News

ಅಡ್ವೊಕೇಟ್ ಜನರಲ್, ಎಎಜಿ ಹುದ್ದೆಗೆ ರಾಜೀನಾಮೆ ನೀಡಿದ ಹಿರಿಯ ವಕೀಲರು

Share It

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡ ಬೆನ್ನಲ್ಲೇ ಅಡ್ವೊಕೇಟ್‌ ಜನರಲ್‌ ಹುದ್ದೆಗೆ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ರಾಜೀನಾಮೆ ಸಲ್ಲಿಸಿದ್ದಾರೆ.

ಅದೇ ರೀತಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಗಳಾಗಿದ್ದ ಡಾ. ಎಂ. ಅರುಣ ಶ್ಯಾಮ್‌ ಹಾಗೂ ಧ್ಯಾನ್‌ ಚಿನ್ನಪ್ಪ ಕೂಡ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ವೇಳೆ ಪ್ರಭುಲಿಂಗ ನಾವದಗಿ ಅವರನ್ನು ಅಡ್ವೊಕೇಟ್‌ ಜನರಲ್‌ ಹುದ್ದೆಗೆ ನೇಮಿಸಲಾಗಿತ್ತು. ಅಂತೆಯೇ ಎಎಜಿಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಬಿಎಸ್ವೈ ಸಿಎಂ ಸ್ಥಾನದಿಂದ ಇಳಿದು, ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ನಂತರವೂ ಇವರು ಹುದ್ದೆಯಲ್ಲಿ ಮುಂದುವರೆದಿದ್ದರು.

ಇದೀಗ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಧಿಕಾರವಾಧಿ ಕೊನೆಗೊಂಡು, ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸುತ್ತಿರುವ ಹಿನ್ನೆಲೆಯಲ್ಲಿ ಎಜಿ ಹಾಗೂ ಎಎಜಿಗಳು ರಾಜೀನಾಮೆ ಸಲ್ಲಿಸಿದ್ದಾರೆ.

ಕಾನೂನು ಹೋರಾಟಗಳಲ್ಲಿ ರಾಜ್ಯ ಸರ್ಕಾರವನ್ನು ರಕ್ಷಿಸುವಲ್ಲಿ ಎಜಿ, ಎಎಜಿಗಳ ಪಾತ್ರ ಮಹತ್ವದ್ದಾಗಿರುತ್ತದೆ. ಹೀಗಾಗಿ, ಈ ಉನ್ನತ ಹುದ್ದೆಗಳಿಗೆ ಸರ್ಕಾರ ತಮಗೆ ಬೇಕಾದ ಪರಿಣಿತ ಹಿರಿಯ ವಕೀಲರನ್ನೇ ಎಜಿ, ಎಎಜಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತದೆ. ಎಜಿ ಹಾಗೂ ಎಎಜಿಗಳು ಸರ್ಕಾರವನ್ನು ನ್ಯಾಯಾಲಯಗಳಲ್ಲಿ, ಹೆಚ್ಚಾಗಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳಲ್ಲಿ ತಮ್ಮ ಸರ್ಕಾರದ ನಡೆಗಳನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಾರೆ. ಸರ್ಕಾರಕ್ಕೆ ಅಗತ್ಯ ಕಾನೂನು ಸಲಹೆಗಳನ್ನು ನೀಡುತ್ತಾರೆ.  


Share It

You cannot copy content of this page