ದು, ಎಸಿ ಸೌಲಭ್ಯ ನೀಡಲು ತಿಂಗಳಿಗೆ 2000 ಶುಲ್ಕ ವಿಧಿಸುತ್ತಿದೆ. ಹೀಗಾಗಿ, ಈ ಶುಲ್ಕವನ್ನು ಶಾಲಾ ಆಡಳಿತ ಮಂಡಳಿಯೇ ಭರಿಸಲು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಆದೇಶಿಸಬೇಕು ಎಂದು ಕೋರಿದ್ದರು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹಾಗೂ ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ, ಬೇಸಿಗೆ ಸಮಯದಲ್ಲಿ ಹವಾನಿಯಂತ್ರಕ (ಎಸಿ) ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಇದು ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್ ನಂತಹ ಶುಲ್ಕಗಳಿಗಿಂತ ಭಿನ್ನವಾಗಿಲ್ಲ. ಇಂತಹ ಆರ್ಥಿಕ ವೆಚ್ಚವನ್ನು ಶಾಲೆಗಳು ಮಾತ್ರ ಭರಿಸಲು ಸಾಧ್ಯವಿಲ. ಪೋಷಕರು ಶಾಲೆಗಳನ್ನು ಆಯ್ಕೆ ಮಾಡುವಾಗ ಅಲ್ಲಿನ ಸೌಲಭ್ಯಗಳು ಮತ್ತು ಪಾವತಿಸಬೇಕಾದ ವೆಚ್ಚವನ್ನುಗಮನಿಸಬೇಕು ಎಂದು ತಿಳಿಸಿ, ಅರ್ಜಿಯನ್ನು ವಜಾ ಮಾಡಿದೆ.
(W.P.(C) 6151/2024 & CM APPL. 25614/2024)