Columns

ಕಾನೂನಿನ ಅಡಿಯಲ್ಲಿ ಯಾರೆಲ್ಲಾ ಜೀವನಾಂಶಕ್ಕೆ ಅರ್ಹರು: ಇಲ್ಲಿದೆ ಮಾಹಿತಿ

Share It

-ಸಂಗಯ್ಯ ಎಂ ಹಿರೇಮಠ, ವಕೀಲರು, Ph: 8880722220

ಬೆಂಗಳೂರು: ಎಲ್ಲ ಧರ್ಮಿಯರಿಗೆ ಅನ್ವಯವಾಗುವಂತೆ ಅಪರಾಧ ಪ್ರಕ್ರಿಯಾ ಸಂಹಿತೆ (ಸಿ.ಆರ್.ಪಿ.ಸಿ) ಕಲಂ 125 ರ ಅಡಿಯಲ್ಲಿ ಜೀವನಾಂಶಕ್ಕಾಗಿ ಅವಕಾಶ ಕಲ್ಪಿಸಲಾಗಿದೆ. ಜೀವನಾಂಶ ಎಂದರೆ ಒಬ್ಬ ವ್ಯಕ್ತಿಗೆ ಸಾಮಾನ್ಯ ಜೀವನ ಸಾಗಿಸಲು ಬೇಕಾದಂತಹ ಆಹಾರ, ಬಟ್ಟೆ, ಔಷಧಿ, ಆಶ್ರಯ, ವಿದ್ಯಾಭ್ಯಾಸ ಮುಂತಾದವುಗಳು ಅಥವಾ ಅವುಗಳನ್ನು ಪಡೆಯಲು ಅತ್ಯಾವಶ್ಯಕವಾಗಿ ಬೇಕಾದ ಹಣ.

ಜೀವನಾಂಶವನ್ನು ಪಡೆಯಲು ಯಾರು ಅರ್ಹರು? ತನ್ನನ್ನು ತಾನು ಸಂರಕ್ಷಿಸಿಕೊಳ್ಳುವ ಸಾಮರ್ಥ್ಯ ಇಲ್ಲದ, ಅಂದರೆ ತನ್ನ ಸಾಮಾಜಿಕ ಸ್ನಾನಮಾನಕ್ಕನುಗುಣವಾಗಿ ಜೀವನ ಸಾಗಿಸಲು ತನಗೆ ಬೇಕಾದ ಆಹಾರ, ಬಟ್ಟೆ, ಔಷಧಿ, ಆಶ್ರಯ, ವಿದ್ಯಾಭ್ಯಾಸ ಮುಂತಾದವುಗಳಿಗಾಗಿ ಖರ್ಚು ಮಾಡಲು ತನ್ನದೇ ಆದ ಆದಾಯವಿಲ್ಲದ –

(1) ಹೆಂಡತಿ,

(2) ಅಪ್ರಾಪ್ತ (Minor) ಮಗ ಮತ್ತು ಅವಿವಾಹಿತ ಮಗಳು

(3) ವಿಶೇಷ ಚೇತನ ಮಗ-ಮಗಳು; (ಅಪ್ರಾಪ್ತ ಅಥವಾ ವಯಸ್ಕ)

(4) ತಂದೆ – ತಾಯಿ;

ಇವರುಗಳು ಅಪರಾಧಿಕ ಪ್ರಕ್ರಿಯಾ ಸಂಹಿತೆಯಡಿಯಲ್ಲಿ (Criminal Procedure Code ನಡಿಯಲ್ಲಿ) ಜೀವನಾಂಶ ಪಡೆಯಲು ಅರ್ಹರಾಗಿರುತ್ತಾರೆ. ಇಂಥವರಿಗೆ ಜೀವನಾಂಶ ಕೊಡುವ ಬಾಧ್ಯತೆ ಇವರನ್ನು ಸಂರಕ್ಷಿಸುವ ಸಾಮರ್ಥ್ಯವುಳ್ಳ ಪತಿ, ತಂದೆ, ಅಥವಾ ಮಕ್ಕಳದ್ದು ಆಗಿರುತ್ತದೆ.

ಹೆಂಡತಿಯ ಜೀವನಾಂಶದ ಹಕ್ಕು: “ಹೆಂಡತಿ” ಎಂದರೆ ಕಾನೂನಿನನ್ವಯ ವಿವಾಹವಾದ ಮಹಿಳೆ, ಹಿಂದೂ ಮತ್ತು ಕ್ರಿಶ್ಚಿಯನ್ ವಿವಾಹ ಕಾನೂನುಗಳನ್ವಯ ಹಿಂದೂ ಅಥವಾ ಕ್ರಿಶ್ಚಿಯನ್ ಪುರುಷನೊಬ್ಬನು ತನ್ನ ವಿವಾಹಿತ ಮೊದಲ ಹೆಂಡತಿ ಜೀವಂತವಿದ್ದಾಗ ಎರಡನೇ ಹೆಂಡತಿಯನ್ನು ಪಡೆಯುವುದು ಕಾನೂನು ಬಾಹಿರವಾದ್ದರಿಂದ ಅಂಥ ಎರಡನೇ ಹೆಂಡತಿಯಾದ ಹಿಂದೂ ಅಥವಾ ಕ್ರಿಶ್ಚಿಯನ್ ಮಹಿಳೆ ತನ್ನ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಲ್ಲ.

ಆದರೆ, ಮುಸ್ಲಿಂ ಕಾಯ್ದೆಯನ್ವಯ ಮುಸ್ಲಿಂ ಪುರುಷನೊಬ್ಬ ನಾಲ್ಕು ಜನ ಹೆಂಡಂದಿರನ್ನು ಏಕ ಕಾಲದಲ್ಲಿ ಹೊಂದಿರಬಹುದಾದ್ದರಿಂದ ಈ ನಾಲ್ಕೂ ಜನ ಹೆಂಡತಿಯರು ತಮ್ಮ ಪತಿಯಿಂದ ಜೀವನಾಂಶ ಪಡೆಯಲು ಹಕ್ಕುಳ್ಳವರಾಗಿರುತ್ತಾರೆ.

ಹೆಂಡತಿಯು ತನ್ನ ಪತಿಯಿಂದ ಬೇರೆಯಾಗಿ ವಾಸಿಸುತ್ತಿದ್ದಾಗ:- ಮಹಿಳೆಯೊಬ್ಬಳ ಪತಿಯು ಬೇರೆ ಮಹಿಳೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಲ್ಲಿ (ಅಂದರೆ ಬೇರೊಬ್ಬಳನ್ನು ಇಟ್ಟುಕೊಂಡಿದ್ದಲ್ಲಿ) ಅಥವಾ ಎರಡನೇ ಮದುವೆಯಾದಲ್ಲಿ ಅಥವಾ ಆತನು ಆಕೆಯೊಂದಿಗೆ ಕ್ರೂರತನದಿಂದ ವರ್ತಿಸಿದ್ದಲ್ಲಿ ಅಂಥ ಮಹಿಳೆಯು ತನ್ನ ಪತಿಯಿಂದ ಬೇರೆಯಾಗಿ ವಾಸಿಸಿಯೂ ಆತನಿಂದ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿರುತ್ತಾಳೆ. ವಿಚ್ಛೇದಿತ ಮಹಿಳೆಯೂ ಜೀವನಾಂಶಕ್ಕೆ ಅರ್ಹಳು – ತನ್ನ ಪತಿಯಿಂದ ವಿವಾಹ ವಿಚ್ಛೇದನ ಪಡೆದ ಮಹಿಳೆ ಮರುಮದುವೆ ಆಗುವವರೆಗೆ ತನ್ನ ವಿಚ್ಛೇದಿತ ಪತಿಯಿಂದ ಜೀವನಾಂಶ ಪಡೆಯುವ ಹಕ್ಕನ್ನು ಹೊಂದಿರುತ್ತಾಳೆ.

ವಿಚ್ಛೇದಿತ ಮುಸ್ಲಿಂ ಮಹಿಳೆಯ (ಹಕ್ಕುಗಳ ರಕ್ಷಣಾ) ಅಧಿನಿಯಮ 1986ರಡಿಯಲ್ಲಿ ವಿಚ್ಛೇದಿತ ಮುಸ್ಲಿಂ ಮಹಿಳೆಯ ಇದ್ದತ್ ಅವಧಿ ಪೂರ್ಣಗೊಳ್ಳುವುದರೊಳಗಾಗಿ ಆಕೆಯ ವಿಚ್ಛೇದಿತ ಪತಿಯು ಆಕೆಯ ಭವಿಷ್ಯತ್ತಿನ ಜೀವನ ನಿರ್ವಹಣೆಗಾಗಿ ವ್ಯವಸ್ಥೆಯನ್ನು ಮಾಡುವ ಹೊಣೆಗಾರಿಕೆಯುಳ್ಳವನಾಗಿರುತ್ತಾನೆ. 

ಮಕ್ಕಳ ಜೀವನಾಂಶದ ಹಕ್ಕು: ನ್ಯಾಯ ಸಮ್ಮತ ಮತ್ತು ನ್ಯಾಯ ಸಮ್ಮತವಲ್ಲದ ಎರಡೂ ವಿಧದ ಮಕ್ಕಳು 18 ವರ್ಷ ಪೂರ್ತಿಗೊಳಿಸುವವರೆಗೆ ಅಂದರೆ ಪ್ರಾಪ್ತ ವಯಸ್ಕರಾಗುವವರೆಗೆ ಜೀವನಾಂಶವನ್ನು ತಮ್ಮ ತಂದೆಯಿಂದ ಪಡೆಯಲು ಅರ್ಹರು. ಅಪ್ರಾಪ್ತ ಮಗಳು ವಯಸ್ಕಳಾಗುವ ಮೊದಲೇ ವಿವಾಹವಾದಲ್ಲಿ ಆಕೆಯನ್ನು ಪೋಷಿಸುವ ಹೊಣೆ ಆಕೆಯ ಗಂಡನದಾಗುತ್ತದೆ. ಅಲ್ಲದೇ ದೈಹಿಕವಾಗಿ ಅಥವಾ ಮಾನಸಿಕವಾಗಿ ವಿಕಲತೆಯನ್ನು ಹೊಂದಿದ ನ್ಯಾಯ ಸಮ್ಮತ ಹಾಗೂ ನ್ಯಾಯ ಸಮ್ಮತವಲ್ಲದ ಮಕ್ಕಳು ವಯಸ್ಕರಾದ ನಂತರವೂ ಸಹ ತಂದೆಯಿಂದ ಜೀವನಾಂಶವನ್ನು ಪಡೆಯಲು ಹಕ್ಕುಳ್ಳವರಾಗಿರುತ್ತಾರೆ. “ನ್ಯಾಯ ಸಮ್ಮತ’ ಮಕ್ಕಳೆಂದರೆ ಕಾನೂನು ಬದ್ಧವಾಗಿ ಮದುವೆಯಾದ ದಂಪತಿಗಳ ಮಕ್ಕಳು. “ನ್ಯಾಯ ಸಮ್ಮತವಲ್ಲದ ‘ಮಕ್ಕಳೆಂದರೆ ಕಾನೂನು ಬದ್ಧವಾಗಿ ಪರಸ್ಪರ ಮದುವೆಯಾಗದ ಪುರುಷ ಮತ್ತು ಸ್ತ್ರೀ ಪಡೆದ ಮಕ್ಕಳು.

ತಂದೆ-ತಾಯಿಗಳ ಜೀವನಾಂಶದ ಹಕ್ಕು: ತಂದೆ, ತಾಯಿಗಳು, ತಮ್ಮನ್ನು ಸಂರಕ್ಷಿಸುವ ಸಾಮರ್ಥ್ಯವಿದ್ದೂ ಸಂರಕ್ಷಿಸಲು ನಿರಾಕರಿಸಿದ ಅಥವಾ ನಿರ್ಲಕ್ಷಿಸಿದ, ಮಗನಿಂದ ಅಥವಾ ಮಗ ಇಲ್ಲದಿದ್ದಲ್ಲಿ ಮಗಳಿಂದ ಜೀವನಾಂಶ ಪಡೆಯಲು ಅರ್ಹರಾಗಿರುತ್ತಾರೆ.

ಜೀವನಾಂಶ ಹಕ್ಕನ್ನು ಎಲ್ಲಿ, ಹೇಗೆ ಚಲಾಯಿಸಬೇಕು?: ಜೀವನಾಂಶದ ಹಕ್ಕನ್ನು ಚಲಾಯಿಸುವ ವ್ಯಕ್ತಿ ತನ್ನನ್ನು ಸಂರಕ್ಷಿಸಲು ಹೊಣೆಗಾರನಾಗಿರುವ ವ್ಯಕ್ತಿಯ ವಿರುದ್ಧ ಕುಟುಂಬ ನ್ಯಾಯಾಲಯ, ಇಲ್ಲದಲ್ಲಿ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳವರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಜೀವನಾಂಶ ಪಡೆಯಬಹುದಾಗಿದೆ.

ಇಂತಹ ಯಾವ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಲ್ಲಿ ಅರ್ಜಿದಾರಳು(ನು) ತನ್ನ ಎದುರುದಾರ ಗಂಡ/ ತಂದೆ/ ಮಗ/ ಮಗಳೊಂದಿಗೆ ಕೊನೆಯದಾಗಿ ವಾಸವಾಗಿದ್ದಳೋ(ನೋ) ಅಥವಾ ಇಂತಹ ಯಾವ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸುವ ದಿನಾಂಕದಂದು ವಾಸವಾಗಿರುವ(ನೋ) ಆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು.

ನ್ಯಾಯಲಯವು ವಿಚಾರಣೆ ಜರುಗಿಸಿ, ಎದುರುದಾರನ ಆದಾಯ, ಅರ್ಜಿದಾರ ಹಾಗೂ ಎದುರುದಾರ ಇವರುಗಳ ಸಾಮಾಜಿಕ ಸ್ಥಾನಮಾನ; ಅರ್ಜಿದಾರನ(ಳ) ಆದಾಯವೇನಾದರೂ ಇದ್ದಲ್ಲಿ ಅಂತಹ ಆದಾಯ; ಮುಂತಾದವುಗಳನ್ನು ಗಣನೆಗೆ ತೆಗೆದುಕೊಂಡು ಜೀವನಾಂಶದ ಮೊತ್ತವನ್ನು ನಿರ್ಣಯಿಸುತ್ತದೆ. ಜೀವನಾಂಶವನ್ನು ಅರ್ಜಿಯ ದಿನಾಂಕದಿಂದ ಅಥವಾ ಆದೇಶದ ದಿನಾಂಕದಿಂದ ಕೊಡಮಾಡಬಹುದಾಗಿದೆ.


Share It

You cannot copy content of this page