ಪತಿಯಿಂದ ದೂರವಾದ ಪತ್ನಿಗೆ ‘ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ ಕಾಯ್ದೆ-2005’ರ ಅಡಿ ನಿಗದಿಪಡಿಸಿದ ಜೀವನಾಂಶವನ್ನು ‘ಅಪರಾಧ ದಂಡ ಪ್ರಕ್ರಿಯಾ ಸಂಹಿತೆ’ (ಸಿಆರ್ಪಿಸಿ) ಸೆಕ್ಷನ್ 127ರ ಅಡಿ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಪತ್ನಿಗೆ ನೀಡುತ್ತಿದ್ದ ಜೀವನಾಂಶವನ್ನು 1 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಿಸಿ ಕಲಘಟಗಿಯ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ಆದೇಶ ಹಾಗೂ ಈ ಆದೇಶವನ್ನು ಪುರಸ್ಕರಿಸಿದ್ದ ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶ ರದ್ದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ: 2001ರಲ್ಲಿ ವಿವಾಹವಾಗಿದ್ದ ದಂಪತಿ ನಡುವೆ ಕಲಹ ಉಂಟಾಗಿದ್ದರಿಂದ 2009ರಲ್ಲಿ ಪತ್ನಿ ಜೀವನಾಂಶ ಕೋರಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 12ರ ಅಡಿ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ನ್ಯಾಯಾಲಯ 1 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು. 2015ರಲ್ಲಿ ಜೀವನಾಂಶ ಹೆಚ್ಚಿಸಲು ಕೋರಿ ಸಿಆರ್ಪಿಸಿ ಸೆಕ್ಷನ್ 127ರ ಅಡಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪರಿಗಣಿಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ಜೀವನಾಂಶವನ್ನು ಒಂದು ಸಾವಿರದಿಂದ ಐದು ಸಾವಿರಕ್ಕೆ ಹೆಚ್ಚಿಸಿ 2018ರಲ್ಲಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ, ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕ್ರಿಮಿನಲ್ ರಿವಿಷನ್ ಪಿಟಿಷನ್ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯ ಕೂಡ 2019ರಲ್ಲಿ ಮ್ಯಾಜಿಸ್ಟ್ರೇಟ್ ಆದೇಶವನ್ನೇ ಎತ್ತಿಹಿಡಿದಿತ್ತು. ಆ ಬಳಿಕ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ತೀರ್ಪು: ಪೀಠ ತನ್ನ ತೀರ್ಪಿನಲ್ಲಿ, ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ ಕಾಯ್ದೆ-2005ರ ಸೆಕ್ಷನ್ 12ರ ಅಡಿ ಪತ್ನಿ ಜೀವನಾಂಶ ಕೇಳಿ ಅರ್ಜಿ ಸಲ್ಲಿಸಿದ್ದಾರೆಯೇ ಹೊರತು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ 125ರ ಅಡಿಯಲ್ಲಿ ಅಲ್ಲ. ಸಿಆರ್ಪಿಸಿ ಸೆಕ್ಷನ್ 125ರ ಅಡಿ ಪರಿಹಾರ ಕೇಳಿ ಅರ್ಜಿ ಸಲ್ಲಿಸಿದ್ದಾಗ ಮಾತ್ರ ಸಿಆರ್ಪಿಸಿ ಸೆಕ್ಷನ್ 127ರ ಅಡಿ ಜೀವನಾಂಶ ಪರಿಷ್ಕರಣೆಗೆ ಕೋರಬಹುದು. ಆದರೆ, ಪತ್ನಿಯು ಮೊದಲಿಗೆ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 12ರ ಅಡಿ ಜೀವನಾಂಶ ಕೋರಿರುವುದರಿಂದ ಅದನ್ನು ಪರಿಷ್ಕರಿಸಲು ಅಥವಾ ಹೆಚ್ಚಿಸಲು ಸಿಆರ್ಪಿಸಿ ಸೆಕ್ಷನ್ 127ರ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಆದ್ದರಿಂದ, ಸಿಆರ್ಪಿಸಿ ಸೆಕ್ಷನ್ 127ರ ಅಡಿ ಜೀವನಾಂಶ ಮೊತ್ತ ಹೆಚ್ಚಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಹಾಗೂ ಜಿಲ್ಲಾ ಪ್ರಧಾನ ನ್ಯಾಯಾಲಯ ನೀಡಿರುವ ಆದೇಶ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ, ಜೀವನಾಂಶ ಹೆಚ್ಚಿಸಿ ಹೊರಡಿಸಿರುವ ಆದೇಶವನ್ನು ರದ್ದುಪಡಿಸಿದೆ. ಇದೇ ವೇಳೆ, ಪ್ರಕರಣದ ಮಹಿಳೆಯು ಸೂಕ್ತ ಕಾನೂನಿನ ಅಡಿ ಪರಿಹಾರ ಕಂಡುಕೊಳ್ಳಲು ಈ ಆದೇಶ ಅಡ್ಡಿಯಾಗದು ಎಂದೂ ಸ್ಪಷ್ಟಪಡಿಸಿದೆ.
(CRL.P 101378/2019)