ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ ಸಲ್ಲಿಸಿರುವ ಮೇಲ್ಮನವಿ ಬಾಕಿ ಇದೆ ಎಂಬ ಕಾರಣಕ್ಕೆ ಪೆರೋಲ್ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಪೆರೋಲ್ ಕೋರಿ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸದ ಜೈಲು ಅಧಿಕಾರಿಗಳ ನಡೆ ಪ್ರಶ್ನಿಸಿ ಬೆಳಗಾವಿಯ ಅರ್ಜುನ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜು ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಅರ್ಜಿದಾರನ ಮನವಿ ಪುರಸ್ಕರಿಸಿರುವ ಹೈಕೋರ್ಟ್, 15 ದಿನಗಳಲ್ಲಿ ಕಾರಾಗೃಹದ ಅಧಿಕಾರಿಗಳು ಪೆರೋಲ್ ಅರ್ಜಿಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ.
ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದರೂ, ಪೆರೋಲ್ ಮನವಿಯನ್ನು ಪರಿಗಣಿಸಬೇಕು. ಯಾವ ಆಧಾರದಲ್ಲಿ ಮನವಿ ಸಲ್ಲಿಸಲಾಗಿದೆ ಎಂಬುದನ್ನು ಪರಿಶೀಲಿಸಬೇಕು. ಸೂಕ್ತ ಕಾರಣ ಇರದಿದ್ದರೆ ಮಾತ್ರ ತಿರಸ್ಕರಿಸಬೇಕು. ಇಲ್ಲವಾದರೆ ಅರ್ಜಿ ಪುರಸ್ಕರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಹೈಕೋರ್ಟ್ ಜೈಲು ಪ್ರಾಧಿಕಾರಗಳಿಗೆ ಸ್ಪಷ್ಟವಾಗಿ ಸೂಚಿಸಿದೆ.
ಅಲ್ಲದೇ, ಹೈಕೋರ್ಟ್ ನ ಈ ಆದೇಶವನ್ನು ಎಡಿಜಿಪಿಗೆ (ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ) ತಲುಪಿಸಬೇಕು. ಅವರು ಎಲ್ಲ ಕಾರಾಗೃಹಳಿಗೆ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು 2018ರ ಏಪ್ರಿಲ್ 6ರಿಂದ ಜೈಲಿನಲ್ಲಿದ್ದು, ಅನಿವಾರ್ಯ ಕಾರಣಗಳಿಂದಾಗಿ 2022ರ ಡಿಸೆಂಬರ್ 7ರಂದು ಪೆರೋಲ್ ಕೋರಿ ಜೈಲು ಅಧಿಕಾರಿಗಳೆ ಮನವಿ ಸಲ್ಲಿಸಿದ್ದರು. ಆದರೆ ಜೈಲು ಅಧಿಕಾರಿಗಳು ಅರ್ಜಿದಾರ ನ್ಯಾಯಾಲಯದಲ್ಲಿ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿ ಹಾಗೂ ಜಾಮೀನು ಅರ್ಜಿ ಬಾಕಿ ಇವೆ ಎಂಬ ಕಾರಣಕ್ಕೆ ಪೆರೋಲ್ ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರ ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕಾನೂನು ರೀತಿಯಲ್ಲಿ ಅರ್ಜಿದಾರರು ತಮಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿದ್ದಾರೆ. ಆದರೆ, ಮೇಲ್ಮನವಿ ಬಾಕಿ ಇದೆ ಎಂಬ ಕಾರಣಕ್ಕೆ ಜೈಲು ಅಧಿಕಾರಿಗಳು ಪೆರೋಲ್ ನಿರಾಕರಿಸಿದ್ದಾರೆ. ಆದ್ದರಿಂದ ನ್ಯಾಯಾಲಯ ಪೆರೋಲ್ ತಿರಸ್ಕರಿಸಿರುವ ‘ಹಿಂಬರಹ’ ರದ್ದುಗೊಳಿಸಬೇಕು ಎಂದು ಕೋರಿದ್ದರು.
ಸರ್ಕಾರದ ಪರ ವಕೀಲರು, ಕರ್ನಾಟಕ ಕಾರಾಗೃಹ ನಿಯಮಗಳು-1974 ರ ನಿಯಮ 191 ರ ಅಡಿ ನ್ಯಾಯಾಲಯದ ಮುಂದೆ ಪ್ರಕರಣ ಬಾಕಿ ಇದ್ದರೆ, ಪೆರೋಲ್ ಸಲ್ಲಿಸಲು ಅನರ್ಹರಾಗುತ್ತಾರೆ. ಜತೆಗೆ 2022ರ ಮಾರ್ಚ್ 16 ರಂದು ಈ ನಿಯಮಕ್ಕೆ ತಿದ್ದುಪಡಿ ಮಾಡಿರುವಂತೆ ಜಾಮೀನು ಅರ್ಜಿ ಬಾಕಿ ಇದ್ದರೂ ಪೆರೋಲ್ ಕೇಳಲು ಅನರ್ಹರು ಎಂಬ ನಿಯಮ ಜಾರಿಯಾಗಿದೆ ಎಂದು ವಾದಿಸಿದ್ದರು.
(WP No.201808/2023)