News

ಸಾಲ ತೀರಿಸಿದ್ದರೂ ಆಸ್ತಿ ದಾಖಲೆ ಹಿಂದಿರುಗಿಸಲು ಮೀನಾಮೇಷ ಎಣಿಸುತ್ತಿದ್ದ ಬ್ಯಾಂಕ್‌ಗೆ 2 ಲಕ್ಷ ದಂಡ

Share It

ಬೆಂಗಳೂರು: ಮಗ ಮೃತಪಟ್ಟ ಬಳಿಕ 85 ವರ್ಷದ ವೃದ್ಧರೊಬ್ಬರು ತಾವೇ ಖುದ್ದಾಗಿ ಮಗನ ಸಾಲ ತೀರಿಸಿದ ನಂತರವೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಹಿಂದಿರುಗಿಸಲು ಮೀನಮೇಷ ಎಣಿಸಿದ ಕೆನರಾ ಬ್ಯಾಂಕ್ ಗೆ ಹೈಕೋರ್ಟ್ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.

ದಾವಣಗೆರೆಯ ಎಂಬಿ ಆಗ್ರೋಫುಡ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ದೇಶಕ ಎಂ.ಬಿ ಸೋಮಶೇಖರ್ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ, ಈ ತೀರ್ಪು ನೀಡಿದೆ.

ಹೈಕೋರ್ಟ್ ತನ್ನ ಆದೇಶದಲ್ಲಿ, ಸೋಮಶೇಖರ್ ಗೌಡ ಅವರ ಪುತ್ರ ಸಾಲ ತೀರಿಸದೆ ಮೃತಪಟ್ಟಿದ್ದಾರೆ. ಈ ವೇಳೆ ಸಂಸ್ಥೆಯ ಕಾನೂನಾತ್ಮಕ ವಾರಸುದಾರರಾದ ಸೋಮಶೇಖರ್ ಗೌಡರು ಸ್ವಯಂಪ್ರೇರಣೆಯಿಂದ ಒನ್-ಟೈಮ್ ಸೆಟಲ್ಮೆಂಟ್ (OTS) ಅಡಿಯಲ್ಲಿ ಸುಮಾರು 19 ಕೋಟಿ ರೂಪಾಯಿಗೂ ಹೆಚ್ಚು ಸಾಲ ತೀರಿಸಿದ್ದಾರೆ. ಸಾಲ ವಾಪಸ್ಸು ಮಾಡಿದ ನಂತರವೂ ಆಸ್ತಿ ದಾಖಲೆಗಳನ್ನು ಹಿಂದಿರುಗಿಸಲು ಬ್ಯಾಂಕ್ ಮುಂದೂಡುತ್ತಾ ಬಂದಿರುವುದು ವಿಪರ್ಯಾಸ ಮತ್ತು ವಿಚಿತ್ರ ಎಂದು ಪೀಠ ಬ್ಯಾಂಕ್ ನ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ.

ಅಲ್ಲದೇ, ಮಗ ಸಾಲ ತೀರಿಸದೆ ಮೃತಪಟ್ಟ ಬಳಿಕ ತಂದೆ ಸಾಲ ತೀರಿಸುವ ಕುರಿತು ಬ್ಯಾಂಕ್ ನೊಂದಿಗೆ ಮಾತುಕತೆ ನಡೆಸಿದ್ದಾರೆ. ಸಾಲದ ಜೊತೆಗೆ 5 ಲಕ್ಷ ಕಾನೂನು ವೆಚ್ಚವನ್ನೂ ಪಾವತಿಸಿದ್ದಾರೆ. ಹೀಗಾಗಿ ಬ್ಯಾಂಕ್ ಗೆ ಮಗ ಅರ್ಥಾತ್ ಮೂಲ ಸಾಲಗಾರ ಇನ್ನಿಲ್ಲ ಎಂಬುದು ತಿಳಿದಿದೆ. ಹಾಗಿದ್ದೂ, ಆಸ್ತಿ ದಾಖಲೆಗಳನ್ನು ಹಿಂದಿರುಗಿಸಲು ಮೀನಮೇಷ ಎಣಿಸುವುದು ಮತ್ತು ಸಾಲ ತೀರಿಸಿರುವ ವ್ಯಕ್ತಿ ಮೂಲ ಸಾಲಗಾರನಲ್ಲ ಎಂಬ ನೆಪ ಮುಂದಿಡುವುದು ಸಮಂಜಸವಲ್ಲ. ಇದು ಖಾಸಗಿ ಲೇವಾದೇವಿದಾರರ ಕ್ರೂರ ನಡವಳಿಕೆಗೆ ಸಮನಾಗಿದೆ ಎಂದು ಹೈಕೋರ್ಟ್ ಟೀಕಿಸಿದೆ.

ಇದೇ ವೇಳೆ ಕೆನರಾ ಬ್ಯಾಂಕ್ ಗೆ 2 ಲಕ್ಷ ದಂಡ ವಿಧಿಸಿರುವ ಹೈಕೋರ್ಟ್ ದಂಡದ ಮೊತ್ತ ಹಾಗೂ ಆಸ್ತಿಯ ಮೂಲ ದಾಖಲೆಗಳನ್ನು ಕೂಡಲೇ ಅರ್ಜಿದಾರರಿಗೆ ಹಿಂದಿರುಗಿಸುವಂತೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ದಾವಣಗೆರೆಯ ಎಂಬೀ ಆಗ್ರೋಫುಡ್ ಇಂಡಸ್ಟ್ರೀಸ್‌ನ ಮಾಲಿಕ ಅನಿಮೇಶ್ ಅವರು ಕೆನರಾ ಬ್ಯಾಂಕ್ ನಿಂದ ಸಾಲ ಪಡೆದಿದ್ದರು. ಸಾಲ ತೀರಿಸದೆ ಆತ್ಮಹತ್ಯೆ ಮಾಡಿಕೊಂಡ ನಂತರ ಬ್ಯಾಂಕ್ ಸಂಸ್ಥೆಯ ವಾರಸುದಾರರಾದ ಸೋಮಶೇಖರ್ ಗೌಡ ಅವರಿಗೆ ಸಾಲ ತೀರಿಸಲು 19.7 ಕೋಟಿ ರೂಪಾಯಿಗಳ OTS ಪ್ರಸ್ತಾ ನೀಡಿತ್ತು. ಅದರಂತೆ ಸಾಲ ತೀರಿಸಿದ್ದರೂ ದಾವಣಗೆರೆಯಲ್ಲಿ ಒತ್ತೆ ಇಟ್ಟಿರುವ ಮನೆ ಮತ್ತು ಜಮೀನಿನ ಮೂಲ ದಾಖಲೆಗಳನ್ನು ಹಿಂದಿರುಗಿಸಲು ಸತಾಯಿಸುತ್ತಿತ್ತು. ದಾಖಲೆಗಳನ್ನು ಹಿಂದಿರುಗಿಸುವಂತೆ ಬ್ಯಾಂಕ್‌ಗೆ ಹೈಕೋರ್ಟ್ ನಿರ್ದೇಶನ ನೀಡಿದಾಗ, ಸೋಮಶೇಖರ್ ಗೌಡ ಅವರು ಮೂಲ ಸಾಲಗಾರರಲ್ಲದ ಕಾರಣ ದಾಖಲೆಗಳನ್ನು ನೀಡಿಲ್ಲ ಎಂದು ಬ್ಯಾಂಕ್ ವಾದಿಸಿತ್ತು.

(WRIT PETITION NO. 7301 OF 2023 (GM-RES))


Share It

You cannot copy content of this page