ನ್ಯಾಯಿಕ ವಿವೇಚನಾಧಿಕಾರ ಬಳಸುವುದು ಹೇಗೆಂಬುದನ್ನು ಕಲಿಯಲು ನ್ಯಾಯಾಂಗ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಜಿಲ್ಲಾ ನ್ಯಾಯಾಧೀಶರೊಬ್ಬರಿಗೆ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
ತಮ್ಮ ವಿರುದ್ಧ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಹಾಗೂ ತರಬೇತಿ ಪಡೆಯುವಂತೆ ನೀಡಿರುವ ನಿರ್ದೇಶನವನ್ನು ರದ್ದುಪಡಿಸುವಂತೆ ಕೋರಿ ನ್ಯಾಯಾಧೀಶೆ ಅಶ್ವಿನಿ ವಿಜಯ್ ಶಿರಿಯಣ್ಣವರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎ.ಎಸ್. ಬೋಪಣ್ಣ ಹಾಗು ನ್ಯಾ. ಪಂಕಜ್ ಮಿತ್ತಲ್ ಅವರಿದ್ದ ಪೀಠ ಮೇ.19 ರಂದು ಈ ಆದೇಶ ಮಾಡಿದೆ.
ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ, ಹೈಕೋರ್ಟ್ ನ ಅಭಿಪ್ರಾಯಗಳು ಹಾಗೂ ತರಬೇತಿ ಪಡೆಯುವಂತೆ ನೀಡಿರುವ ನಿರ್ದೇಶನ ಸಮರ್ಥನೀಯವಲ್ಲ. ನ್ಯಾಯಾಧೀಶರ ವೃತ್ತಿ ಮತ್ತು ಗೌರವದ ಮೇಲೆ ಪರಿಣಾಮ ಬೀರುವಂತಹ ಇಂತಹ ಆದೇಶವನ್ನು ಅವರ ವಿವರಣೆಗೆ ಅವಕಾಶ ನೀಡದೆ ಜಾರಿಗೆ ತರಬಾರದು ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಹೈಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ಬದಿಗೆ ಸರಿಸಿರುವ ಸುಪ್ರೀಂ ಕೋರ್ಟ್, ನ್ಯಾಯಾಂಗ ಅಕಾಡೆಮಿಗೆ ತೆರಳಿ ತರಬೇತಿ ಪಡೆಯಲು ನೀಡಿದ್ದ ನಿರ್ದೇಶವನ್ನು ರದ್ದುಪಡಿಸಿದೆ.
ಹಿನ್ನೆಲೆ: ವರದಕ್ಷಿಣೆ ಕಿರುಕುಳದಿಂದಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಪ್ರಕರಣದಲ್ಲಿ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗಳಿಗೆ ಜಾಮೀನು ನೀಡಿದ್ದರು. ಜಾಮೀನು ರದ್ದು ಕೋರಿ ಹೈಕೋರ್ಟ್ ಗೆ ಮೃತಳ ಸೋದರ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಜಿಲ್ಲಾ ನ್ಯಾಯಾಧೀಶರು ಆರೋಪಿಗಳಿಗೆ ಜಾಮೀನು ನೀಡುವ ಮುನ್ನ ನ್ಯಾಯಿಕ ವಿವೇಚನಾಧಿಕಾರವನ್ನು ಸರಿಯಾಗಿ ಚಲಾಯಿಸಿಲ್ಲ. ವರದಕ್ಷಿಣೆ ಕಿರುಕುಳದಂತಹ ಘೋರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡಿರುವ ಆದೇಶ ವಕ್ರ ಮತ್ತು ವಿಚಿತ್ರವಾಗಿದೆ ಎಂದು 2022 ಫೆಬ್ರವರಿ 4 ರಂದು ನೀಡಿದ್ದ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತ್ತು.
ಇದೇ ವೇಳೆ ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದುಪಡಿಸಿದ್ದ ಹೈಕೋರ್ಟ್, ಘೋರ ಅಪರಾಧ ಪ್ರಕರಣಗಳಲ್ಲಿ ಜಾಮೀನು ನೀಡುವ ಮುನ್ನ ನ್ಯಾಯಿಕ ವಿವೇಚನಾಧಿಕಾರ ಬಳಸುವುದು ಹೇಗೆಂಬುದನ್ನು ಕಲಿಯಲು ನ್ಯಾಯಾಧೀಶರು ನ್ಯಾಯಾಂಗ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿ ಎಂದು ನಿರ್ದೇಶಿಸಿತ್ತು.
ಸುಪ್ರೀಂಕೋರ್ಟ್ ಆದೇಶದ ಲಿಂಕ್: https://main.sci.gov.in/supremecourt/2022/6357/6357_2022_7_16_44596_Order_19-May-2023.pdf