ಸಂತ್ರಸ್ತ ವ್ಯಕ್ತಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದ್ದಾನೆ ಎಂಬ ಒಂದೇ ಕಾರಣಕ್ಕೆ ಎಲ್ಲ ಅಪರಾಧ ಕೃತ್ಯಗಳಿಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸುವುದು ಸರಿಯಲ್ಲ ಎಂದಿರುವ ಹೈಕೋರ್ಟ್, ಅಪರಾಧ ಜಾತಿ ಮೇಲಿನ ದಾಳಿಯಾಗಿದ್ದರೆ ಮಾತ್ರ ಈ ಕಾಯ್ದೆಯನ್ನು ಅನ್ವಯಿಸಬಹುದು ಎಂದು ಆದೇಶಿಸಿದೆ.
ಅಪರಾಧ ಕೃತ್ಯಕ್ಕೆ ಜಾತಿ ಕಾರಣವಾಗಿರದಿದ್ದರೆ, ನಡೆದಿರುವ ಅಪರಾಧ ಮತ್ತು ಕಾರಣವಾದ ವಿಷಯಗಳ ಆಧಾರದಲ್ಲಿ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಬೇಕೇ ವಿನಃ ಸಂತ್ರಸ್ತ ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂಬ ಕಾರಣಕ್ಕೆ ಎಸ್ಸಿ-ಎಸ್ಟಿ ಕಾಯ್ದೆಯ ಸೆಕ್ಷನ್ 3ರ ಅಡಿ (ದೌರ್ಜನ್ಯಕ್ಕೆ ಶಿಕ್ಷೆ) ಪ್ರಕರಣ ದಾಖಲಿಸಬಾರದು ಎಂದು ಸ್ಪಷ್ಟಪಡಿಸಿದೆ.
ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಅಸ್ಪೃಷ್ಯತೆ ತಡೆಗಟ್ಟಲು, ನಿರ್ಮೂಲನೆ ಮಾಡಲು ಮತ್ತು ಸಮುದಾಯದ ಮೇಲಿನ ದಾಳಿಯನ್ನು ತಡೆಗಟ್ಟಲು ಜಾರಿಗೆ ತರಲಾಗಿದೆ. ಹೀಗಾಗಿ ಜಾತಿ ಆಧಾರಿತ ದಾಳಿ ಅಥವಾ ದ್ವೇಷದಿಂದ ನಡೆಸಿದ ಅಪರಾಧ ಕೃತ್ಯಕ್ಕೆ ಅಷ್ಟೇ ಎಸ್ಸಿ-ಎಸ್ಟಿ ದೌರ್ಜನ್ಯ ಅಡಿ ಪ್ರಕರಣ ದಾಖಲಿಸಬೇಕು ಮತ್ತು ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಬೇಕು. ಈ ವೇಳೆ ಆರೋಪವನ್ನು ಕೂಲಂಕಷಾಗಿ ಪರಿಶೀಲಿಸಬೇಕು. ಸುಖಾಸುಮ್ಮನೆ ಆರೋಪ ಹೊರಿಸಬಾರದು. ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಎಸ್ಸಿ-ಎಸ್ಟಿ ಸಮುದಾಯವನ್ನು ಜಾತಿ ಆಧಾರಿತ ದಾಳಿಯಿಂದ ರಕ್ಷಣೆ ಮಾಡಲಿಕ್ಕಷ್ಟೇ ಕಾಯ್ದೆ ಬಳಸಬೇಕು. ಈ ವಿಚಾರದಲ್ಲಿ ತನಿಖಾಧಿಕಾರಿ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ವ್ಯಕ್ತಿಗಳಿಬ್ಬರ ನಡುವೆ ಯಶವಂತಪುರ ಹೋಬಳಿಯಲ್ಲಿರುವ ಜಮೀನು ಮಾಲಿಕತ್ವಕ್ಕೆ ಸಂಬಂಧಿಸಿದಂತೆ ವ್ಯಾಜ್ಯವಿದ್ದು, ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ವ್ಯಾಜ್ಯದ ಹಿನ್ನೆಲೆಯಲ್ಲಿ ವಾದಿ ಪ್ರತಿವಾದಿ ವಿರುದ್ಧ ಹಲಸೂರು ಗೇಟ್ ಠಾಣೆ ಪೊಲೀಸರಿಗೆ 2020ರಲ್ಲಿ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಪ್ರತಿವಾದಿ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(1) (ಎಫ್) 3(1) (ಜಿ) ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 172, 173 ಅಡಿ ಎಫ್ಐಆರ್ ದಾಖಲಿಸಿದ್ದರು. ಹಾಗೆಯೆ, ನಗರದ 70ನೇ ಹೆಚ್ಚುವರಿ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಈ ಹಿನ್ನೆಲೆನಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರತಿವಾದಿ ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ಪ್ರಕರಣ ಯಾವುದೇ ಇಬ್ಬರು ನೆರೆಹೊರೆ ಜಮೀನು ಮಾಲಿಕರ ನಡುವೆ ಉದ್ಬವಿಸಬಹುದಾಗ ವ್ಯಾಜ್ಯದಂತೆ ಇದೆ. ಪ್ರಕರಣವನ್ನು ಸಿವಿಲ್ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬಹುದಿತ್ತು. ಹಾಗಿದ್ದೂ, ಎಸ್ಸಿ-ಎಸ್ಟಿ ಕಾಯ್ದೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಪೀಠ ಅಭಿಪ್ರಾಯಪಟ್ಟು ಪ್ರಕರಣವನ್ನು ರದ್ದುಪಡಿಸಿದೆ.
(CRL.P 80/21)