News ⓇJudgements

ವಕೀಲರಿರಲಿ, ನ್ಯಾಯಾಧೀಶರಿರಲಿ ಸಾಲಗಾರ ಸಾಲಗಾರನೇ: ಬ್ಯಾಂಕ್ ವಸೂಲಿಯಿಂದ ರಕ್ಷಣೆ ನೀಡಲಾಗದು

Share It

-ವೇಣುಗೋಪಾಲ್ ಎಸ್.ಜಿ.

ಬೆಂಗಳೂರು: ಸಾಲ ಪಡೆದ ವ್ಯಕ್ತಿ ವಕೀಲನೇ ಆಗಿರಲಿ ಅಥವಾ ಹಾಲಿ ನ್ಯಾಯಮೂರ್ತಿಯೇ ಆಗಿರಲಿ ಸಾಲಗಾರ ಸಾಲಗಾರನೇ. ಹೀಗಾಗಿ ಸಾಲ ವಸೂಲಿಗೆ ಬ್ಯಾಂಕ್ ಮುಂದಾದಾಗ ರಕ್ಷಣೆ ನೀಡಲಾಗದು ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಸಾಲ ವಸೂಲಿಗೆ ಮುಂದಾಗಿರುವ ಬ್ಯಾಂಕ್ ನ ಬಲವಂತದ ಕ್ರಮಗಳಿಂದ ರಕ್ಷಣೆ ಕೋರಿ ಹಿರಿಯ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರರು ಸುಬ್ರಹ್ಮಣ್ಯೇಶ್ವರ ಕೋ-ಆಪರೇಟಿವ್ ಬ್ಯಾಂಕ್ ನಿಂದ ಸಾಲ ಪಡೆದಿದ್ದು ಸಾಲ ಮರುಪಾವತಿಸುವಲ್ಲಿ ಸಾಕಷ್ಟು ವಿಳಂಬ ಮಾಡಿದ್ದಾರೆ. ಬ್ಯಾಂಕ್ ಸಾಲ ವಸೂಲಿಗೆ ಮುಂದಾದ ನಂತರ ಅರ್ಜಿದಾರರು ಹೈಕೋರ್ಟ್ ರಕ್ಷಣೆ ಕೋರಿದ್ದು, ನ್ಯಾಯಾಲಯ ಸಾಲ ಹಿಂದಿರುಗಿಸಲು  ಹಲವು ಅವಕಾಶಗಳನ್ನು ನೀಡಿದೆ. ಸ್ವತಃ ಅರ್ಜಿದಾರರು ನಿಗದಿತ ಸಮಯದಲ್ಲಿ ಸಾಲ ವಾಪಸ್ ನೀಡುವ ಕುರಿತು ಭರವಸೆ ನೀಡಿದ್ದಾರೆ. ಹೀಗೆ ಕಲ್ಪಿಸಿದ ಹಲವಾರು ಅವಕಾಶಗಳ ಹೊರತಾಗಿಯೂ ಸಾಲ ಹಿಂದಿರುಗಿಸದೆ ಮಾತು ತಪ್ಪಿದ್ದಾರೆ.

ಬ್ಯಾಂಕ್ ನಿಂದ ಸಾಲ ಪಡೆದುಕೊಂಡವರು ಸಾಕಷ್ಟು ಸಮಯ ನೀಡಿದ ಬಳಿಕವೂ ಸಾಲವನ್ನು  ಮರುಪಾವತಿಸದೇ ಇದ್ದಾಗ ಸಾಲ ಕೊಟ್ಟ ಬ್ಯಾಂಕ್ ಬಲವಂತವಾಗಿ ಬಾಕಿ ಸಾಲ ವಸೂಲಿಗೆ ಮುಂದಾಗಬಹುದು. ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯ ರಕ್ಷಣೆ ನೀಡಲಾಗದು. ಇನ್ನು ಅರ್ಜಿದಾರರು ವಕೀಲರಾಗಿದ್ದು, ನ್ಯಾಯಾಲಯ ಮುಲಾಜು ತೋರಿಸಿದರೆ ಸಮಾಜದ ಟೀಕೆಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಅರ್ಜಿದಾರರ ಮನವಿ ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ. ಇದೇ ವೇಳೆ ಬ್ಯಾಂಕ್ ತನ್ನ ಬಾಕಿ ವಸೂಲಿಗೆ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲು ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಹೈಕೋರ್ಟ್ ನ ಹಿರಿಯ ವಕೀಲರಾಗಿರುವ ಅರ್ಜಿದಾರರು ಸುಬ್ರಮಣ್ಯೇಶ್ವರ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ 1.50 ಕೋಟಿ ರೂಪಾಯಿ ಸಾಲ ಪಡೆದಿದ್ದರು. 120 ಕಂತುಗಳಲ್ಲಿ ಬ್ಯಾಂಕ್ ಸಾಲ ಬಡ್ಡಿ ಸಹಿತ ಮರುಪಾವತಿ ಮಾಡಬೇಕಿತ್ತು. ಕೋವಿಡ್ ಸಂದರ್ಭದಲ್ಲಿ ಬರಬೇಕಾದ ಹಣ ಬರಲಿಲ್ಲವಾದ್ದರಿಂದ ಆರ್ಥಿಕ ಸಮಸ್ಯೆ ಎದುರಾಗಿ ಸಾಲದ ಕಂತುಗಳು ಬಾಕಿ ಉಳಿದಿದ್ದವು.

ಸಾಲ ಮರುಪಾವತಿಗೆ ಸೂಚಿಸಿ ಹಲವು ಬಾರಿ ನೋಟಿಸ್ ನೀಡಿದ ನಂತರವೂ ಬಾಕಿ ಸಾಲ ಹಾಗೆಯೇ ಉಳಿದಿತ್ತು. ಅಂತಿಮವಾಗಿ ಬ್ಯಾಂಕ್ ಬೇರೆ ದಾರಿ ಕಾಣದೆ ಅರ್ಜಿದಾರರಿಂದ ಬಲವಂತವಾಗಿ ಸಾಲ ವಸೂಲಾತಿ ಪ್ರಕ್ರಿಯೆ ಪ್ರಾರಂಭಿಸಿತ್ತು. ಆಸ್ತಿ ಹರಾಜಿಗೆ ಮುಂದಾಗಿದ್ದ ಬ್ಯಾಂಕ್ ಕ್ರಮ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

(WP 3791/2021)


Share It

You cannot copy content of this page