ಬೆಂಗಳೂರು: ಮದುವೆಯಾಗಿ ಒಂದು ದಿನ ಸಂಸಾರ ನಡೆಸಿದ ಬಳಿಕ ಪತಿ ಹಾಗೂ ಕುಟುಂಬ ಸದಸ್ಯರ ವಿರುದ್ಧ ಅತ್ಯಾಚಾರ, ಅಕ್ರಮ ಬಂಧನ, ಕಿರುಕುಳ ಆರೋಪ ಮಾಡಿ ದಾಖಲಿಸಿರುವ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಪತಿ ಹಾಗೂ ಆತನ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ, ಎಂ. ನಾಗಪ್ರಸನ್ನ ಅವರಿದ್ದ ಪೀಠ ಪ್ರಕರಣದ ತನಿಖೆಗೆ ತಡೆ ನೀಡಿದೆ. ಅಲ್ಲದೇ ಪ್ರಕರಣದಲ್ಲಿ ಮಹಿಳೆ ಕಾನೂನು ದುರ್ಬಳಕೆ ಮಾಡಿಕೊಂಡಿರುವಂತೆ ಕಾಣುತ್ತದೆ ಎಂದು ಸಂಶಯ ವ್ಯಕ್ತಪಡಿಸಿದೆ.
ವಿವಾಹದ ದಿನ ಹಾಗೂ ವಿವಾಹವನ್ನು ನೋಂದಣಿ ಮಾಡಿಸಿರುವ ಮರುದಿನ ತೆಗೆಸಿರುವ ಫೋಟೋಗಳನ್ನು ನೋಡಿದರೆ ಮಹಿಳೆ ಸ್ವಇಚ್ಚೆಯಿಂದಲೇ ಮದುವೆಯಾಗಿರುವುದು ಕಂಡುಬರುತ್ತದೆ. ವಿವಾಹ ನೋಂದಣಿಯಲ್ಲೂ ಮಹಿಳೆ ಸಹಿ ಮಾಡಿದ್ದಾರೆ. ಪ್ರೇಮ ವಿವಾಹವಾಗಿ ಒಂದು ದಿನವಷ್ಟೇ ಪತಿಯೊಂದಿಗಿದ್ದು ಅತ್ಯಾಚಾರ ಆರೋಪ ಮಾಡಿದ್ದಾರೆ. ಜತೆಗೆ ಕುಟುಂಬ ಸದಸ್ಯರನ್ನೂ ಪ್ರಕರಣದಲ್ಲಿ ಎಳೆದು ತಂದಿದ್ದಾರೆ. ಮೇಲ್ನೋಟಕ್ಕೆ ಕಾನೂನು ದುರ್ಬಳಕೆ ಮಾಡಿಕೊಂಡಿರುವಂತೆ ಕಾಣುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು, ಪ್ರಕರಣದ ತನಿಖೆಗೆ ತಡೆ ನೀಡಿದೆ.
ಪ್ರಕರಣದ ಹಿನ್ನೆಲೆ: ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಒಟ್ಟಿಗೇ ಕೆಲಸ ಮಾಡುತ್ತಿದ್ದ ಅರ್ಜಿದಾರ (ಪತಿ) ಹಾಗೂ ಪ್ರತಿವಾದಿ (ಪತ್ನಿ) ಕಳೆದ ವರ್ಷಗಳಿಂದ ಪ್ರೀತಿಸುತ್ತಿದ್ದು, 2023ರ ಜನವರಿ 27 ರಂದು ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಮರುದಿನ ವಿವಾಹವನ್ನು ಮಲ್ಲೇಶ್ವರಂನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು. ಅದೇ ದಿನ ಪತ್ನಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿತ್ತು.
ಹುಟ್ಟುಹಬ್ಬದ ದಿನ ಪತ್ನಿಯ ಮೊಬೈಲ್ ಪರಿಶೀಲಿಸಿದಾಗ ಆಕೆಗೆ ವಿವಾಹಪೂರ್ವ ಅಕ್ರಮ ಸಂಬಂಧವಿದ್ದು ಅದನ್ನು ಮುಂದುವರೆಸಿಕೊಂಡು ಬರುತ್ತಿರುವುದು ಬೆಳಕಿಗೆ ಬಂದಿತ್ತು ಎಂದು ಪತಿ ಆರೋಪಿಸಿದ್ದರು. ಜತೆಗೆ ಅಕ್ರಮ ಸಂಬಂಧವಿರಿಸಿಕೊಂಡು ತನ್ನ ಬದುಕು ಹಾಳುಮಾಡಿದ್ದೇಕೆಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ವಿವಾಹ ಅಂತ್ಯಗೊಳಿಸುವ ಬೆದರಿಕೆ ಹಾಕಿ ಪತ್ನಿ ಮನೆಯಿಂದ ಹೊರಹೋಗಿದ್ದರು.
ಒಂದು ತಿಂಗಳ ಬಳಿಕ ಪತ್ನಿ ತನ್ನ ಪತಿ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಅತ್ಯಾಚಾರ, ಅಕ್ರಮ ಬಂಧನ, ಉದ್ದೇಶಪೂರ್ವಕ ನಿಂದನೆ, ಹಲ್ಲೆ, ಕ್ರಿಮಿನಲ್ ಬೆದರಿಕೆ ಆರೋಪಗಳನ್ನು ಮಾಡಿ ವೈಯ್ಯಾಲಿಕಾವಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಪ್ರಕರಣ ರದ್ದು ಕೋರಿ ಪತಿ ಮತ್ತು ಕುಟುಂಬ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.