News

ಮರಣಪೂರ್ವ ಹೇಳಿಕೆ ಪರಿಗಣನೆ: ನೆರೆಮನೆ ಮಹಿಳೆ ಸಾವಿಗೆ ಕಾರಣನಾಗಿದ್ದ ವ್ಯಕ್ತಿಗೆ 7 ವರ್ಷ ಜೈಲು ಶಿಕ್ಷೆ

Share It

ಬೆಂಗಳೂರು: ನೆರೆಮನೆ ವ್ಯಕ್ತಿಯ ಹಲ್ಲೆ ಹಾಗೂ ನಿಂದನೆಗೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದ ಮಹಿಳೆ ಸಾವಿಗೆ ಮುನ್ನ ನೀಡಿದ್ದ ಮರಣಪೂರ್ವ ಹೇಳಿಕೆಯನ್ನು ಪರಿಗಣಿಸಿರುವ ಹೈಕೋರ್ಟ್ ಪ್ರಕರಣದಿಂದ ಖುಲಾಸೆಯಾಗಿದ್ದ ವ್ಯಕ್ತಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಆರೋಪಿ ಶಾಂತಶೆಟ್ಟಿ ಎಂಬಾತನನ್ನು ಖುಲಾಸೆ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಹಾಗೂ ಆರೋಪಿಗೆ ಶಿಕ್ಷೆ ವಿಧಿಸುವಂತೆ ಕೋರಿ ಚಾಮರಾಜನಗರ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಮರಣಪೂರ್ವ ಹೇಳಿಕೆ ನೀಡಿರುವ ಮಹಿಳೆಯು ಮಾನಸಿಕವಾಗಿ ಸದೃಢರಾಗಿದ್ದರು ಎಂಬುದಕ್ಕೆ ವೈದ್ಯರು ಪ್ರಮಾಣಪತ್ರ ನೀಡಿಲ್ಲ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿದೆ. ಆದರೆ, ವೈದ್ಯರು ನೀಡುವ ಸಂತ್ರಸ್ತರ ಮಾನಸಿಕ ಸದೃಢತೆ ಪ್ರಮಾಣ ಪತ್ರ ಒಂದು ತಾಂತ್ರಿಕ ಅಂಶವೇ ಹೊರತು ಅದು ಸಾಕ್ಷ್ಯವಲ್ಲ. ಅದು ಕಡ್ಡಾಯವೂ ಅಲ್ಲ. ಮರಣಪೂರ್ವ ಹೇಳಿಕೆ ವಿಶ್ವಾಸಾರ್ಹವಾಗಿದ್ದರೆ ಅದನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೇ, ಮರಣಪೂರ್ವ ಹೇಳಿಕೆಯನ್ನು ಸಂತ್ರಸ್ತರೇ ಪ್ರಮಾಣೀಕರಿಸಿರುತ್ತಾರೆ. ಇದು ಮರಣಪೂರ್ವ ಹೇಳಿಕೆ ದಾಖಲಿಸಿದ ಸಂತ್ರಸ್ತ ವ್ಯಕ್ತಿ ಮಾನಸಿಕವಾಗಿ ಸದೃಢವಾಗಿದ್ದರು ಎಂಬುದನ್ನು ನಿರೂಪಿಸುತ್ತದೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಮರಣಪೂರ್ವ ಹೇಳಿಕೆಯಲ್ಲಿ ಘಟನೆ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಸಂತ್ರಸ್ತ ಮಹಿಳೆ ಗಲಾಟೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡರೆಂದು ಆಕೆಯ ಪತಿ ಹಾಗೂ ಪ್ರತ್ಯಕ್ಷದರ್ಶಿಗಳು ಸಾಕ್ಷ್ಯ ಹೇಳಿದ್ದಾರೆ. ಸಂತ್ರಸ್ತೆಯ ಮರಣಪೂರ್ವ ಹೇಳಿಕೆಯನ್ನು ಮುಖ್ಯಪೇದೆ ದಾಖಲಿಸಿಕೊಂಡಿದ್ದಾರೆ. ಇವೆಲ್ಲವನ್ನೂ ಗಮನಿಸಿದಾಗ ಮಹಿಳೆಯ ಆತ್ಮಹತ್ಯೆಗೆ ಆರೋಪಿ ಶಾಂತಶೆಟ್ಟಿ ಪ್ರಚೋದನೆಯೇ ಕಾರಣ ಎಂಬುದು ಸಾಬೀತಾಗಿದೆ ಎಂದು ಪೀಠ ಅಭಿಪ್ರಾಯಪಟ್ಟು 7 ವರ್ಷ ಜೈಲು ಶಿಕ್ಷೆ, 17 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ: 2008ರ ಜೂನ್ 12ರಂದು ಚಾಮರಾಜನಗರದ ಕೊಳ್ಳೆಗಾಲ ನಿವಾಸಿ ಶಾಂತಶೆಟ್ಟಿ ಪಕ್ಕದ ಮನೆ ಮಹಿಳೆಯೊಂದಿಗೆ ಜಗಳ ಮಾಡಿದ್ದ. ತನ್ನ ಹೆಂಡತಿ ಜೊತೆ ಜಗಳ ಮಾಡಿದ್ದರೆಂಬ ಕಾರಣಕ್ಕೆ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ, ಮನೆಯಿಂಜ ಹೊರಗೆಳೆದು ತಂದು ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದ. ಹಾಗೆಯೇ, ಬದುಕಿರುವ ಬದಲು ಹೋಗಿ ಸಾಯಿ ಎಂದು ನಿಂದಿಸಿದ್ದ. ಅಪಮಾನದಿಂದ ಮನನೊಂದ ಮಹಿಳೆ ಮನೆಯಲ್ಲಿದ್ದ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಂಚಿಕೊಂಡಿದ್ದರು. ಗಲಾಟೆ ತಿಳಿದು ತಕ್ಷಣವೇ ಮನೆಗೆ ಬಂದ ಪತಿ ಬೆಂಕಿ ನಂದಿಸಿ ಪತ್ನಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಐದು ದಿನಗಳ ಬಳಿಕ ಸಂತ್ರಸ್ತ ಮಹಿಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.

ಮಹಿಳೆ ಸಾವಿಗೂ ಮುನ್ನ ಕೊಳ್ಳೇಗಾಲ ಗ್ರಾಮೀಣ ಠಾಣೆ ಪೊಲೀಸರು ವೈದ್ಯರ ಸೂಚನೆ ಮೇರೆಗೆ ಮಖ್ಯಪೇದೆ ಕಳುಹಿಸಿ ಸಂತ್ರಸ್ತೆಯ ಮರಣಪೂರ್ವ ಹೇಳಿಕೆ ದಾಖಲಿಸಿಕೊಂಡಿದ್ದರು. ಅದರಂತೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 341, 354, 323, 504 ಹಾಗೂ 306 ಅಡಿ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಿ, ಸ್ಥಳೀಯ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಆದರೆ, ವಿಚಾರಣಾ ನ್ಯಾಯಾಲಯ, ಮರಣಪೂರ್ವ ಹೇಳಿಕೆ ನೀಡಿದ ಮಹಿಳೆಯು ಮಾನಸಿಕ ಸದೃಢವಾಗಿದ್ದರು ಎಂಬುದನ್ನು ದೃಢೀಕರಿಸಿ ವೈದ್ಯರು ಪ್ರಮಾಣ ಪತ್ರ ನೀಡಿಲ್ಲ. ಹೀಗಾಗಿ, ಮರಣಪೂರ್ವ ಹೇಳಿಕೆ ವಿಶ್ವಾಸಾರ್ಹವಾಗಿಲ್ಲ ಎಂದು ಆರೋಪಿಯನ್ನು 2011ರ ಜೂನ್ 3ರಂದು ಖುಲಾಸೆಗೊಳಿಸಿತ್ತು.

ಈ ಆದೇಶ ರದ್ದುಪಡಿಸುವಂತೆ ಹಾಗೂ ಆರೋಪಿಯನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸುವಂತೆ ಕೋರಿ ಪೊಲೀಸರು ಹೈಕೋರ್ಟ್ ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅಮೈಕಸ್ ಕ್ಯೂರಿಯಾಗಿ ಎನ್.ಎಸ್ ಸಂಪಂಗಿರಾಮಯ್ಯ ನೆರವು ನೀಡಿದ್ದರು. ಇವರ ಸೇವೆಯನ್ನು ಹೈಕೋರ್ಟ್ ಶ್ಲಾಘಿಸಿದೆ.

(CRL.A 1151/2011)


Share It

You cannot copy content of this page