ಲೇಖನ: ಮಲ್ಲಿಕಾರ್ಜುನ ಟಿ ಹೊನ್ನಾಳಿ, ವಕೀಲರು, 9845051233
ಬೆಂಗಳೂರು: ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲು ಇನ್ನು ಮುಂದೆ ಹಾಳೆಯ ಒಂದು ಬದಿಯಲ್ಲಷ್ಟೇ ಟೈಪ್ ಮಾಡುವುದು ಸೇರಿದಂತೆ ಅರ್ಜಿ ಸಲ್ಲಿಕೆಗೆ ಹೈಕೋರ್ಟ್ ಕೆಲ ನಿಯಮಗಳನ್ನು ಜಾರಿ ಮಾಡಿದೆ.
ಈ ಕುರಿತಂತೆ ಹೈಕೋರ್ಟ್ ರಿಜಿಸ್ಟ್ರಾರ್ (ನ್ಯಾಯಾಂಗ) ಎಂ. ಚಂದ್ರಶೇಖರ್ ರೆಡ್ಡಿ ಅವರು ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಸುತ್ತೋಲೆ ಹೊರಡಿಸಿದ್ದಾರೆ. ಅದರಂತೆ ಅರ್ಜಿ ಸಲ್ಲಿಕೆಯ ನಿಯಮಗಳು ಆಗಸ್ಟ್ 15 ರಿಂದ ಜಾರಿಗೆ ಬರಲಿವೆ.
ಕರ್ನಾಟಕ ಹೈಕೋರ್ಟ್ ನಿಯಮಗಳು, 1959 ರ ಅಧ್ಯಾಯ XII ನ ನಿಯಮ 2 ಅನ್ನು ಹೈಕೋರ್ಟ್ ಪೂರ್ಣ ಪೀಠವು ತಿದ್ದುಪಡಿ ಮಾಡಿದ್ದು, ಅದರಂತೆ, ಮೇಲ್ಮನವಿ(appeal), ಮನವಿ(petition), ಅಫಿಡವಿಟ್(affidavit, ಮಧ್ಯಂತರ ಅರ್ಜಿ(interlocutory application) ಅಥವಾ ಇತರೆ ಮೆಮೊರಾಂಡಮ್ ಅಥವಾ ದಾಖಲೆಯನ್ನು ಎ4 ಸೈಜ್ ಪೇಪರ್ ಹಾಳೆಯ ಒಂದು ಬದಿಯಲ್ಲಿ ಮಾತ್ರ ಮುದ್ರಿಸುವಂತೆ ಸೂಚಿಸಲಾಗಿದೆ. A-4 ಸೈಜ್ ನ (30.5 cm ಉದ್ದ ಮತ್ತು 21.5 cm ಅಗಲ) ದೃಢವಾದ ಮತ್ತು ಬಾಳಿಕೆ ಬರುವ ಬಿಳಿ ಹಾಳೆಯು ಕನಿಷ್ಠ 75 gsm ತೂಕ ಇರಬೇಕು. ಪೇಪರ್ ನ ಮೇಲೆ ಶೀರ್ಷಿಕೆ ಫಾಂಟ್ ಗಾತ್ರ-14″ ದಪ್ಪ ಇರಬೇಕು. ಉಳಿದ ಪಠ್ಯದ ಫಾಂಟ್ ಗಾತ್ರ 12″ ಇರಬೇಕು. ಎಡ ಅಂಚಿನಲ್ಲಿ 1.75 ಇಂಚು, ಬಲ ಅಂಚಿನಲ್ಲಿ 1 ಇಂಚು, ಮೇಲಿನ ಅಂಚು 1.5 ಇಂಚು ಮತ್ತು ಕೆಳಗಿನ ಅಂಚು 1.5 ಇಂಚು ಖಾಲಿ ಇರಬೇಕು. ಟೈಪಿಂಗ್ ಸಾಲುಗಳ ನಡುವೆ 1.5 ಸಾಲಿನ ಅಂತರ ಇರಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಅಲ್ಲದೇ, ಅರ್ಜಿಯ ಪುಟಗಳನ್ನು ಅನುಕ್ರಮವಾಗಿ ಜೋಡಿಸಿ ಬುಕ್ ವೈಸ್ ರೀತಿಯಲ್ಲಿ ಹೊಲಿಯಬೇಕು. ಮೇಲ್ಮನವಿ, ಅರ್ಜಿ ಅಥವಾ ಅರ್ಜಿಯೊಂದಿಗೆ ಸಲ್ಲಿಸಲಾದ ತೀರ್ಪುಗಳು ಅಥವಾ ಯಾವುದೇ ಆದೇಶಗಳ ಪ್ರಮಾಣೀಕೃತ ಪ್ರತಿಗಳು ಹಸ್ತಪ್ರತಿಯಲ್ಲಿದ್ದರೆ, ಮೇಲಿನ ವಿಶೇಷಣಗಳಿಗೆ ಅನುಗುಣವಾಗಿ ಟೈಪ್ ಮಾಡಿದ ಪ್ರತಿಗಳನ್ನು ಪ್ರಮಾಣೀಕೃತ ಪ್ರತಿಗಳೊಂದಿಗೆ ಒದಗಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ನಿಯಮಗಳು ಆಗಸ್ಟ್ 16 ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬರಲಿದ್ದು, ನಿಯಮ ಪಾಲಿಸದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಹೈಕೋರ್ಟ್ ಸುತ್ತೋಲೆ ಸ್ಪಷ್ಟಪಡಿಸಿದೆ.
ಇದಲ್ಲದೆ, ವಕಾಲತ್ ನಾಮ, ಶೀರ್ಷಿಕೆ ಪುಟ, ಆರ್ಡರ್ ಶೀಟ್ ಮತ್ತು ಅರ್ಜಿಗಳ ಜೊತೆಗೆ ಸಲ್ಲಿಸಬೇಕಾದ ಇತರ ನಮೂನೆಗಳು ತಿದ್ದುಪಡಿ ಮಾಡಿದ ನಿಯಮಗಳಲ್ಲಿ ಹೇಳಲಾದ ವಿಶೇಷಣಗಳ ಪ್ರಕಾರ ಇರಬೇಕು. 2023 ರ ಆಗಸ್ಟ್ 16 ರಿಂದ ಈ ನಿಯಮಗಳನ್ನು ಹೊರತುಪಡಿಸಿ ಬೇರೆ ಯಾವುದೇ ರೂಪದಲ್ಲಿ ಪೇಪರ್‌ಗಳನ್ನು ಸಲ್ಲಿಸಿದರೆ, ಅದನ್ನು ಕಛೇರಿಯು ಸ್ವೀಕರಿಸುವುದಿಲ್ಲ ಎಂದು ಸೂಚಿಸಲಾಗಿದೆ.
ಹೈಕೋರ್ಟ್ ಸುತ್ತೋಲೆ: https://karnatakajudiciary.kar.nic.in/noticeBoard/hclc-circular-27072023.pdf