ದೆಹಲಿ: ವಿವಾಹೇತರ ಸಂಬಂಧದಿಂದ ಜನಿಸಿದ ಮಗುವಿಗೆ ‘ಹಿಂದೂ ವಿವಾಹ ಕಾಯ್ದೆ’ ಪ್ರಕಾರ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ನೀಡುವ ವಿಷಯಕ್ಕೆ ಸಂಬಂಧಿಸಿದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ವಿವಾಹೇತರ ಸಂಬಂಧದಿಂದ ಜನಿಸಿದ ಮಕ್ಕಳಿಗೆ ‘ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 16(3)ರ ಅಡಿ ಹೆತ್ತವರ ಸ್ವಯಾರ್ಜಿತ ಆಸ್ತಿಯ ಮೇಲಷ್ಟೇ ಹಕ್ಕು ಲಭಿಸುತ್ತದೆಯೇ ಅಥವಾ ಪಿತ್ರಾರ್ಜಿತ ಆಸ್ತಿ ಮೇಲೂ ಈ ಮಕ್ಕಳು ಹಕ್ಕು ಪಡೆಯಬಹುದೇ ಎಂಬುದನ್ನು ಸುಪ್ರೀಂ ಕೋರ್ಟ್ ನಿರ್ಧರಿಸಲಿದೆ.
‘ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 16(3) ವ್ಯಾಪ್ತಿಗೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾ. ಡಿ.ವೈ. ಚಂದ್ರಚೂಡ್, ನ್ಯಾ.ಜೆ.ಬಿ. ಪರ್ದಿವಾಲಾ, ನ್ಯಾ. ಮನೋಜ್ ಮಿಶ್ರಾ ಅವರನ್ನೊಳ ಗೊಂಡ ಪೀಠ ತೀರ್ಪು ಕಾಯ್ದಿರಿಸಿದೆ.
ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕೆಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತ್ತು. ‘ಹಿಂದೂ ಉತ್ತರಾಧಿಕಾರ ಕಾಯ್ದೆ’ ಸೆಕ್ಷನ್ 6 ರ ಕುರಿತು ವಿಶ್ಲೇಷಣೆ ನೀಡಿದ್ದ ಸಿಜೆಐ ಚಂದ್ರಚೂಡ್, ‘ಹಿಂದೂ ವಿವಾದ ಕಾಯ್ದೆಯ ಸೆಕ್ಷನ್16 (1) ಹಾಗೂ 16 (2) ನಿಯಮಗಳು ವಿವಾಹೇತರ ಸಂಬಂಧಕ್ಕೆ ಜನಿಸಿದ ಮಗುವಿಗೆ ಪೂರ್ವಿಕರ ಆಸ್ತಿಯ ಮೇಲೆ ಯಾವುದೇ ಹಕ್ಕು ಹೊಂದಲು ಅವಕಾಶ ನೀಡಿಲ್ಲ. ಆದರೆ ಸೆ.16 (3)ರಡಿ ಅಂತಹ ಮಕ್ಕಳಿಗೆ ನ್ಯಾಯಸಮ್ಮತ ಪರಿಹಾರ ನೀಡಬಹುದು ಎಂದು ಹೇಳಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.