News ⓇJudgements

ವರದಕ್ಷಿಣೆ ಸಾವು: ಆರೋಪಿಗಳಿಗೆ ಕೊಟ್ಟಿದ್ದ ಜಾಮೀನು ರದ್ದು

Share It

ವರದಕ್ಷಿಣೆ ಸಾವು ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಗಳಿಗೆ ನೀಡಿದ್ದ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.

ಇದೇ ವೇಳೆ ಘೋರ ಅಪರಾಧ ಪ್ರಕರಣಗಳಲ್ಲಿ ಜಾಮೀನು ನೀಡುವ ಮುನ್ನ ನ್ಯಾಯಾಂಗ ವಿವೇಚನೆಯನ್ನು ಬಳಸುವುದು ಹೇಗೆಂಬುದನ್ನು ನ್ಯಾಯಾಧೀಶರು ಅರಿಯಬೇಕಿದೆ. ಹೀಗಾಗಿ, ಆರೋಪಿಗಳಿಗೆ ಜಾಮೀನು ನೀಡಿರುವ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ತರಬೇತಿಗಾಗಿ ನ್ಯಾಯಾಂಗ ಅಕಾಡೆಮಿಗೆ ಕಳುಹಿಸಿ ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಸುನಿಲ್ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ಧ ಪೀಠ ಈ ಮಹತ್ವದ ತೀರ್ಪು ನೀಡಿದೆ. ಇದೇ ವೇಳೆ ಪ್ರಕರಣದ ಆರೋಪಿಗಳಾದ ಮಂಜು (ಪತಿ) ಹಾಗೂ ಶಿವಮ್ಮ (ಅತ್ತೆ)ಗೆ ನೀಡಿದ್ದ ಜಾಮೀನು ರದ್ದುಪಡಿಸಿದೆ.

ಪ್ರಕರಣದ ಹಿನ್ನೆಲೆ: (ಪ್ರಾಸಿಕ್ಯೂಷನ್ ಆರೋಪಿಸಿರುವಂತೆ) ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕಿನ ಸುನಿತಾ ಹಾಗೂ ಮಂಜು ಮದುವೆ 2020ರ ಫೆ.16ರಂದು ನಡೆದಿತ್ತು. ಸುನಿತಾ ಪೋಷಕರು ಸಾಕಷ್ಟು ಒಡವೆ ಹಾಗೂ 3.5 ಲಕ್ಷ ಹಣ ನೀಡಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಎರಡು ತಿಂಗಳ ಬಳಿಕ ಮನೆ ನಿರ್ಮಾಣಕ್ಕಾಗಿ 6 ಲಕ್ಷ ರೂಪಾಯಿ ತರುವಂತೆ ಮಂಜು ಪತ್ನಿಗೆ ಒತ್ತಾಯಿಸಿದ್ದ. ಸುನಿತಾಳ ಅಕ್ಕನಿಗೆ ಪೋಷಕರು ಸಹಾಯ ಮಾಡಿದ ಹಿನ್ನೆಲೆಯಲ್ಲಿ ತಮ್ಮ ಮನೆಯ ನಿರ್ಮಾಣಕ್ಕೂ ಹಣ ತರುವಂತೆ ಜಗಳ ತೆಗೆದು ತವರಿಗೆ ಕಳುಹಿಸಿದ್ದ.

ಈ ವಿಚಾರವಾಗಿ ಸಂಬಂಧಿಕರು ಪಂಚಾಯ್ತಿ ನಡೆಸಿದ್ದರು. ನಂತರ ಪೋಷಕರು ಮನೆಗೆ ಟೈಲ್ಸ್ ಹಾಕಿಸಲು ನೆರವು ನೀಡುವ ಭರವಸೆ ನೀಡಿ, ಸುನಿತಾಳನ್ನು ಗಂಡನ ಮನೆಗೆ ಕಳುಹಿಸಿದ್ದರು. ಆದರೆ, ಬೆಳೆ ಕೈಕೊಟ್ಟಿದ್ದರಿಂದ ಭರವಸೆಯಂತೆ ಆರ್ಥಿಕ ನೀಡಲು ಸಾಧ್ಯವಾಗಿರಲಿಲ್ಲ. ಈ ವಿಚಾರವಾಗಿ ಸುನಿತಾಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದ ಪತಿ ಮಂಜು ತಂದೆಯ ಆಸ್ತಿಯಲ್ಲಿ ಪಾಲು ಕೇಳುವಂತೆ ಪೀಡಿಸುತ್ತಿದ್ದ. 2021ರ ಫೆ.14ರಂದು ಸುನಿತಾ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದರು. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಅಂತ್ಯಕ್ರಿಯೆ ನೆರವೇರಿದ ಬಳಿಕ ಸುನಿತಾ ಸಾವಿಗೆ ಮುನ್ನವೇ ತನ್ನ ತವರಿನ ನೆರೆಮನೆಯವರ ಮೊಬೈಲ್ ಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು ಬೆಳಕಿಗೆ ಬಂದಿತ್ತು. ಪತಿ ಮಂಜು ಮೊಬೈಲ್ ನಿಂದಲೇ ಕಳುಹಿಸಿದ್ದ ವಾಯ್ಸ್ ಮೆಸೇಜ್ ನಲ್ಲಿ ತನಗೆ ಏನಾದರೂ ತೊಂದರೆಯಾದರೆ ಅದಕ್ಕೆ ತನ್ನ ಪತಿ ಮಂಜು, ಅತ್ತೆ ಶಿವಮ್ಮ ಹಾಗೂ ಮಾವ ರಾಜಪ್ಪರೇ ಜವಾಬ್ದಾರರು ಎಂದಿತ್ತು. ಈ ಮೆಸೇಜ್ ಸಿಕ್ಕ ಬಳಿಕ ಸುನಿತಾ ಸೋದರ ಸುನಿಲ್ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು.

ದೂರಿನ ಮೇರೆಗೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 498ಎ (ಗಂಡನ ಮನೆಯವರ ಕಿರುಕುಳ) 304ಬಿ (ವರದಕ್ಷಿಣೆ ಸಾವು) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3, 4ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2021ರ ಏಪ್ರಿಲ್ ನಲ್ಲಿ ಜಾಮೀನು ನೀಡಿತ್ತು. ವಿಚಾರಣಾ ನ್ಯಾಯಾಲಯ ನೀಡಿದ ಜಾಮೀನನ್ನು ರದ್ದುಪಡಿಸುವಂತೆ ಕೋರಿ ಸುನಿಲ್ ಸಿಆರ್ಪಿಸಿ ಸೆಕ್ಷನ್ 439(2) ಹಾಗೂ 482ರ ಅಡಿಯಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಹೈಕೋರ್ಟ್ ತೀರ್ಪು: ವರದಕ್ಷಿಣೆ ಸಾವಿನಂತಹ ಘೋರ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ಮುನ್ನ ವಿಚಾರಣಾ ನ್ಯಾಯಾಲಯವು ನ್ಯಾಯಾಂಗ ವಿವೇಚನೆ ಸರಿಯಾಗಿ ಬಳಸಿಲ್ಲ. ವಕ್ರ ಮತ್ತು ವಿಚಿತ್ರವಾದ ಆದೇಶಗಳನ್ನು ಹೊರಡಿಸಿದೆ. ವಿಚಾರಣಾ ನ್ಯಾಯಾಲಯ ತನ್ನ ಆದೇಶದಲ್ಲಿ, ಆರೋಪಿಗಳ ವಿರುದ್ಧ ಜೀವಾವಧಿ ಅಥವಾ ಮರಣದಂಡನೆ ವಿಧಿಸುವಂತಹ ಆರೋಪಗಳಿಲ್ಲ. ಮುಖ್ಯವಾಗಿ ಸುನೀತಾ ಧ್ವನಿ ಮುದ್ರಿಕೆ ನೆರೆಮನೆಯವರ ಬಳಿ ಸಿಕ್ಕ ನಂತರವೇ ದೂರು ದಾಖಲಿಸಲಾಗಿದೆ. ಮೊಬೈಲ್ ಆಕೆಯದ್ದೇ ಅಥವಾ ಬೇರೆಯವರದ್ದೇ ಎಂಬುದನ್ನು ಹಾಗೂ ವಾಯ್ಸ್ ಮೆಸೇಜ್ ನಲ್ಲಿರುವ ಧ್ವನಿ ಸುನಿತಾರದ್ದೋ ಅಥವಾ ಬೇರೆಯವರದ್ದೋ ಎಂಬುದನ್ನು ವಿಚಾರಣೆ ವೇಳೆ ಗುರುತಿಸಬೇಕಾಗುತ್ತದೆ. ಹೀಗಾಗಿ, ಆರೋಪಿಗಳಿಗೆ ಜಾಮೀನು ನೀಡಬಹುದು ಎಂದಿದೆ.

ಇದೇ ವೇಳೆ ಪ್ರಾಸಿಕ್ಯೂಷನ್ ಪರ ಅಭಿಯೋಜಕರು ಧ್ವನಿ ಸುನಿತಾರದ್ದೇ ಆಗಿದೆ, ಆರೋಪಿಗಳಿಗೆ ಜಾಮೀನು ನೀಡಬಾರದು. ನೀಡಿದರೆ ಸಾಕ್ಷ್ಯ ನಾಶಪಡಿಸಬಹುದು ಎಂಬ ಅಂಶಗಳನ್ನು ಉಲ್ಲೇಖಿಸಿದರೂ ಅದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಮದುವೆ ಆರಂಭದಲ್ಲಿ ವರದಕ್ಷಿಣೆ ವಿಚಾರವಾಗಿ ಕಲಹ ಏರ್ಪಟ್ಟು ಪಂಚಾಯ್ತಿ ನಡೆಸಿರುವ, ಸುನಿತಾ ಪೋಷಕರು ಹಣ ನೀಡುವುದಾಗಿ ಭರವಸೆ ಕೊಟ್ಟಿದ್ದ ವಿಚಾರಗಳನ್ನು ತಿಳಿಸಿದ್ದರೂ ವಿಚಾರಣಾ ನ್ಯಾಯಾಲಯ ಪರಿಗಣಿಸದೆ ಆರೋಪಿಗಳಿಗೆ ಜಾಮೀನು ನೀಡಿರುವುದು ವಿಚಿತ್ರವಾಗಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟು, ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದುಪಡಿಸಿದೆ.

ಅಲ್ಲದೇ, ಘೋರ ಪ್ರಕರಣಗಳಲ್ಲಿ ಜಾಮೀನು ನೀಡುವ ಮುನ್ನ ನ್ಯಾಯಾಂಗ ವಿವೇಚನಾಧಿಕಾರ ಬಳಸುವ ಕುರಿತು ನ್ಯಾಯಾಧೀಶರಿಗೆ ಅರಿವು ಮೂಡಿಸುವ ಅಗತ್ಯವಿದ್ದು, ಅವರನ್ನು ತರಬೇತಿಗಾಗಿ ನ್ಯಾಯಾಂಗ ಅಕಾಡೆಮಿಗೆ ಕಳುಹಿಸುವಂತೆ ನಿರ್ದೇಶಿಸಿದೆ.
(CRL.P 4234/2021)


Share It

You cannot copy content of this page